: ಕೊಣನೂರು ಹೋಬಳಿಯ ತರಿಗಳಲೆ ಗ್ರಾಮ ಪಂಚಾಯಿತಿಯ ಹೊನಗಾನಹಳ್ಳಿ ಗ್ರಾಮದ ಕೆರೆಗೆ ಹೊಂದಿಕೊಂಡಂತೆ ಇದ್ದ ಸಂಪೂರ್ಣ ಶಿಥಿಲಗೊಂಡಿದ್ದ ಕಲ್ಯಾಣಿಯನ್ನು ಗುರುತಿಸಿ ಗ್ರಾಮ ಪಂಚಾಯಿತಿಯವರು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸುತ್ತಿರುವುದು.
ರಾಮನಾಥಪುರ;- ಕೊಣನೂರು ಹೋಬಳಿಯ ತರಿಗಳಲೆ ಗ್ರಾಮ ಪಂಚಾಯಿತಿಯ ಹೊನಗಾನಹಳ್ಳಿ ಗ್ರಾಮದ ಕೆರೆಗೆ ಹೊಂದಿಕೊಂಡಂತೆ ಇದ್ದ ಸಂಪೂರ್ಣ ಶಿಥಿಲಗೊಂಡಿದ್ದ ಕಲ್ಯಾಣಿಯನ್ನು ಗುರುತಿಸಿ ಗ್ರಾಮ ಪಂಚಾಯಿತಿಯವರು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸುತ್ತಿರುವುದು ಗ್ರಾಮಸ್ಥರಲ್ಲಿ ಸಂತಸ ತಂದಿದೆ.
ಹೊನಗಾನಹಳ್ಳಿ ಗ್ರಾಮದ ಕೆರೆಯು ಒಟ್ಟು ೭.೫ ಎಕರೆ ವಿಸ್ತೀರ್ಣ ಹೊಂದಿದ್ದು ಅದರಲ್ಲಿ ೫೦-೫೦ ಅಳತೆಯಲ್ಲಿ ಕಲ್ಯಾಣಿಯನ್ನು ಬಹಳ ಸುಂದರವಾಗಿ ಒಂದು ತಿಂಗಳಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಕಲ್ಯಾಣಿಯನ್ನು ೧೦ ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸಿದ್ದಾರೆ.
ಗ್ರಾಮಪಂಚಾಯತಿಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಕೂಲಿ ಕೆಲಸದಲ್ಲಿ ತೊಡಗಿಸಿಕೊಂಡ ಕಾರ್ಮಿಕ ಬಂಧುಗಳು ಹಾಗೂ ವೈಯಕ್ತಿಕ ಆಸಕ್ತಿ ತೋರಿಸಿ ಕಲ್ಯಾಣಿಯನ್ನು ಅಭಿವೃದ್ಧಿಪಡಿಸುತ್ತಿರುವ ಆ ಭಾಗದ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಾಥ್ ರವರು ಹಗಲಿರುಳು ಶ್ರಮವಹಿಸಿ ಈ ಕಾರ್ಯ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಇದೇ ರೀತಿ ಎಲ್ಲಾ ಗ್ರಾ.ಪಂ ಗಳ ವ್ಯಾಪ್ತಿಯ ಕೆರೆಗಳಲ್ಲೂ ಈ ರೀತಿ ಮಾಡುವ ಮೂಲಕ ಜಲಮೂಲಗಳನ್ನು ಸಂರಕ್ಷಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಬೇಕಿದೆ.
ಪೂರ್ವದಲ್ಲಿ ಕೆರೆ ಕಟ್ಟೆ ಕಟ್ಟಿಸಿ, ಅರವಟ್ಟಿಗೆಗಳನ್ನು ಇಡಿಸಿ ಜನಗಳಿಗೆ ಅನುಕೂಲಮಾಡಿಕೊಡುತ್ತಿದ್ದರು. ಈಗ ನಮ್ಮ ಗ್ರಾಮದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಕಲ್ಯಾಣಿಯನ್ನು ನಿರ್ಮಿಸುತ್ತಿರುವುದು ಬಹಳ ಸಂತಸ ತಂದಿದೆ ಎನ್ನುತ್ತಾರೆ ಗ್ರಾಮಸ್ಥರು.