ಬೇಲೂರು ಪೊಲೀಸರಿಂದ ಬಿಗಿಕ್ರಮದ ಮತ್ತೊಂದು ಹೆಜ್ಜೆ ಪಟ್ಟಣದ ಒಳ ರಸ್ತೆಗಳಿಗೆ ಬ್ಯಾರಿಕೇಡ್ ನಿರ್ಮಾಣ

ಅನಂತರಾಜೇಅರಸು ಬೇಲೂರು

ಕೊರೊನಾ ಮಹಾಮಾರಿ 2ನೇ ಅಲೆ ಹಾಸನದಲ್ಲಿ ಅಬ್ಬರಿಸುತ್ತಿದೆ.ಪ್ರತಿನಿತ್ಯ ಸಾವು ನೋವಿನ ಸಂಖ್ಯೆ ಇದ್ದೇ ಇದೆ. ಮಕ್ಕಳು ಅನಾಥರಾಗುವುದು, ಹೆತ್ತವರ ಎದುರಿನಲ್ಲಿಯೇ ಮಕ್ಕಳ ಸಾವು,ವಿವಾಹವಾಗಿ ದಿನ ಕಳೆಯುವುದೊರಳಗೇ ಪತಿ-ಪತ್ನಿಯ ಸಾವು.ಇಂತಹ ಧಾರುಣ ಘಟನೆಗಳು ಕೊರೊನಾ ಇಂದ ಎರಗುತ್ತಿದ್ದರೂ ಭಯ, ಎಗ್ಗುತಗ್ಗಿಲ್ಲದಂತೆ ವಾಹನವೇರಿ ರಸ್ತೆಗಿಳಿಯುವ ಮಂದಿಗೆ ಇಲ್ಲಿ ಕೊರತೆಯೇನೂ ಇಲ್ಲ.ಏನಾದರೊಂದು ನೆಪಹೇಳಿಕೊಂಡು ವಾಹನದೊಂದಿಗೆ ಬರುವುದೆಇವರಿಗೆ ಖುಷಿಯಾಗಿದೆ.

ಇದಕ್ಕಾಗಿ ಸರ್ಕಾರ ಏನೆಲ್ಲಾ ನಿಯಮಗಳ ಜಾರಿಗೆ ತಂದರೂ ಪ್ರಯೋಜನವಾಗುತ್ತಿಲ್ಲ. ಮನೆಬಿಟ್ಟು ಹೊರಬರುವವರಿಗೆ ಪೊಲೀಸರು ವಾಹನ ತಡೆದು ದಂಡ ವಿಧಿಸುವುದು, ವಾಹನ ವಶಕ್ಕೆ ಪಡೆಯುವುದು ಮಾಡಿದರೂ ಕ್ಯಾರೆ ಎನ್ನದ ಇಂತಹವರ ಓಡಾಟಕ್ಕೆ ಇದೀಗ ಬೇಲೂರು ಪೊಲೀಸರು ಅನಿವಾರ್ಯವಾಗಿ ಬಿಗಿಕ್ರಮ ಕೈಗೊಂಡಿದ್ದಾರೆ.

