ಶೂನ್ಯ ಮಲೇರಿಯಾ ಗುರಿ ತಲುಪೋಣ ಟಿ.ಎಚ್.ಒ. ಡಾ. ವಿಜಯ್ ಕರೆ

ಹಾಸನ: ಮಲೇರಿಯಾ ನಿರ್ಮಲನೆಗೆ ಪಣ ತೊಟ್ಟು ಶೂನ್ಯ ಮಲೇರಿಯವನ್ನು ಗುರಿ ತಲುಪೋಣ ಎಂಬ ಘೋಷಣೆಯೊಂದಿಗೆ ಜಾಗೃತಿಗೊಳಿಸೋಣ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ವಿಜಯ್ ಕರೆ ನೀಡಿದರು.


     ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಶುಕ್ರವಾರದಂದು ಮದ್ಯಾಹ್ನ ಮಾಧ್ಯಮ ಪ್ರತಿನಿಧಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಜೂನ್ ತಿಂಗಳನ್ನು ಮಲೇರಿಯಾ ವಿರೋಧಿ ಮಾಸಾಚರಣೆ ಎಂದು ಆಚರಿಸಲಾಗುತ್ತಿದೆ. ಇಂದಿಗೂ ಕೂಡ ಅನೇಕರಲ್ಲಿ ಮಲೇರಿಯಾ ಬಗ್ಗೆ ತಿಳುವಳಿಕೆ ಇರುವುದಿಲ್ಲ ಇದರಿಂದಲೇ ಅನೇಕರು ಸಾವನಪ್ಪುತ್ತಿದ್ದಾರೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಲೇರಿಯಾ ಜ್ವರ ಎಂದರೇ ಪ್ಲಾಸ್ಮೋಡಿಯಂ ವೈವಾಕ್, ಫಾಲ್ಸಿಫಾರಂ ಎಂಬ ಪರಾವಲಂಬಿ ಜೀವಿಯಿಂದ ಉಂಟಾಗುವ ರೋಗವಾಗಿದೆ. ಇವು ಸೋಂಕು ಹೊಂದಿದ ಹೆಣ್ಣು ಅನಾಫಪಿಲಿಸ್ ಸೊಳ್ಳೆಯ ಕಚ್ಚುವಿಕೆಯು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದರು. ಚಳಿ, ನಡುಕ, ಜ್ವರ, ಬೆವರುವುದು ಇವು ಮಲೇರಿಯಾದ ಮುಖ್ಯ ಲಕ್ಷಣಗಳಾಗಿದೆ. ಇದರಿಂದ ತೀವ್ರ ಜ್ವರದ ಜೊತೆಗೆ ಮರಣವು ಸಂಭವಿಸಬಹುದು. ರಕ್ತ ಪರೀಕ್ಷೆಯಿಂದ ರೋಗವನ್ನು ಪತ್ತೆ ಮಾಡಬಹುದು. ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಪರೀಕ್ಷೆ ಮಾಡಿಸಿಕೊಂಡರೆ ಗುಣಮುಖರಾಗಬಹುದಾಗಿದೆ ಎಂದು ಹೇಳಿದರು.

     ಅನಾಫಿಲಿಸ್ ಸೊಳ್ಳೆಗಳ ನಿಯಂತ್ರಣ ಮಲೇರಿಯಾ ರೋಗದ ಹತೋಟಿಗೆ ಪ್ರಮುಖ ಪರಿಹಾರವಾಗಿದೆ. ಈ ಸೊಳ್ಳೆಗಳು ಸ್ವಚ್ಛ ಹರಿಯುವ ನೀರು, ಮಳೆ ನೀರು ಇತರೆಗಳಲ್ಲಿ ಉತ್ಪತ್ತಿಯಾಗುವುದರಿಂದ ನೀರು ನಿಲ್ಲದಂತೆ ಕ್ರಮವಹಿಸಬೇಕು. ಸೊಳ್ಳೆ ನಿರೋಧಕಗಳನ್ನು ಹಾಗೂ ಸೊಳ್ಳೆ ಪರದೆಗಳನ್ನು ಬಳಸುವುದು, ಮೈತುಂಬ ಬಟ್ಟೆ ಹಾಕುವುದರಿಂದ ಸೊಳ್ಳೆಗಳ ಕಚ್ಚುವಿಕೆಯಿಂದ ದೂರ ಇರಬಹುದು ಎಂದರು. 

      ಇದೆ ವೇಳೆ ಪ್ರೊಜಕ್ಟರ್ ಮೂಲಕ ಮಲೇರಿಯಾ ಉತ್ಪತ್ತಿ ಆಗುವ ಸ್ಥಳಗಳು, ನಿರ್ಮಲನೆ ಮಾಡುವ ವಿಧಾನ ಹಾಗೂ ಇದರಿಂದ ದೂರ ಇರಲು ಅನುಸರಿಸಬೇಕಾದ ಕ್ರಮಗಳನ್ನು ಪ್ರದರ್ಶಿಸಲಾಯಿತು.

    ಇದೆ ವೇಳೆ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಆರ್. ಪ್ರಸನ್ನಕುಮಾರ್, ಉಪಾಧ್ಯಕ್ಷ ಹಿಂದೂ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಕೆ.ಜಿ. ಸುರೇಶ್, ನಗರ ಕಾರ್ಯದರ್ಶಿ ಸಿ.ಬಿ. ಸಂತೋಷ್, ಡಿ.ಎಸ್.ಒ. ಶಿವಶಂಕರ್, ಸಂಪನ್ಮೂಲವ್ಯಕ್ತಿ ರಾಜೇಶ್ ಕುಲಕರ್ಣಿ, ಆರೋಗ್ಯಾಧಿಕಾರಿ ಮಂಜೂಳಾ  ಇತರರು ಉಪಸ್ಥಿತರಿದ್ದರು.


Post a Comment

Previous Post Next Post