ಭಾನುವಾರ ಬೆಳಿಗ್ಗೆ, ಇನ್ನೂ ಗಾಢ ನಿದ್ದೆಯಲ್ಲಿದ್ದೆ. ಜಂಗಮವಾಣಿಯ ಸದ್ದಿಗೆ ಎಚ್ಚರವಾಯ್ತು, ಕರೆ ಸ್ವೀಕರಿಸಿದೆ. ಆ ಕಡೆಯಿಂದ ಒಬ್ಬರು ಡಾಕ್ಟ್ರು ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮ ಇಂದು ನಿಮ್ಮ ಆರೋಗ್ಯ ಕೇಂದ್ರದ ವ್ಯಾಪ್ತಿಯ ಹಳ್ಳಿಗಳಲ್ಲಿ, ಇನ್ನೊಂದೆರಡು ಗಂಟೆಯಲ್ಲಿ ತಂಡ ನಿಮ್ಮನ್ನು ತಲುಪುತ್ತದೆ ಎಂದರು. ಮಾತಲ್ಲೇ ಕರೆ ಮಾಡಿದ್ದು ನಾನು ಎಂ ಬಿ ಬಿ ಎಸ್ ಪದವಿ ಪಡೆದ ಹಿಮ್ಸ್ ಕಾಲೇಜಿನ ನನ್ನ ಪ್ರೊಫೆಸರ್ ಎಂಬುದು ಅರ್ಥವಾಯಿತು. ಸರಿ ಸರ್ ಬನ್ನಿ ಎಲ್ಲಾ ತಯಾರು ಮಾಡುವೆ ಎಂದೆ.
ಭಾನುವಾರ , ಎಲ್ಲರೂ ರಜೆ ಎಂದು ತಮ್ಮ ಪಾಡಿಗೆ ತಾವು ಇರುವ ದಿನ . ತಕ್ಷಣ ಆ ಹಳ್ಳಿಗಳಿಗೆ ಸಂಬಂಧಿಸಿದ ನಮ್ಮ ಸಿಬ್ಬಂಧಿ ಮತ್ತು ಗ್ರಾಮ ಪಂಚಾಯ್ತಿಯವರಿಗೆ ಕರೆ ಮಾಡಿ ಏನೇನು ಸಿದ್ಧತೆ ಮಾಡಿಕೊಳ್ಳಬೇಕು ತಿಳಿಸಿದೆ. ನಾನೂ ಎದ್ದು ಬೇಗ ಬೇಗ ತಯಾರಾದೆ.
ತಂಡ ಬರುವಷ್ಟರಲ್ಲಿ ಎಲ್ಲಾ ಸಿದ್ಧತೆ ಪೂರ್ಣಗೊಂಡು ಎಲ್ಲಾ ಸಿಬ್ಬಂಧಿ ಕೆಲಸಕ್ಕೆ ಸಜ್ಜಾದರು. ನೂರಾರು ಕೋವಿಡ್ ಪ್ರಕರಣಗಳು ಕಂಡುಬಂದಿದ್ದ ಅಂಗಡಿಹಳ್ಳಿ ನಮ್ಮ ಮೊದಲ ಆಯ್ಕೆಯಾಗಿತ್ತು. ಬಹಳಷ್ಟು ಬುಡಕಟ್ಟು ಜನರೇ ವಾಸಿಸುವ ಗ್ರಾಮ ಈ ಬಾರಿ ಕೋವಿಡ್‌ಗೆ ತುತ್ತಾಗಿ ಜನ ಚಿತ್ರಹಿಂಸೆ ಅನುಭವಿಸಿದ್ದರು. ಹಾಗಾಗಿ ಅದೇ ಗ್ರಾಮ ಮೊದಲ ಆದ್ಯತೆ ಆಯ್ತು. ಪಂಚಾಯ್ತಿ ಸಿಬ್ಬಂಧಿ, ನಮ್ಮ ಆಶಾ ಕಾರ್ಯಕರ್ತೆ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆ ಬಾಗಿಲಿಗೆ ಹೋಗಿ ಜನರನ್ನು ಪರೀಕ್ಷೆಗೆ ಜನರ ಮನವೊಲಿಸಿ ಕರೆತರುತ್ತಿದ್ದರು. ಗ್ರಾಮಪಂಚಾಯ್ತಿ ಸದಸ್ಯರು ಸಾಲಾಗಿ ಜನರನ್ನು ನಿಲ್ಲಿಸುವ ಜವಾಬ್ದಾರಿ ವಹಿಸಿದ್ದರು, ನಾವು ಪರೀಕ್ಷೆ ಚಿಕಿತ್ಸೆಯ ಕಡೆ ಗಮನ ವಹಿಸಿದ್ದೆವು. ಕಸ ವಿಲೇವಾರಿ ಗಾಡಿಯ ಮೂಲಕ ಮೈಕಿಂಗ್ ಮಾಡಿಸಿ ಜನರನ್ನು ಪರೀಕ್ಷೆಗೆ ಕರೆ ತರುವ ಕೆಲಸವೂ ಸಾಗಿತ್ತು. ಸ್ಥಳೀಯ ಮಾಧ್ಯಮದವರು ವರದಿ ತಯಾರು ಮಾಡಿಕೊಂಡು ಹೋದರು.
