ಕೋವಿಡ್ ವ್ಯಾಕ್ಸಿನ್ ಕೊರತೆಯಿದ್ದು, ಆದಷ್ಟು ಬೇಗ ಲಸಿಕೆ ಸರಬರಾಜು ಮಾಡಿ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಸರ್ಕಾರಕ್ಕೆ ಒತ್ತಾಯ

ಶ್ರವಣಬೆಳಗೊಳ:  ಕೊರೊನ ಸೋಂಕಿತರ ಸಂಖ್ಯೆ  ಹೆಚ್ಚಾಗುತ್ತಿದ್ದು, ತಾಲೂಕಿನಲ್ಲಿ ಕೋವಿಡ್ ವ್ಯಾಕ್ಸಿನ್ ಕೊರತೆಯಿದೆ. ಆದಷ್ಟು ಬೇಗ ಲಸಿಕೆ ಸರಬರಾಜು ಮಾಡಿ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಸರ್ಕಾರವನ್ನು ಒತ್ತಾಯ ಮಾಡಿದರು.
      ಪಟ್ಟಣದ ಯಾತ್ರಿ ನಿವಾಸ ಎ, ಬಿ, ಡಿ, ಬ್ಲಾಕ್ ಸಂಕೀರ್ಣಗಳಲ್ಲಿ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಗೆ (ಸಿಸಿಸಿ ಕೇಂದ್ರ) ಶುಕ್ರವಾರ ಭೇಟಿ ನೀಡಿ, ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಸಹಕಾರದೊಂದಿಗೆ ಈ ಬಾರಿಯೂ ಶ್ರವಣಬೆಳಗೊಳದಲ್ಲಿ ಮೊದಲ ಹಂತದಲ್ಲಿ ಸುಮಾರು 500 ಜನರಿಗೆ ಸಿಸಿಸಿ ಕೇಂದ್ರ ತೆರೆಯಲಾಗಿದೆ. ಅವಶ್ಯಕತೆ ಬಿದ್ದರೆ ಎರಡನೇ ಹಂತದಲ್ಲಿ ಇನ್ನೂ 500 ಜನರಿಗೆ ಅವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದ್ದು, ತಾಲೂಕಿನ ಜನತೆಯ ಪರವಾಗಿ ಸ್ವಾಮೀಜಿಯವರಿಗೆ ಭಕ್ತಿಪೂರ್ವಕ ವಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
     ಉದ್ಯೋಗ ಅರಸಿ ನಗರ ಪ್ರದೇಶಗಳಲ್ಲಿ ವಾಸವಿದ್ದವರು ಲಾಕ್ ಡೌನ್ ನಂತರ ಗ್ರಾಮಗಳಿಗೆ ವಾಪಸಾಗಿದ್ದರಿಂದ ಗ್ರಾಮೀಣ ಭಾಗದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಇದೊಂದು ಸಾಂಕ್ರಾಮಿಕ ರೋಗವಾಗಿರುವುದರಿಂದ ಮನೆಯಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿದರೆ ತಕ್ಷಣ ಅವರನ್ನು ಕೋವಿಡ್ ಕೇರ್ ಸೆಂಟರ್ ಗೆ (ಸಿಸಿಸಿ ಕೇಂದ್ರ) ದಾಖಲಿಸಿ. ಇಲ್ಲದಿದ್ದರೆ ಮನೆಯಲ್ಲಿ ಪ್ರತಿಯೊಬ್ಬರಿಗೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ ಎಂದು ಮನವಿ ಮಾಡಿದರು.
