ಹಾಸನ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸಂತೋಷ್ ಅವರು ಸುದ್ದಿಗೋಷ್ಠಿಯಲ್ಲಿ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದ ಶಾಸಕ ಶಿವಲಿಂಗೇಗೌಡ, ನನ್ನ ವಿರುದ್ಧ ಅವರು ಕಾನೂನು ಹೋರಾಟ ಮಾಡಲಿ. ತಪ್ಪು ಮಾಡಿದ್ದರೆ ಜೈಲಿಗೆ ಹಾಕಲಿ ಎಂದು ಆಗ್ರಹಿಸಿದರು.
ಜೆಡಿಎಸ್ನಿಂದ ಹೊರ ಹೋಗಿರುವ ಸದಸ್ಯರನ್ನು ಮರಳಿ ಕರೆತರಲು ಮೂವರು ಸದಸ್ಯರೊಂದಿಗೆ ಮಾತುಕತೆ ನಡೆಸುವ ವೇಳೆ ನಾನು ಮಾತನಾಡಿರುವುದು ನಿಜ. ಆದರೆ ಅವರು ರೆಕಾರ್ಡ್ ಮಾಡಿರುವುದು ನನಗೆ ಗೊತ್ತಿಲ್ಲ. ಪಕ್ಷದಲ್ಲಿ ನಾನು ಬೆಳೆಸಿದವರು ದ್ರೋಹ ಮಾಡಿ ಹೋಗಿರುವುದರಿಂದ ಆಡುಭಾಷೆಯಲ್ಲಿ ಸಿಟ್ಟಾಗಿ ಮಾತನಾಡಿದ್ದೇನೆ. ಯಾವುದೇ ದುರುದ್ದೇಶದಿಂದ ನಾನು ಯಾರನ್ನೂ ನಿಂದನೆ ಮಾಡಿಲ್ಲ. ಬಾಯಿತಪ್ಪಿನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ. ಆಡಿಯೋ ಎಡಿಟ್ ಮಾಡಿ ನಾನು ಮಾತನಾಡಿರುವುದನ್ನು ಮಾತ್ರ ಎಲ್ಲೆಡೆ ಹರಿಯಬಿಡಲಾಗುತ್ತಿದೆ. ಇಡೀ ಆಡಿಯೋ ಸಂಭಾಷಣೆ ಬಗ್ಗೆ ತನಿಖೆ ಮಾಡಿಸಲಿ ಎಂದು ಇದೇ ವೇಳೆ ಶಿವಲಿಂಗೇಗೌಡ ಒತ್ತಾಯಿಸಿದರು.
ಅರಸೀಕೆರೆಗೆ ನೀರು ತಂದಿದ್ದು ನಾನು, ಬಿಎಸ್ವೈ ಅಲ್ಲ
ಅರಸೀಕೆರೆ ನಗರ ಹಾಗೂ ತಾಲೂಕಿಗೆ ಹೇಮಾವತಿ ನದಿ ಮೂಲದಿಂದ ನೀರು ತರಲು ನನ್ನ ಶ್ರಮವಿದೆ. ಇದಕ್ಕಾಗಿ ಫ್ಲೋರೈಡ್ ಚೂರುಗಳನ್ನು ಸದನದಲ್ಲಿ ಸುರಿದು ಪ್ರತಿಭಟನೆ ಮಾಡಿದ್ದೇನೆ. ಇದು ಜೇನುಕಲ್ ಸಿದ್ದೇಶ್ವರನ ಆಣೆಗೂ ಸತ್ಯ.ಮಾನವ ಹಕ್ಕು ಆಯೋಗಕ್ಕೂ ದೂರು ನೀಡುವೆ ಎಂದು ಬಿಜೆಪಿ ಸರ್ಕಾರವೇ ಯೋಜನೆಗೆ ಮಂಜೂರಾತಿ ನೀಡಿತು. ಬಿಜೆಪಿ ಶಾಸಕರ ಅವಧಿಯಲ್ಲಿ ಕುಡಿಯುವ ನೀರಿನ ಯೋಜನೆ ಮಂಜೂರಾಗಿದೆ, ಇದಕ್ಕಾಗಿ ಯಡಿಯೂರಪ್ಪ ಅವರು ಪಾದಯಾತ್ರೆ ಮಾಡಿದ್ದಾರೆ ಎಂಬುದನ್ನು ಸಾಬೀತು ಮಾಡಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಗುಡುಗಿದರು.
6 ತಿಂಗಳ ಹಿಂದೆ ಕ್ಷೇತ್ರಕ್ಕೆ ಬಂದವರು, ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವುದು ಸರಿಯಲ್ಲ. ನಮ್ಮ ಸದಸ್ಯರಿಗೆ ಹಣದ ಆಮಿಷ ತೋರಿಸಿ ಬಿಜೆಪಿಗೆ ಸೆಳೆದಿದ್ದಾರೆ. ನಮ್ಮಲ್ಲಿ ಯಾವುದೇ ಬಂಡಾಯ ಇಲ್ಲ ಎಂದು ಸ್ಪಷ್ಟಪಡಿಸಿದರು. ತಾಲೂಕಿನ 33 ಗ್ರಾ.ಪಂ.ಗಳಲ್ಲಿ ನಮ್ಮ ಬೆಂಬಲಿತರೇ ಅಧ್ಯಕ್ಷರಾಗಿದ್ದಾರೆ. 510 ಗ್ರಾ.ಪಂ.ಸದಸ್ಯರು ಒಟ್ಟಾಗಿಯೇ ಇದ್ದಾರೆ ಎಂದು ಸ್ಪಷ್ಟಪಡಿಸಿದರು.