ಎಲ್ಲರ ಪ್ರಯತ್ನದಿಂದ ಜನ ಪರೀಕ್ಷೆಗೆ ಸ್ವಯಂಪ್ರೇರಿತರಾಗಿ ಹೆಚ್ಚಿನ ಜನಸಂಖ್ಯೆಯಲ್ಲಿ ಮುಂದೆ ಬಂದರು. ಜನ ಜಾಸ್ತಿ ಆದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ನಮಗೆ ತಲೆ ನೋವಾಯ್ತು. ಪರೀಕ್ಷೆಗೆ ಒಳಗಾದ ರೋಗಿಯೇ ಮೊದಲಾಗಿ ಪಟ್ಟಿ ಮತ್ತು ವೃತ್ತ ಹಾಕಿ ಜನರನ್ನು ಆ ಪಟ್ಟಿ ದಾಟದಂತೆ ವೃತ್ತದ ಒಳಗೆ ನಿಲ್ಲುವಂತೆ ಸೂಚಿಸಿದ. ಊರಿನ ಕೆಲ ಪ್ರಜ್ಞಾವಂತ ಜನ ಸ್ವಯಂ ಸೇವಕರಂತೆ ಮಾಸ್ಕ್ ಸಾಮಾಜಿಕ ಅಂತರದ ಜವಾಬ್ದಾರಿ ವಹಿಸಲು ನಾವು ಪರೀಕ್ಷೆ ಚಿಕಿತ್ಸೆ ಅಂಶಗಳ ಬಗೆಗೆ ಹೆಚ್ಚಿನ ಗಮನ ಕೊಟ್ಟೆವು.
ಆಗ ತಾನೇ ಹನ್ನೊಂದು ತಿಂಗಳು ಮಗುವಿನ ತಾಯಿಯ ಫಲಿತಾಂಶ ಪಾಸಿಟೀವ್ ಬರಲು ಮನೆಯಲ್ಲಿ ಇನ್ನೂ ಮೂವರು ಮಕ್ಕಳು ಇದ್ದು ಆಕೆಯನ್ನು ಸಿಸಿಸಿಗೆ ಕಳುಹಿಸಲು ವ್ಯವಸ್ಥೆ ಮಾಡಬೇಕಾಯ್ತು. ನಾನು ಅದರ ಬಗೆಗೆ ಗಮನ ಹರಿಸಿದ್ದೆ. ನೂರಾರು ಸಂಖ್ಯೆಯಲ್ಲಿ ಜನ ಪರೀಕ್ಷೆಗೆ ಜಮಾಯಿಸಿದ್ದರು. ಸಾಲಾಗಿಯೇ ಪರೀಕ್ಷೆಗೆ ನಿಂತಿದ್ದರೂ ಸಾಮಾಜಿಕ ಅಂತರ ಸರಿಯಾಗಿ ಕಾದುಕೊಂಡಿರಲ್ಲಿಲ್ಲ. ಅದರ ಮೇಲ್ವಿಚ್ಚಾರಣೆ ಮಾಡುತ್ತಿದ್ದ ಜನನಾಯಕರೂ ಯಾವುದೋ ಕೆಲಸದ ಕರೆ ಮೇಲೆ ಊರೊಳಗೆ ಹೋಗಿದ್ದಾರೆ. ಅಷ್ಟರಲ್ಲಿ ಬೇರೊಂದು ಕಾರ್ಯಕ್ರಮಕ್ಕಾಗಿ ಬಂದಿದ್ದ ಮಾಧ್ಯಮದವರ ಗುಂಪೊಂದು ನಮ್ಮ ಬಳಿ ಧೌಡಾಯಿಸಿ ಬಂತು. ಬಹಳಷ್ಟು ಪರಿಚಿತ ಮುಖಗಳೇ ಇದ್ದರಿಂದ ನಾನು ಹೋಗಿ ಮಾತಾಡಿಸಿದೆ. ಸಾಮಾಜಿಕ ಅಂತರದ ಬಗ್ಗೆ ಪ್ರಶ್ನಿಸಿದರು, ಮತ್ತೆ ಪಟ್ಟಿಯೊಳಗೆ ನಿಲ್ಲುವಂತೆ ಹೇಳಿದೆವು, ಅವರು ನನ್ನಿಂದ ನಮ್ಮ ಪ್ರೊಫೆಸರ್ ಇಂದ ಕಾರ್ಯಕ್ರಮದ ಬಗೆಗೆ ಮಾಹಿತಿ ಪಡೆದು ಹೋದರು. ಅಂದು ಸರಿ ಸುಮಾರು ಮೂರು ಗಂಟೆಯವರೆಗೂ ಅಂಗಡಿಹಳ್ಳಿಯಲ್ಲಿ ನೂರಕ್ಕೂ ಹೆಚ್ಚು ಜನರಿಗೆ ಪರೀಕ್ಷೆ ಮಾಡಿ ಪಾಸಿಟೀವ್ ಬಂದವರನ್ನು ಸಿಸಿಗೆ ಕಳುಹಿಸಲಾಯಿತು.