        ಸಿಸಿಸಿ ಕೇಂದ್ರಕ್ಕೆ  ಬರುವ  ಪ್ರತಿಯೊಬ್ಬರಿಗೂ ಉತ್ತಮ ಸೌಲಭ್ಯ ಕಲ್ಪಿಸಲಾಗಿದ್ದು, ಊಟ, ಉಪಹಾರ, ಬಿಸಿನೀರು, ಔಷದೋಪಚಾರ ಸೇರಿದಂತೆ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಲಾಗಿದೆ. ಡಾ. ಬಿ.ಆರ್.ಯುವರಾಜ್ ರವರ ನೇತೃತ್ವದಲ್ಲಿ ಸುಮಾರು 12 ಜನ ಆರೋಗ್ಯ ಇಲಾಖೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇರುವವರನ್ನು ತಾಲೂಕು ಅಥವಾ ಜಿಲ್ಲಾ ಕೋವಿಡ್ ಕೇಂದ್ರಗಳಿಗೆ ಕರೆದೊಯ್ಯಲು 2 ಆಂಬುಲೆನ್ಸ್ ವ್ಯವಸ್ಥೆ ಇದೆ ಎಂದು ತಿಳಿಸಿದರು.
     ಅಲ್ಲದೇ ಕಂದಾಯ ನಿರೀಕ್ಷಕ ಕೆ.ಪಿ.ರಮೇಶ್ ರವರ ನೇತೃತ್ವದಲ್ಲಿ ಕಂದಾಯ ಇಲಾಖೆಯ 18 ಜನ ಸಿಬ್ಬಂದಿ, ಪಿಡಿಒ ನಾಗೇಶ್ ರವರ ನೇತೃತ್ವದಲ್ಲಿ 5 ಜನ ಸಿಬ್ಬಂದಿ, ತಾಲೂಕು ಬಿಸಿಎಂ ಅಧಿಕಾರಿ ಪುಟ್ಟಸ್ವಾಮಿ ನೇತೃತ್ವದಲ್ಲಿ 6 ಜನ ಸಿಬ್ಬಂದಿ ಹಾಗೂ ಶ್ರೀ ಜೈನ ಮಠ ಆಡಳಿತ ಮಂಡಳಿಯ ಹುಚ್ಚೇಗೌಡ ನೇತೃತ್ವದಲ್ಲಿ 4 ಜನ ಸಿಬ್ಬಂದಿ ನಿರಂತರ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
       ಗ್ರಾಮೀಣ ಕಾರ್ಯಪಡೆ ಸಿಬ್ಬಂದಿಗಳು ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಹೋಮ್ ಐಸೋಲೇಶನ್ ನಲ್ಲಿ ಇರುವವರಿಗೆ ಅನಾನುಕೂಲವಿದ್ದರೆ ಅಂತವರನ್ನು ತಕ್ಷಣ ಸಿಸಿಸಿ ಕೇಂದ್ರಗಳಿಗೆ ದಾಖಲಾಗುವಂತೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
      ಈ ಸಂದರ್ಭದಲ್ಲಿ ತಹಸೀಲ್ದಾರ್ ಜೆ.ಬಿ.ಮಾರುತಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ತಾಲೂಕು ಪಂಚಾಯಿತಿ ಇ.ಒ. ಸುನಿಲ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮನಾಥ್, ಗ್ರಾಮ ಪಂಚಾಯಿತಿ ಸದಸ್ಯ ಎಸ್.ಎಂ.ಲಕ್ಷ್ಮಣ್, ಡಾ. ನರೇಂದ್ರ ಬಾಬು, ಗ್ರಾಮ ಲೆಕ್ಕಾಧಿಕಾರಿಗಳಾದ ನವೀನ್, ಸುಧೀರ್, ರಾಜುಪ್ರೇಮ್ ಕುಮಾರ್, ವಿಜಯಕುಮಾರ್, ಮಂಜುನಾಥ್, ಚೇತನ್ ಪೈ, ಗ್ರಾಮ ಪಂಚಾಯಿತಿ ಸಿಬ್ಬಂದಿ ಕುಮಾರ್, ಅತೀಕ್ ಮುಂತಾದವರಿದ್ದರು.

Post a Comment

Previous Post Next Post