ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೇಲೂರು ವತಿಯಿಂದ 73ನೇ ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಅಂಗವಾಗಿ ಧ್ವಜಾರೋಹಣ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಪಟ್ಟಣದ ಬಿಜಿಎಸ್ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಂಶುಪಾಲ ಚಂದ್ರಶೇಖರ್ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವವನ್ನು ಬೆಳಸಿಕೊಂಡರೆ ಮುಂದೆ ಉತ್ತಮ ಪ್ರಜೆಯಾಗಬಹುದು, ಸರಳತೆ ವಿದ್ಯಾರ್ಥಿಯ ವ್ಯಕ್ತಿತ್ವವನ್ನು ಬೆಳೆಸುತ್ತದೆ,ಭವ್ಯ ಭಾರತದ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಹೆಜ್ಜೆ ಮಹತ್ವದ್ದಾಗಿದೆ ಎಂದರು.
ರಾಷ್ಟ್ರೀಯ ವಿದ್ಯಾರ್ಥಿ ದಿವಸದ ಈ ಒಂದು ಕಾರ್ಯಕ್ರಮದ ಮುಖಾಂತರ ವಿದ್ಯಾರ್ಥಿಗಳಲ್ಲಿ ದೇಶಕ್ಕಾಗಿ ದುಡಿಯುವಂತಹ ಮತ್ತು ದೇಶಕ್ಕೋಸ್ಕರ ಸೇವೆಯನ್ನು ಸಲ್ಲಿಸುವಂತಹ ಮನೋಭಾವನೆಯನ್ನು ಬೆಳೆಸುವ ಉದ್ದೇಶವಿದೆ, ಇಂದಿನ ಯುವ ಜನಾಂಗ ನಮ್ಮ ದೇಶಕ್ಕೆ ಅಗತ್ಯವಿರುವ ಕೆಲಸ ಕಾರ್ಯಗಳನ್ನು ಗುರುತಿಸಿ ಅದರಲ್ಲಿ ತಮ್ಮ ಪ್ರಾವೀಣ್ಯತೆಯೊಂದಿಗೆ ಮತ್ತು ದಕ್ಷತೆಯೊಂದಿಗೆ ತಮ್ಮನ್ನು ತೊಡಗಿಸಿಕೊಂಡು ದೇಶವನ್ನು ಮುನ್ನಡೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದು ಉಪನ್ಯಾಸಕ ವೀರಭದ್ರಪ್ಪ ಹೇಳಿದರು.
ರಾಜ್ಯ ಸಹ ಕಾರ್ಯದರ್ಶಿಯಾದ ಐಶ್ವರ್ಯ ಮಾತನಾಡಿ ಎಬಿವಿಪಿ ಎಂದರೆ ಜವಾಬ್ದಾರಿಯುತ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತನ್ನದೇ ಆದಂತಹ ಸೈದ್ಧಾಂತಿಕ ಭೂಮಿಕೆಯನ್ನು ಹೊಂದಿದೆ. ಶೋಷಣೆ ಮುಕ್ತ ಸಮಾನತೆ ಯುಕ್ತ ಸಮಾಜದ ನಿರ್ಮಾಣ ಮಾಡುವ ಜಗತ್ತಿನ ಏಕೈಕ ಸಂಘಟನೆ ಎಂದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ನಾಗರಾಜ್, ಕಾರ್ಯಕರ್ತ ಗಿರೀಶ್ , ಮಾತನಾಡಿದರು. ತಿಮ್ಮಶೆಟ್ಟಿ, ಉಪನ್ಯಾಸಕ ಮಹೇಶ್, ಎ ಸಿ ನಿರಂಜನ್ , ಅಕ್ಷಯ್ , ವಂದನಾಶ್ರೀ , ಹೇಮಂತ್ , ಶ್ವೇತ , ಪ್ರಿಯಾಂಕಾ ಇದ್ದರು.