ಹಾಸನ: ರೈತರ ನ್ಯಾಯಯುತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯೂ ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದ ಅವರು, ದೇಶದಲ್ಲಿ ಇನ್ನೂರು ದಿನಗಳಿಂದ ರೈತರು ದೆಹಲಿ ಪ್ರವೇಶದ್ವಾರದಲ್ಲಿ ಅನಿರ್ದಿಷ್ಟ ಕಾಲದ ಸತ್ಯಾಗ್ರಹ ಮುಂದುವರೆದಿದ್ದು, ಭಾರತ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಲು ದೊಡ್ಡ ದೊಡ್ಡ ಪ್ರತಿಭಟನೆಗಳು ದೇಶಾದ್ಯಂತ ನಡೆದಿವೆ. ಸರ್ಕಾರವು ಉದ್ದೇಶಪೂರ್ವಕವಾಗಿಯೇ ಇಷ್ಟು ದೊಡ್ಡ ಕೋವಿಡ್ -೧೯ ನಡುವೆ ರೈತರ ಸಮಸ್ಯೆಗಳನ್ನು ಬಗೆಹರಿಸಿ ಅಥವಾ ರೈತರೊಂದಿಗೆ ಚರ್ಚಿಸದೆ ಮೂರು ಕಾಯ್ದೆಗಳನ್ನು ಜಾರಿಗೊಳಿಸುವುದಿಲ್ಲ ಎಂದು ರೈತರಿಗೆ ಭರವಸೆ ನೀಡಿ ಈ ಹೋರಾಟವನ್ನು ಷಮನ ಮಾಡಬೇಕಿತ್ತು. ಆದರೇ ರೈತರನ್ನು ಕಡೆಗಣಿಸುವ ಮತ್ತು ದಮನಕಾರಿ ನೀತಿಯನ್ನು ಮುಂದುವರೆಸುತ್ತಾ ದೇಶದ ರೈತರನ್ನು ದಿವಾಳಿ ಮಾಡಿ ಕೃಷಿಯಿಂದ ಹೊರದಬ್ಬುವ ನೀತಿಯನ್ನೇ ಮುಂದುವರಿಸುತ್ತಿದ್ದಾರೆ ಎಂದು ದೂರಿದರು. ಸರ್ಕಾರವು ಕೃಷಿಯನ್ನು ರೈತರಿಗೆ ದುಬಾರಿ ಮಾಡಲು ಹೊರಟಿದೆ ಎಂದರು.
ರಸಗೊಬ್ಬರ ಧಾರಣೆಯನ್ನು ಹೆಚ್ಚು ಮಾಡಿ ಬಿತ್ತನೆ ಬೀಜವನ್ನು ರೈತರಿಗೆ ದುಬಾರಿ ಬೆಲೆಯಲ್ಲಿ ಮಾರಾಟ ಮಾಡಿದ್ದಾರೆ. ರೈತರಿಗೆ ಕೃಷಿ ಸಾಲವನ್ನು ಕಡಿತ ಮಾಡಿರುವುದು, ಕೃಷಿ ಮಾರುಕಟ್ಟೆಯನ್ನು ಅತಂತ್ರಗೊಳಿಸಿರುವುದು, ಕೊವಿಡ್ ಸಂದರ್ಭದಲ್ಲಿ ರೈತರಿಗೆ ಪ್ಯಾಕೇಜ್ ನೀಡಿರುವುದಿಲ್ಲ. ಸಾವಿರ ಕೋಟಿಯನ್ನು ಕೊಡದೆ ರೈತರ ತುಟಿಗೆ ತುಪ್ಪ ಹಚ್ಚುವ ಕೆಲಸ ಮಾಡಿದೆ. ಕೋವಿಡ್ ಮೂರನೇ ಪ್ಯಾಕೇಜ್ ಇರುವುದಿಲ್ಲ. ಗ್ರಾಮೀಣ ಜನರಿಗೆ ಉಚಿತ ಲಸಿಕೆಗಳಿಗೆ ಮತ್ತು ಔಷಧಿ ನೀಡಿರುವುದಿಲ್ಲ ಎಂದರು. ಕೃಷಿ ಕಾಯಕ ಮಾಡುವ ರೈತ ಕೊರೋನಾದಿಂದ ಸತ್ತರೆ ಅತನನ್ನು ಕೊರೋನ ವಾರಿಯರ್ ಎಂದು ಹೆಚ್ಚಿನ ಮಟ್ಟದ ಪರಿಹಾರವನ್ನು ನೀಡಬೇಕು. ಇಂತಹ ಸಂದರ್ಭದಲ್ಲಿ ಕೃಷಿಯಿಂದ ಲಾಭವೇ ಆಗದೇ ಇರುವಾಗ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಇದುವರೆಗೂ ಕಬ್ಬಿನ ಬಾಕಿ ರೈತರಿಗೆ ನೀಡಿಲ್ಲದಿರುವುದು ಒಂದು ಕಡೆ ಆದರೇ ರಾಗಿ ಖರೀದಿ ಮಾಡಿದಂತಹ ಮಾರುಕಟ್ಟೆ ಇಲಾಖೆಯು ರೈತರಿಗೆ ಹಣ ಪಾವತಿ ಮಾಡಿರುವುದಿಲ್ಲ. ಭತ್ತ ಮತ್ತು ಜೋಳ ಖರೀದಿ ಮಾಡಿದ ಹಣವನ್ನು ಸರ್ಕಾರ ಪಾವತಿ ಮಾಡದೇ ಹಿಂದೇಟು ಹಾಕುತ್ತಿದೆ. ಹಾಸನ ಆಕಾಶವಾಣಿಯಲ್ಲಿ ಕಿಸಾನ್ ವಾಣಿಯನ್ನು ಸಂಜೆ ೬.೫೦ ರ ಬದಲಾಗಿ ೫.೩೦ ಕ್ಕೆ ಪ್ರಸಾರವಾಗುತ್ತಿದ್ದು, ಇದನ್ನು ೬.೫೦ ಕ್ಕೆ ಪ್ರಸಾರ ಮಾಡಬೇಕು ಎಂದು ಆಗ್ರಹಿಸಿದರು.
ಈ ಎಲ್ಲಾ ಕಾರಣಗಳಿಗೊಸ್ಕರ ಕೃಷಿ ಉಳಿಸಿ ಪ್ರಜಾಪ್ರಭುತ್ವ ರಕ್ಷಿಸಿ ಎಂದು ಇಡೀ ದೇಶದ ರೈತ ಸಂಘಟನೆಗಳು ರಾಜ್ಯಪಾಲರ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ಮಾಡುವ ಮೂಲಕ ಕೋವಿಡ್ ನಿಯಮಗಳನ್ನು ಪಾಲನೆ ಮಾಡಿ ಸರ್ಕಾರಕ್ಕೆ ಈ ಎಲ್ಲಾ ಒತ್ತಾಯಗಳನ್ನು ಜಾರಿ ಮಾಡಲು ರಾಜ್ಯಪಾಲರ ಮೂಲಕ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಎಚ್ಚರಿಸುವ ಹೋರಾಟವನ್ನು ಮಾಡಿದರು.
ಇದೆ ವೇಳೆ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಆನೆಕೆರೆ ರವಿ, ಜಿಲ್ಲಾಧ್ಯಕ್ಷ ಮಗಬೂಬ್ ಪಾಷ (ಬಾಬು), ಜಿಲ್ಲಾ ಉಪಾಧ್ಯಕ್ಷ ಮೀಸೆ ಮಂಜಣ್ಣ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್.ಆರ್. ನವೀನ್ ಕುಮಾರ್, ಕಾರ್ಯದರ್ಶಿ ವಸಂತಕುಮಾರ್, ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಇತರರು ಪಾಲ್ಗೊಂಡಿದ್ದರು.