ಹಾಸನ ಜೂ.೧೭:- ನಗರ ಪ್ರದೇಶಗಳಲ್ಲಿರುವ ಕೆರೆಗಳನ್ನು ಸರ್ವೆ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಿ ಒತ್ತುವರಿಗಳಿದ್ದಲ್ಲಿ ತೆರವುಗೊಳಿಸಿ ಮಾಲಿನ್ಯವಾಗದಂತೆ ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಕೆರೆ ಸಂರಕ್ಷಣೆ ಕುರಿತು ಜಿಲ್ಲಾ ಮಟ್ಟದ ಸಮಿತಿಯ ಸಭೆ ನಡೆಸಿ ಮಾತನಾಡಿದ ಅವರು ಸಣ್ಣ ನೀರಾವರಿ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಕೆರೆಗಳನ್ನು ಸರ್ವೆ ನಡೆಸಿ ಗಡಿ ನಿರ್ಧರಿಸಿ, ಒತ್ತುವರಿ ತೆರವುಗೊಳಿಸಬೇಕು ಎಂದರು.
ಈಗಾಗಲೇ ನಗರ ಪ್ರದೇಶಗಳಲ್ಲಿ ೨೬ ಕೆರೆಗಳನ್ನು ಸರ್ವೇ ಮಾಡಲಾಗಿದ್ದು, ಇನ್ನುಳಿದ ಕೆರೆಗಳನ್ನು ಒತ್ತುವರಿ ಮುಕ್ತಗೊಳಿಸಿ ಮಾಲಿನ್ಯ ಮುಕ್ತವಾಗಿರಬೇಕು ಹಾಗೂ ನೀರಿನ ಗುಣಮಟ್ಟ ಕಾಪಾಡಬೇಕು ಎಂದರಲ್ಲದೆ ೧೭೭ ಸಣ್ಣ ನೀರಾವರಿ ಕೆರೆಗಳಿದ್ದು, ಅವುಗಳಲ್ಲಿ ಸರ್ವೇ ಆಗದೆ ಉಳಿದ ಕೆರೆಗಳನ್ನು ಸರ್ವೇ ಮುಕ್ತಾಯ ಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಎ ಪರಮೇಶ್ ಅವರು ಮಾತನಾಡಿ ಎಲ್ಲಾ ಗ್ರಾಮ ಪಂಚಾಯಿತಿ ಪಿಡಿಓಗಳು ಕೆರೆ ಸಂರಕ್ಷಣೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು, ಕೆರೆ ಹಾಗೂ ಜಲ ಮೂಲಗಳಲ್ಲಿ ತ್ಯಾಜ್ಯ ಸುರಿಯದಂತೆ ಸೂಕ್ತ ಗಮನ ಹರಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತಾರಾಜರಾಂ, ಭೂದಾಖಲೆಗಳ ಉಪನಿರ್ದೇಶಕರು ಹೇಮಲತಾ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್ ಸತೀಶ್, ಜಂಟಿ ಕೃಷಿ ನಿರ್ದೇಶಕರಾದ ರವಿ, ತೋಟಗಾರಿಕೆ ಇಲಾಖೆಯ ಯೋಗೇಶ್, ಇತರರು ಹಾಜರಿದ್ದರು.