ಹಾಸನ: ಕೊರೋನಾ ಆವರಿಸಿ ಜನರು ಸಂಕಷ್ಟಕ್ಕೆ ಸಿಲುಕಿರುವ ವೇಳೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡುವುದರ ಮೂಲಕ ಮತ್ತಷ್ಟು ಸಮಸ್ಯೆಗೆ ಸಿಲುಕಿಸಿರುವ ಪ್ರಧಾನಿ ನರೇಂದ್ರ ಮೋದಿಯ ಬಿಜೆಪಿ ಸರಕಾರವನ್ನು ಖಂಡಿಸಿ ಡಿವೈಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಆರ್.ಸಿ. ರಸ್ತೆ, ಸ್ಲೇರ‍್ಸ್ ಹಾಲ್ ಬಳಿ ಇರುವ ಶ್ರಮ ಕಛೇರಿ ಮುಂದೆ ಪ್ರತಿಭಟನೆ ಮಾಡಿದ ಅವರು, ಕೇಂದ್ರದ ನರೇಂದ್ರ ಮೋದಿ ಸರಕಾರವು ಕಳೆದ ೭ ವರ್ಷಗಳ ಹಿಂದೆ ಒಳ್ಳೆ ದಿನಗಳ ತರಲಾಗುವುದು ಎಂದು ಹೇಳಿ ಎರಡನೇ ಬಾರಿ ಅಧಿಕಾರಕ್ಕೆ ಬಂದರೂ ಕೂಡ ಅಗತ್ಯ ವಸ್ತುಗಳ ಬೆಲೆ ಏರಿಕೆ ಗಗನಕ್ಕೇರಿದೆ. ಕೊರೋನಾವನ್ನು ನಿಬಾಯಿಸಲಾಗದೇ ಇಡೀ ದೇಶದಲ್ಲಿ ಪ್ರತಿನಿತ್ಯ ಸಾವು-ನೋವುಗಳು ಸಂಭವಿಸುತ್ತಿದೆ. ಇದರ ಜೊತೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡುವ ಮೂಲಕ ಜನ ಸಾಮಾನ್ಯರ ಮೇಲೆ ಹಾಗೂ ರೈತರ ಮೇಲೆ ಬರೆಯನ್ನು ಹಾಕಿದೆ ಎಂದು ಕಿಡಿಕಾರಿದರು. ಪೆಟ್ರೋಲ್ ಧರ ನೂರರ ಗಡಿ ದಾಟಿದೆ. ಡಿಸೇಲ್ ಕೂಡ ಏರಿಕೆ ಮಾಡುವ ಮೂಲಕ ಮೋದಿಯವರು ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ರೈತ ಮತ್ತು ಕಾರ್ಮಿಕ ಮಸೂದೆಯನ್ನು ಜಾರಿ ಮಾಡುವುದರ ಮೂಲಕ ಸಮಸ್ತ ಜನರ ಮೇಲಗೆ ತಮ್ಮ ಗದ ಪ್ರಹಾರವನ್ನು ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು. ಕೊರೋನಾ ಆವರಿಸಿ ಸಂಕಷ್ಟಕ್ಕೆ ಸಿಲುಕಿರುವ ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಲಾಗಿದೆ. ಕೂಡಲೇ ದೇಶದ ಪ್ರಧಾನಿಯವರು ತೈಲ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ಇದೆ ವೇಳೆ ಡಿವೈಎಫ್‌ಐ ಸಂಘಟನೆಯ ಮುಖಂಡ ಎಂ.ಜಿ. ಪೃಥ್ವಿ, ಮಧುಸೂದನ್, ವಸಂತಕುಮಾರ್, ಶಶಿ, ರಕ್ಷಿತಾ, ವಿವೇಕ್ ಇತರರು ಪಾಲ್ಗೊಂಡಿದ್ದರು.