ಹಾಸನ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಸತೀಶ್ ರವರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಅವಮಾನಿಸಿರುವ ಅರಸೀಕೆರೆ ಕ್ಷೇತ್ರದ ಶಾಸಕರಾದ ಕೆ.ಎಂ. ಶಿವಲಿಂಗೇಗೌಡರು ಕೂಡಲೇ ಕ್ಷಮೆ ಕೇಳಲು ಆಗ್ರಹಿಸಿ ನಗರದ ಸಾಲಗಾಮೆ ರಸ್ತೆ ಬಳಿ ಇರುವ ಜಿಲ್ಲಾ ಆರೋಗ್ಯಾಧಿಕಾರಿ ಕಛೇರಿ ಎದುರು ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಂಗಳವಾರ ಮದ್ಯಾಹ್ನ ಧರಣಿ ನಡೆಸಿದರು.
ಕಳೆದ ಮೂರು ದಿನಗಳ ಹಿಂದೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ವಿಡಿಯೋ ಸಂವಾದವು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೋವಿಡ್ ವಿಚಾರವಾಗಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಪರಿಪೂರ್ಣ ಮಾಹಿತಿಯನ್ನು ನೀಡುತ್ತಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ|| ಕೆ.ಎಂ. ಸತೀಶ್‌ಕುಮಾರ್ ರವರ ಮಾತನ್ನು ಗ್ರಹಿಸದೆ, ಅರಸೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಎಂ. ಶಿವಲಿಂಗೇಗೌಡರವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಏರುಧ್ವನಿಯಲ್ಲಿ ಒದ್ದುಬಿಡ್ತೀನಿ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಜಿಲ್ಲೆಯ ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ನಿಂದಿಸಿ ಅವಮಾನಿಸಿರುವುದಾಗಿ ದೂರಿದರು. ಜಿಲ್ಲೆಯಲ್ಲಿ ಕಳೆದ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಮಹಾಮಾರಿಯ ನಿಯಂತ್ರಣವನ್ನು ಹಗಲು ರಾತ್ರಿ ಎನ್ನದೆ ಜಿಲ್ಲೆಯ ಅಧಿಕಾರಿಗಳು ಮತ್ತು ನೌಕರ ವರ್ಗದವರಿಂದ ಉತ್ತಮ ಕೆಲಸವನ್ನು ನಿರ್ವಹಿಸಿ ರೋಗಿಗಳ ಆರೋಗ್ಯದ ಹಿತದೃಷ್ಟಿಯಿಂದ ಜೀವದ ಹಂಗನ್ನು ತೊರೆದು ಹಗಲಿರುಳು ಶ್ರಮಿಸುತ್ತಿರುವ ಸರಳ ಸಜ್ಜನಿಕೆಯ ಕೆ.ಎಂ. ಸತೀಶ್ ಕುಮಾರ್ ರವರಿಗೆ ಅತ್ಯಂತ ಕೀಳು ಮಟ್ಟದ ಭಾಷೆಯಲ್ಲಿ ಹಾಗೂ ಏಕವಚನದಲ್ಲಿ ನಿಂದಿಸಿ ಮಾತನಾಡಿರುವುದನ್ನು ಹಾಸನ ಜಿಲ್ಲಾ ಸಮಸ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ನೌಕರ ವರ್ಗದವರು ತೀರ್ವವಾಗಿ ಖಂಡಿಸುತ್ತೇವೆ ಎಂದರು.
ಶಾಸಕರಾದ ಕೆ.ಎಂ. ಶಿವಲಿಂಗೇಗೌಡರವರು ಕೂಡಲೆ ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಇಡೀ ಹಾಸನ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ನೌಕರ ವರ್ಗವು ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆ ಮಾಡಬೇಕಾಗುತ್ತದೆ. ಇದರ ನೇರ ಹೊಣೆಯನ್ನು ಮಾನ್ಯ ಶಾಸಕರಾದ ಕೆ.ಎಂ. ಶಿವಲಿಂಗೇಗೌಡರವರೆ ಹೊರಬೇಕಾಗುತ್ತದೆ ಶಾಸಕರು ಮಾತನಾಡಿರುವ ಮಾತು ಇಡೀ ಆರೋಗ್ಯ ಇಲಾಖೆಗೆ ಮಾಡಿರುವ ಅವಮಾನವಾಗಿದೆ. ಇಂದು ಸಾಂಕೇತಿಕವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಮುಂದೆ ಧರಣಿ ನಡೆಸುತ್ತಿರುತ್ತೇವೆ. ಒಂದು ವೇಳೆ ಕ್ಷಮೆಯಾಚಿಸದಿದ್ದಲ್ಲಿ ಇನ್ನು ಕೆಲ ದಿನಗಳಲ್ಲಿ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.
ಧರಣಿಯಲ್ಲಿ ಆರ್.ಸಿ.ಎಚ್. ಅಧಿಕಾರಿ ಕಾಂತರಾಜು, ತಾಲೂಕು ಆರೋಗ್ಯಾಧಿಕಾರಿ ಡಾ|| ವಿಜಯ್, ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಗೌರವಾಧ್ಯಕ್ಷರಾದ ಆರ್. ವಾಣಿ, ಅಧ್ಯಕ್ಷರು ಬಿ.ಎಲ್. ನಿರ್ವಾಣಿರಾವ್, ಪ್ರಧಾನ ಕಾರ್ಯದರ್ಶಿ ಜಿ.ಎನ್. ಜಗದೀಶ್, ಖಜಾಂಚಿ ಬಿ.ಎನ್. ಜಗದೀಶ್, ಎಂ.ಎನ್. ವಸಂತಕುಮಾರ್ ಇತರರು ಪಾಲ್ಗೊಂಡಿದ್ದರು