ಪಟ್ಟಣದ ಮುಖ್ಯರಸ್ತೆಯಿಂದ ವಿವಿಧ ಬಡಾವಣೆಗೆ ತೆರಳುವ ಮಾರ್ಗಗಳ ಆರಂಭದಲ್ಲಿ ಬ್ಯಾರಿಕೇಡ್ ನಿರ್ಮಿಸಿದ್ದಾರೆ. ದೊಡ್ಡದಾದ ಮರದ ತುಂಡುಗಳಿಂದ ರಸ್ತೆಯನ್ನು ಬಂದ್ ಮಾಡಿಸುತ್ತಿದ್ದಾರೆ. ಇದೀಗ ಬೇಕಾಬಿಟ್ಟಿ ಬಂದು ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಇದು ತಲೆನೋವಾಗಿ ಪರಿಣಮಿಸಿದೆ.ಪಟ್ಟಣದ ಹೊರವಲಯದಲ್ಲಿ ಮುಖ್ಯರಸ್ತೆಗೆ ಅಡ್ಡಲಾಗಿ ತಪಾಸಣಾ ವ್ಯವಸ್ಥೆ ಮಾಡಿ ಪೊಲೀಸರ ನಿಯೋಜಿಸಲಾಗಿದ್ದು ಇದರೊಂದಿಗೆ ಇದೀಗ ಅಡ್ಡರಸ್ತೆಗಳ ಬಂದ್ ಮಾಡಲಾಗಿದೆ.ಪೊಲೀಸರ ಈ ಕ್ರಮದಿಂದ ಇಂದು ನಿಯಮಮೀರಿ ಬರುತ್ತಿದ್ದ ವಾಹನಗಳಿಗೆ ಕಡಿವಾಣ ಹಾಕಿದಂತಾಗಿದ್ದರೂ `ನೀನು ಚಾಪೆ ಸಂದಿ ನುಸುಳಿದರೆ, ನಾನು ರಂಗೋಲಿ ಸಂದಿ ನುಸುಳುವೆ'ಎನ್ನುವಂತೆ ಪಟ್ಟಣದ ಸಂದಿಗೊಂದಿಗಳ, ಗಲ್ಲಿಗಳ ಅರಿವು ಇದ್ದವರು ಕಳ್ಳಗಂಡಿಯ ಮೂಲಕ ಮುಖ್ಯರಸ್ತೆಗೆ ಬಂದು ಹೋಗುವುದು ನಡೆಯುತ್ತಿದೆ. ಇದೂ ಸಹ ಪೊಲೀಸರು`ಮತ್ತೇನು ಕ್ರಮ ಕೈಗೊಳ್ಳಬಹುದು' ಎಂಬ ಪ್ರಶ್ನೆಗೆ ಕಾರಣವಾಗಿದೆ. ವಾಹನ ಸವಾರರು ತಮ್ಮ ವಕ್ರಬುದ್ಧಿ ಬಿಡದೆ ಇದ್ದಲ್ಲಿ ಇನ್ನಷ್ಟು ಬಿಗಿಕ್ರಮದ ಕುರಿತು ಪೊಲೀಸ್ ಅಧಿಕಾರಿಗಳು ಚಿಂತಸದೆ ಇರಲಾರರು. ಈಗ ಅಲ್ಲಲ್ಲಿ ಬಿಟ್ಟಿರುವ ಸಣ್ಣ-ಪುಟ್ಟ ರಸ್ತೆಗಳಿಗೂ ಬ್ಯಾರಿಕೇಡ್ ನಿರ್ಮಾಣ ಆಗದೇ ಇರದು. ಆಗ ತೀರಾ ಇಕ್ಕಟ್ಟಿನ ಸ್ಥಿತಿಗೆ ವಾಹನ ಸವಾರರು ಸಿಲುಕುವ ಸಾಧ್ಯತೆಯಿದೆ.


ಇದನ್ನುಮನಗಂಡು, ಮುಂದಾಗುವ ತೊಂದರೆ ತಪ್ಪಿಸಿಕೊಳ್ಳಲು ಈಗಲೇ ಮನಬಂದಂತೆ ವಾಹನದೊಂದಿಗೆ ಬರುವುದನ್ನು ನಿಲ್ಲಿಸುವುದು ಒಳ್ಳೆಯದು ಎನ್ನುವುದು ಬಲ್ಲವರ ಅಭಿಮತ. ಏನೇ ಆಗಲಿ, ಸಿಪಿಐ ಶ್ರೀಕಾಂತ್ ಹಾಗೂ ಯೋಗೇಶ್ ಮತ್ತು ಪಿಎಸ್‍ಐ ಎಸ್.ಜಿ.ಪಾಟೀಲ್ ಹಾಗೂ ಸಿಬ್ಬಂದಿಯ ಶಾಂತರೀತಿಯ ಕ್ರಮ ಮೆಚ್ಚುವಂತಾದ್ದು. ಆದರೆ ಇದು ಜನರ ದೃಷ್ಟಿಯಲ್ಲಿ ದೌರ್ಬಲ್ಯ ಎಂದಾಗಬಾರದು ಅಷ್ಟೆ.


Post a Comment

Previous Post Next Post