ಇಂದಿನಿಂದ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಿಕೆ: ಡಾ. ಕೆ.ಸಿ. ನಾರಾಯಣಗೌಡ

 ಮಂಡ್ಯ :  ಮಂಡ್ಯ ಜಿಲ್ಲೆಯಲ್ಲಿ ಇವತ್ತು 55 ಸಾವಿರಕ್ಕೂ ಹೆಚ್ಚಾಗಿ ಲಸಿಕೆಯನ್ನು 45 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ತಿಳಿಸಿದರು.

  ಅವರು ಇಂದು ಮದ್ದೂರಿನ ಮರಿಯಮ್ಮ ಶಾಲೆಯಲ್ಲಿ ಕೋವಿಡ್ ಲಸಿಕಾ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.

  ಇಂದು ಬಂದಿರುವ ಲಸಿಕೆಯನ್ನು ಪ್ರಯೋಗಿಸಲಾಗುತ್ತಿದೆ, ಈಗಾಗಲೇ ಬಂದಿರುವ ಲಸಿಕೆಯು ಮುಕ್ತಾಯವಾದ ನಂತರ ಇನ್ನೂ ಹೆಚ್ಚಾಗಿ ಲಸಿಕೆ ನೀಡುವಂತಹ ಕಾರ್ಯ ಕರ್ನಾಟಕ ಸರ್ಕಾರದಿಂದ ಆಗುತ್ತದೆ ಎಂದು ತಿಳಿಸಿದರು.

   ಇಂದು ಮದ್ದೂರು ತಾಲೂಕಿನಲ್ಲಿ ಜಿಲ್ಲಾಧಿಕಾರಿ, ಶಾಸಕರಾದ ಡಿಸಿ ತಮ್ಮಣ್ಣ, ಆರೋಗ್ಯಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಕೋವಿಡ್ ಲಸಿಕೆಯನ್ನು ಪ್ರಯೋಗಿಸಲಾಗುತ್ತಿದೆ ಎಂದರು.

   45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿ ಅರ್ಧ ಗಂಟೆಗಳ ಕಾಲ ಅವರನ್ನು ನಿರೀಕ್ಷಣಾ ಕೊಠಡಿಯಲ್ಲಿ ಇರಿಸಲಾಗುತ್ತದೆ. ನಂತರ ಅವರಿಗೆ ಯಾವುದೇ ರೀತಿಯ ತೊಂದರೆಯ ಲಕ್ಷಣಗಳು ಕಂಡು ಬರದಿದ್ದಲ್ಲಿ ಅವರನ್ನು ಕಳುಹಿಸಲಾಗುತ್ತದೆ ಎಂದರು.

  ಲಸಿಕೆ ಪಡೆದವರಲ್ಲಿ ಯಾವುದೇ ರೀತಿಯ ತಲೆಸುತ್ತು, ಜ್ವರ ಇತರೆ ಲಕ್ಷಣಗಳು ಕಂಡುಬಂದಲ್ಲಿ ಅವರನ್ನು ಶೀಘ್ರವೇ ಮತ್ತಷ್ಟು ಪರೀಕ್ಷೆಗೊಳಪಡಿಸಲಾಗುತ್ತದೆ ಎಂದರು.

  ಇಂದು 55 ಸಾವಿರಕ್ಕೂ ಹೆಚ್ಚಾಗಿ ಲಸಿಕೆಯನ್ನು ನೀಡಿ ನಾಳೆ ಇದಕ್ಕೂ ಹೆಚ್ಚು ಲಸಿಕೆ ನೀಡುವಂತಹ ಕಾರ್ಯವಾಗುತ್ತದೆ ಎಂದರು.

  ಈ ಸಂದರ್ಭದಲ್ಲಿ ಮದ್ದೂರು ಶಾಸಕರಾದ ಡಿ.ಸಿ.ತಮ್ಮಣ್ಣ, ಜಿಲ್ಲಾಧಿಕಾರಿ ಎಸ್. ಅಶ್ವತಿ,ಆರೋಗ್ಯಧಿಕಾರಿ ಧನಂಜಯ್, ಜಿಲ್ಲಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ದಿವ್ಯ ಪ್ರಭು,  ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Post a Comment

Previous Post Next Post