ನಮಗೆ ಅಂದು ಇನ್ನೂ ಒಂದು ಹಳ್ಳಿ ಮುಗಿಸಬೇಕಿತ್ತು. ಬೇಗ ಊಟ ಮುಗಿಸಿ ಸಂಜೆ ಐದು ಗಂಟೆಯವರೆಗೂ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಿದೆವು.
ವಾಪಸ್ಸಾಗುವಾಗ ನಮ್ಮ ಪ್ರೊಫೆಸರ್ ಮಾತನಾಡುತ್ತಾ ನಾಲ್ಕೈದು ದಿನದಿಂದ ನಾನು ಈ ಕೆಲಸದಲ್ಲಿ ತೊಡಗಿದ್ದು ಯಾವುದೇ ಹಳ್ಳಿಗೆ ಹೋದರೂ ಹತ್ತರಿಂದ ಇಪ್ಪತ್ತು ಜನ ಪರೀಕ್ಷೆಗೆ ಬಂದರೆ ಹೆಚ್ಚು ಎನ್ನುವಂತಿತ್ತು. ಇಂದು ಭಾನುವಾರವಾದರೂ ಬೆಳಿಗ್ಗೆ ವಿಷಯ ತಲುಪಿದರೂ ಇಷ್ಟು ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ಶಿಬಿರ ಆಯೋಜನೆ ಮಾಡಿದ್ದು ನಿಮ್ಮ ತಂಡದ ಬಗ್ಗೆ ಹೆಮ್ಮೆ ಅನಿಸಿತು. ಈ ಕಾರ್ಯಕ್ರಮ ಇಷ್ಟು ಯಶಸ್ವಿಯಾಗಿ ಜನರಿಗೆ ಉಪಯೋಗಕಾರಿ ಆಗಬಹುದು ಅಂತ ಇವತ್ತೇ ಅನ್ಸಿದ್ದು, ವೆರಿ ಗುಡ್ ಶಾಲಿನಿ ತುಂಬಾ ಖುಷಿಯಾಯ್ತು ಅಂದ್ರು. ಪಾಠ ಮಾಡಿದ ಗುರುಗಳ ಬಾಯಲ್ಲಿ ಪ್ರಶಂಸೆ ಪಡೆಯೋದು ದೊಡ್ಡ ಪ್ರಶಸ್ತಿಗೆ ಸಮಾನ. ನನಗೂ ನಮ್ಮ ತಂಡಕ್ಕೂ ಖುಷಿಯಾಯ್ತು. ಅವರು ವರದಿ ನೀಡಲು ಬೇಲೂರಿಗೆ ಹೋದರು, ನಾನು ಆಸ್ಪತ್ರೆಗೆ ಬಂದೆ ರೋಗಿಗಳು ಹೆರಿಗೆ ಬಿಡುವಿಲ್ಲದೇ ಭಾನುವಾರ ಕಳೆದುಹೋಯ್ತು. ಆದರೂ ಒಳ್ಳೆಯ ಕೆಲಸ ಮಾಡಿದ ತೃಪ್ತಿ ಮತ್ತು ಗುರುಗಳ ಅಭಿಮಾನದ ಮಾತು ಎಲ್ಲಾ ಆಯಾಸ ಮರೆಸಿತು.
