ಮಂಗಳೂರು: ರಾಜ್ಯದಲ್ಲಿ ಪ್ರಥಮವಾಗಿ ಮಂಗಳೂರಿನಿಂದ ಬೆಂಗಳೂರಿಗೆ ವಿಸ್ಟಾಡೋಮ್ ಬೋಗಿಗಳ ರೈಲಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು. ರಾಜ್ಯದ ಪ್ರವಾಸೋದ್ಯಮವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಮಂಗಳೂರು ಹಾಗೂ ಬೆಂಗಳೂರಿನ ನಡುವೆ ಹಗಲಿನಲ್ಲಿ ಪ್ರಕೃತಿಯ ರಮಣೀಯ ದೃಶ್ಯಗಳನ್ನು ವೀಕ್ಷಿಸಬಹುದಾಗಿದೆ.
ರೈಲಿನಲ್ಲಿ ಎರಡು ವಿಸ್ಟಾಡೋಮ್ ಬೋಗಿಗಳಿದ್ದು, ಪ್ರತಿ ಬೋಗಿಯಲ್ಲಿ 44 ಆಸನ ಸಾಮಥ್ರ್ಯ ಹೊಂದಿದೆ, ಅಗಲವಾದ, ದೊಡ್ಡ ಕಿಟಕಿಗಳು ಪ್ರಯಾಣಿಕರಿಗೆ ಸ್ಪಷ್ಟವಾದ ನೋಟವನ್ನು ನೀಡುತ್ತದೆ. ವಿಸ್ಟಾಡೋಮ್ ಬೋಗಿಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಎಲ್‍ಎಚ್‍ಬಿ (ಲಿಂಕೆ-ಹಾಫ್ಮನ್-ಬುಶ್ ಪ್ಲಾಟ್‍ಫಾರ್ಮ್ / ತಂತ್ರಜ್ಞಾನ) ನಲ್ಲಿ ತಯಾರಿಸಲಾಗಿದೆ. ಈ ಬೋಗಿಗಳು ಗಾಜಿನ ಮೇಲ್ಚಾವಣಿ ಹೊಂದಿದ್ದು, ಇದು ಬೇಸಿಗೆಯಲ್ಲೂ ಆಕಾಶದ ಸ್ಪಷ್ಟ ನೋಟಗಳನ್ನು ನೀಡುತ್ತದೆ.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು, ಧಾರ್ಮಿಕ ದತ್ತಿ ಹಾಗೂ ಧರ್ಮಾದಾಯ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಅಧ್ಯಕ್ಷತೆ ವಹಿಸುವರು. ಶಾಸಕರಾದ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.