ಅರಕಲಗೂಡು ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೋವಿಡ್ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸುವ ಕಾರ್ಯದಲ್ಲಿ ವ್ಯವಸ್ಥಿತವಾಗಿ ನಡೆಯದ ಕಾರಣ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಲು ಕಾರಣವಾಗಿದೆ ಸೋಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇಂದ್ರಕ್ಕೆ ಸ್ಥಳಾಂತರಿಸುವಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತವಾಗಬೇಕು ಎಂದು ಶಾಸಕರಾದ ಎ.ಟಿ. ರಾಮಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ಮಟ್ಟದ ಕೋವಿಡ್ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ಶಾಸಕರು, ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಅಗತ್ಯ ಸೌಲಭ್ಯಗಳಿಲ್ಲದೆ ಗೃಹ ನಿರ್ಬಂಧಕ್ಕೊಳಗಾದ ಸೋಂಕಿತರಿಂದ ಕುಟುಂಬದ ಇತರೆ ಸದಸ್ಯರಿಗೂ ಸೋಂಕು ಹರಡುತ್ತಿದ್ದು ಇದರಿಂದ ಸೋಂಕು ಹೆಚ್ಚುತ್ತಿದೆ. ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದರೂ ಆರೈಕೆ ಕೇಂದ್ರಕ್ಕೆ ದಾಖಲಾಗುತ್ತಿಲ್ಲ. ಮೂರು ಆರೈಕೆ ಕೇಂದ್ರ ತೆರೆದಿದ್ದು 175 ಮಂದಿ ಮಾತ್ರ ದಾಖಲಾಗಿದ್ದು ಇನ್ನೂ 221 ಹಾಸಿಗೆಗಳು ಖಾಲಿ ಇವೆ. ಉತ್ತಮ ಊಟ, ಅಗತ್ಯ ಸೌಲಭ್ಯ ಹಾಗೂ ಆರೈಕೆ ನೀಡುತ್ತಿದ್ದರೂ ಜನರು ಬರಲು ಹಿಂಜರಿಯುತ್ತಿದ್ದು ಈ ಕುರಿತು ಜಾಗೃತಿ ಮೂಡಿಸಬೇಕು. ಸೋಂಕಿತರ ಪಟ್ಟಿ ಪ್ರಕಟವಾದ ಕೂಡಲೆ ಅವರ ಮನೆಗಳಿಗೆ ಭೇಟಿ ನೀಡಿ ಅಗತ್ಯ ವ್ಯವಸ್ಥೆ ಇಲ್ಲದವರನ್ನು ಆರೈಕೆ ಕೇಂದ್ರಗಳಿಗೆ ಕಡ್ಡಾಯವಾಗಿ ಸೇರ್ಪಡೆ ಮಾಡಬೇಕು. ಗ್ರಾಮ ಮಟ್ಟ ಹಾಗೂ ಗ್ರಾಪಂ ಕೋವಿಡ್ ಕಾರ್ಯಪಡೆ ಸಭೆಯನ್ನು ನಡೆಸಿ ಇಂದಿನಿಂದಲೆ ಈ ಕುರಿತು ಕಾರ್ಯ ಪ್ರವೃತ್ತರಾಗಿ ಸೋಮವಾರವರದಿ ನೀಡುವಂತೆ ಸೂಚನೆ ನೀಡಿದರು.
ಕೋವಿಡ್ ನಿರ್ವಹಣೆ ಕಾರ್ಯ ಸುಲಿತವಾಗಿ ನಡೆಯಲಿ ಎಂಬ ಉದ್ದೇಶದಿಂದ ಎರಡು ಗ್ರಾಪಂ ಗಳಿಗೆ ಒಬ್ಬ ನೊಡೆಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ,ಆದರೆ ಬೆರಳೆಣಿಕೆಯಷ್ಟು ಅಧಿಕಾರಿಗಳನ್ನು ಬಿಟ್ಟರೆ ಉಳಿದವರ ಕಾರ್ಯ ವೈಖರಿ ಸಮಪರ್ಕವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಎಚ್ಚರ ವಹಿಸಿ ಕಾರ್ಯ ನಿರ್ವಹಿಸಬೇಕಿದೆ. ತಾಲೂಕಿನಲ್ಲಿ ಕೋವಿಡ್ ನಿಂದ 56 ಮಂದಿ ಮೃತಪಟ್ಟಿದ್ದು ಸರ್ಕಾರ ಘೋಷಿಸಿರುವ ಒಂದು ಲಕ್ಷ ಮೊತ್ತದ ಪರಿಹಾರ ಧನ ಪಡೆಯಲು ಅರ್ಹರಾದವರ ಪಟ್ಟಿ ಹಾಗೂ ದಾಖಲೆಗಳನ್ನು ಸಿದ್ದಪಡಿಸಿ ಮಾರ್ಗ ಸೂಚಿ ಪ್ರಕಟವಾದ ಕೂಡಲೆ ವರದಿ ಸಲ್ಲಿಸುವಂತೆ ಸೂಚಿಸಿದರು.
ತಾಲೂಕು ನೊಡೆಲ್ ಅಧಿಕಾರಿ ಡಾ. ಸುದರ್ಶನ್ ಮಾತನಾಡಿ, ಉಳಿದ ತಾಲೂಕುಗಳಿಗಿಂತ ಇಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗದ ಕುರಿತು ಜಿಲ್ಲಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ನೋಡೆಲ್ ಆಧಿಕಾರಿಗಳು ಹಾಗೂ ಕೆಳಹಂತದ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಕೆಲ ದಿನಗಳ ಕಾಲ ಇಲಾಖೆಯ ಕೆಲಸಗಳನ್ನು ಬದಿಗೊತ್ತಿ ಕೋವಿಡ್ ನಿರ್ವಹಣೆ ಕುರಿತು ಗಮನ ಹರಿಸಬೇಕು, ತಾಲೂಕು ಆಡಳಿತ ಎಲ್ಲ ಅಗತ್ಯ ನೆರವು ನೀಡಲಿದೆ ಎಂದರು.
ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಮಾತನಾಡಿ, ನೋಡೆಲ್ ಅಧಿಕಾರಿಗಳು ಸಮರ್ಪಕ ರೀತಿಯಲ್ಲಿ ಕಾರ್ಯ ನಿರ್ವಹಿಸದಿದ್ದರೆ ಅವರನ್ನೆ ಹೊಣೆಗಾರರನ್ನಾಗಿಸಿ ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಇಒ ಎನ್. ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಚ್.ಪಿ. ಲಿಂಗರಾಜು, ತಾಲೂಕು ಆರೋಗ್ಯಾಧಿಕಾರಿ ಡಾ ಸ್ವಾಮಿಗೌಡ, ಸಹಾಯಕ ಕೃಷಿ ನಿರ್ದೇಶಕ ಎಚ್.ಕೆ. ರಮೇಶ್ ಕುಮಾರ್ ಇತರರು ಇದ್ದರು.