ಮರುದಿನ ಬೆಳಿಗ್ಗೆ ಕೆಲವು ಪತ್ರಿಕೆಗಳು ನಮ್ಮ ಕೆಲಸದ ಬಗ್ಗೆ ಒಳ್ಳೆಯ ವರದಿ ಮಾಡಿದ್ದರು. ನಾನು ನಮ್ಮ ಸರ್‌ಗೂ ಕಳುಹಿಸಿದ್ದೆ, ಖುಷಿಯಾಗಿ ಕೆಲಸಗಳು ಸಾಗಿತು.
ಆದರೆ ಮಧ್ಯಾಹ್ನದ ಹೊತ್ತಿಗೆ ಕೆಲವು ಪತ್ರಿಕಾ ವರದಿಗಳು ವಾಟ್ಸ್ ಅಪ್ ಮೂಲಕ ನಮ್ಮನ್ನು ತಲುಪಿ ನಮ್ಮ ನಿದ್ದೆಗೆಡಿಸಿದವು. ಹಿಂದಿನ ದಿನ ಬಂದಿದ್ದ ಮಾಧ್ಯಮದವರು ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂಬುದನ್ನು ದೊಡ್ಡ ಸುದ್ಧಿ ಮಾಡಿ ಬೇಜವಬ್ದಾರಿ ನಡೆ, ವೈದ್ಯರ ನಡೆ ಹಳ್ಳಿ ಕಡೆ ಮೊದಲ ಹಂತದಲ್ಲೇ ಠುಸ್, ಇದು ಸರ್ಕಾರಿ ಕಾರ್ಯಕ್ರಮವಲ್ಲ ವೈದ್ಯರ ಟ್ರಿಪ್, ವೈದ್ಯರ ಬೇಜವಾಬ್ದಾರಿ ನಡೆಗೆ ಬೇಸತ್ತ ಗ್ರಾಮಸ್ಥರಿಂದ ಆಕ್ರೋಶವೆಂಬ ಸುದ್ಧಿಗಳು ನಮ್ಮನ್ನು ಬೆಚ್ಚಿಬೀಳಿಸಿದವು. ಹಾಗೊಂದು ಆಕ್ರೋಶ ಆವೇಶ ನಾವೇನು ಎದುರಿಸಿರಲಿಲ್ಲ. ಜನ ಜಾಸ್ತಿ ಆದದ್ದು ಅದರಲ್ಲೂ ಬುಡಕಟ್ಟು ಜನ ವಾಸಿಸುವ ಗ್ರಾಮ, ಅವರ ಭಾಷೆಯೂ ನಮಗೆ ಸರಿಯಾಗಿ ಅರ್ಥ ಆಗಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯಲ್ಲಿ ತಪ್ಪಾಗಿತ್ತು, ಒಪ್ಪುತ್ತೇವೆ ಆದರೆ ಅದೊಂದೇ ವಿಷಯ ಇಡೀ ಕಾರ್ಯಕ್ರಮವನ್ನೇ ಶೂನ್ಯಕ್ಕೆ ನಿಲ್ಲಿಸಿದ್ದು ಬೇಸರ ತರಿಸಿತು. ಆ ವಾರ ಪೂರ್ತಿ ಅದೇ ವಿಷಯ ಸುದ್ಧಿ ವಾಹಿನಿಯಲ್ಲಿ ಮತ್ತು ಪತ್ರಿಕೆಗಳಲ್ಲಿ ಪದೇ ಪದೇ ವರದಿಯಾಯ್ತು. ಬಹಳಷ್ಟು ನನ್ನ ಸ್ನೇಹಿತರು ಮಾಧ್ಯಮದವರ ಬಗೆಗೆ ಕಿಡಿ ಕಾರಿದರು. ನನಗೂ ತುಸು ಬೇಸರವಾಯ್ತು.
