ಬೇಲೂರು : ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದುತಾಲ್ಲೂಕು ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಸನ್ಯಾಸಿಹಳ್ಳಿರಾಜಣ್ಣ ಹೇಳಿದರು.
ಇಲ್ಲಿನ ಜಯಕರ್ನಾಟಕ ಸಂಘಟನೆಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕಿನ ಬೊಮ್ಮಡಿಹಳ್ಳಿ ಗ್ರಾಮದಹೆಚ್.ಡಿ.ದೇವೇಗೌಡ ನಗರ ಹಾಗೂ ಜಯಕರ್ನಾಟಕ ಜಿಲ್ಲಾಧ್ಯಕ್ಷಎಂ.ಕೆ.ಆರ್.ಸೋಮೇಶ್ ಅವರ ನಿವಾಸದ ಆವರಣದಲ್ಲಿ ಗಿಡ ನೆಟ್ಟು ಮಾತನಾಡಿ, ಪರಿಸರ ನಾಶದಿಂದಾಗಿ ಹೆಚ್ಚೆಚ್ಚು ಪ್ರಕೃತಿವಿಕೋಪಗಳು ಉಂಟಾಗಲು ಕಾರಣವಾಗುತ್ತಿದೆ. ಪರಿಸರಸ್ವಚ್ಛವಾಗಿದ್ದರೆ ಸಾರ್ವಜನಿಕರ ಆರೋಗ್ಯ ಉತ್ತಮವಾಗಿರುತ್ತದೆ. ಪರಿಸರದಿಂದ ಮನುಷ್ಯನ ಮೇಲೆ ಯಾವುದೇ ದುಷ್ಪರಿಣಾಮಗಳು ಬೀರದಂತೆ ತಡೆಗಟ್ಟುವುದಕ್ಕಾಗಿ ಪ್ರತಿಯೊಬ್ಬರು ಪರಿಸರದ ಉಳಿವಿಗಾಗಿ ಎಲ್ಲೆಲ್ಲಿ ಸ್ಥಳವಕಾಶ ಸಿಗುತ್ತದೆಯೋ ಅಲ್ಲಿ ಗಿಡಗಳನ್ನು ಬೆಳೆಸಬೇಕೆಂದರು.
ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಎಂ.ಕೆ.ಆರ್.ಸೋಮೇಶ್ ಮಾತನಾಡಿ, ಕೋವಿಡ್ ಸಂಕಷ್ಟದ ಸಮಯದಲ್ಲಿ ಆಕ್ಸಿಜನ್ ಇಲ್ಲದೆ ಸಾಕಷ್ಟು ಜನರು ಮೃತರಾಗಿದ್ದಾರೆ. ಕೃತಕವಾಗಿ ಆಕ್ಸಿಜನ್ ಪಡೆಯಲು ಪರದಾಡಬೇಕಾಯಿತು. ಇದಕ್ಕೆಲ್ಲ ಮುಖ್ಯ ಕಾರಣ ಪರಿಸರ ನಾಶ.ಆದ್ದರಿಂದ ಪ್ರತಿಯೊಂದಕ್ಕೂ ಸರ್ಕಾರದ ನಿಲುವು, ನೆರವು ಮತ್ತು ಕಾರ್ಯಗಳಿಗೆ ಕಾಯದೆ ಸಾಧ್ಯವಾದಷ್ಟು ನಮ್ಮ ಸುತ್ತಮುತ್ತಲಿನಲ್ಲಿ ಗಿಡಗಳ ನೆಡುವ ಮೂಲಕ ಪರಿಸರ ಉಳಿವಿಗೆ ಮುಂದಾಗಬೇಕು ಎಂದರು. ಸಂಘಟನೆ ಕಾರ್ಯಾಧ್ಯಕ್ಷ ಬಿ.ಎಲ್.ಲಕ್ಷ್ಮಣ್, ಉಪಾಧ್ಯಕ್ಷ ಶ್ರೇಯಸ್, ಮುಖಂಡರಾದ ಯಲ್ಲೇಶ್, ಜಗದೀಶ್, ಪಾಪಣ್ಣಿ, ಮನು ಇದ್ದರು.