ನಾನು ಎಲ್ಲೇ ಹೋದರೂ ಜನ ಮಾಧ್ಯಮದವರನ್ನು ಕಂಡರೆ ಹೆದರುತ್ತಾರೆ. ಮಾಧ್ಯಮದವರು ಸಣ್ಣದನ್ನೇ ಗುಡ್ಡ ಮಾಡುತ್ತಾರೆ , ಅವರ ಸಹವಾಸ ಬೇಡ ಎಂದು ಮಾತನಾಡುತ್ತಾರೆ. ಆದರೆ ಸಾಹಿತ್ಯ ಕ್ಷೇತ್ರ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ನನಗೆ ಮಾಧ್ಯಮದವರ ಸಹಕಾರ ದೊಡ್ಡ ಮಟ್ಟದಲ್ಲಿ ಸಿಕ್ಕಿತ್ತು. ಬಹಳ ಬೇಗ ಮಾಧ್ಯಮದವರು ಸ್ನೇಹಿತರಾದರು, ಒಳ್ಳೆಯ ಕೆಲಸಗಳನ್ನು ಅಭಿನಂದಿಸುತ್ತಿದ್ದರು. ಹಾಗಾಗಿ ನನಗೆ ಮಾಧ್ಯಮದವರ ಬಗೆಗೆ ಯಾರಾದರೂ ನಕರಾತ್ಮಕವಾಗಿ ಮಾತನಾಡಿದರೆ ಬೇಸರವಾಗುತ್ತಿತ್ತು. ಈ ಘಟನೆ ನಡೆದಾಗಲೂ ಜನ ಮಾಧ್ಯಮದವರನ್ನು ಬೈಕೊಂಡರೆ ನನ್ನ ಸ್ನೇಹಿತರ ಬಗೆಗೆ ಮಾತನಾಡುತ್ತಿದ್ದಾರಲ್ಲ ಮುಜುಗರವಾಗುತ್ತಿತ್ತು. ಕೆಲವು ಮಾಧ್ಯಮಮಿತ್ರರೇ ಈ ವಿಚಾರವಾಗಿ ಬೇಸರಿಸಿಕೊಳ್ಳದಿರಲು ಕರೆ ಮಾಡಿ ಸಂದೇಶ ಕಳುಹಿಸಿ ಸಮಾಧಾನ ಮಾಡಿದರು.
ನಂತರ ನನ್ನನ್ನೇ ನಾನು ಓರೆಗಚ್ಚಿಕೊಂಡೆ. ಮೊದಲಿನಿಂದ ಮಾಧ್ಯಮದವರಿಂದ ಒಳ್ಳೆಯ ಅಭಿಪ್ರಾಯಗಳನ್ನೇ ಪಡೆದ ನನಗೆ ಮಾಧ್ಯಮ ತಪ್ಪನ್ನು ದೊಡ್ಡ ಮಟ್ಟದಲ್ಲಿ ವೈಭವೀಕರಿಸಬಹುದೆಂಬುದನ್ನು ಮರೆಸಿತ್ತು, ಮಾಧ್ಯಮದವರ ಸ್ನೇಹ ಅವರೊಂದು ಎಚ್ಚರಿಕೆಯ ಗಂಟೆ ಎಂಬುದನ್ನೇ ಮರೆಯುವಂತೆ ಮಾಡಿತ್ತು. ಈ ಘಟನೆ ಮೈ ಮರೆಯಬಾರದು, ಸರಿ ತಪ್ಪುಗಳು ಹೇಗಾದರೂ ತೂಕಕ್ಕೆ ಬರಬಹುದು ಎಂಬುದನ್ನು ಅರ್ಥಮಾಡಿಸಿತ್ತು. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬುದನ್ನು ಮಾಧ್ಯಮದವರು ರೂಢಿಸಿಕೊಳ್ಳುವುದರ ಅವಶ್ಯಕತೆ ಬಗೆಗೆ ಮನದಟ್ಟಾಯಿತು. ಅವರ ವರದಿ ಮೊದಲಿಗೆ ಬೇಸರ ತರಿಸಿದರೂ ಅದೂ ಒಂದು ದೊಡ್ಡ ಪಾಠವಾಗಿತ್ತು. ಅದರಲ್ಲೂ ಅತ್ಯವಶ್ಯಕ ಅಂಶವೆನಿಸಿತು. ಇನ್ನು ಮುಂದು ಆ ಸಣ್ಣ ತಪ್ಪುಗಳು ನಮಗೂ ಮಾರಕವಾಗಬಹುದೆಂಬ ಎಚ್ಚರವಾಣಿ ಆಯ್ತು.
ಒಂದೇ ಘಟನೆ, ಒಬ್ಬರು ನಿನ್ನಷ್ಟು ಅಚ್ಚುಕಟ್ಟಾಗಿ ಯಾರೂ ಮಾಡಿಲ್ಲ ಎಂದರು, ಮತ್ತೊಬ್ಬರು ಬೇಜವಾಬ್ದಾರಿ ಎಂದರು. ಒಂದು ಘಟನೆ ಎರಡು ಅನುಭವ, ಬದುಕು ಹೊಗಳಿಕೆಗೆ ಹಿಗ್ಗದೇ ತೆಗಳಿಕೆಗೆ ಕುಗ್ಗದೇ ಸಾಕಾಗಬೇಕಾದ ನಿರಂತರ ಯಾನ.
ಡಾ. ಶಾಲಿನಿ. ವಿ.ಎಲ್
ಆಡಳಿತ ವೈದ್ಯಾಧಿಕಾರಿಗಳು
ಪ್ರಾ ಆ ಕೇಂದ್ರ. ಹಗರೆ. ಬೇಲೂರು
