ಹಾಸನ: ಜೆಡಿಎಸ್ ಸದಸ್ಯರಿಗೆ ಹತ್ತು ಲಕ್ಷ ರೂ. ಹಣದ ಆಮಿಷ ಒಡ್ಡಿ ಬಿಜೆಪಿಗೆ ಸೇರುವಂತೆ ಪುಸಲಾಯಿಸಿದ್ದಾರೆ ಎಂದು ಎಚ್. ಡಿ. ರೇವಣ್ಣ ಮಾಡಿದ್ದ ಆರೋಪವನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಎನ್. ಆರ್. ಸಂತೋಷ್ ತಳ್ಳಿ ಹಾಕಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಜೇನುಕಲ್ಲು ಸಿದ್ದೇಶ್ವರರ ಆಣೆಯಾಗಿಯೂ ಆ ಹಣಕ್ಕೂ ನನಗೂ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ.
ಬಾಂಬೆಗೆ ಹೋದವರು ಶಿವಲಿಂಗೇಗೌಡರೇ ಹೊರತು ನಾನಲ್ಲ ಎಂದಿರುವ ಸಂತೋಷ್, ರೇವಣ್ಣ ಅವರ ಹೇಳಿಕೆ ಅತ್ಯಂತ ಬಾಲಿಷವಾದದ್ದು ಎಂದು ತಳ್ಳಿ ಹಾಕಿದ್ದಾರೆ. ಅಷ್ಟೇ ಅಲ್ಲ, ಟಿಕೆಟ್ ಕೊಟ್ಟರೆ ಕಣ್ಣಿಗೆ ಒತ್ತಿಕೊಂಡು ಸ್ಪರ್ಧೆ ಮಾಡುತ್ತೇನೆ ಎಂದೂ ಸಂತೋಷ್ ಹೇಳಿದ್ದಾರೆ.
ನನ್ನ ಮೇಲೆ ಶಾಸಕರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಸಂತೋಷ್, ಈ ಆರೋಪಕ್ಕೂ ನನಗೂ ಸಂಬಂಧವಿಲ್ಲ, ಇದು ಅವರ ಪಕ್ಷದ ಆಂತರಿಕ ವಿಚಾರ ಎಂದಿದ್ದಾರೆ. ಆದ್ರೆ, ಅವರ ಪಕ್ಷದ ಸದಸ್ಯರಿಗೆ ಲಕ್ಷಾಂತರ ರೂ ಹಣ ನೀಡಿದ್ದೇನೆ ಎಂದು ನನ್ನ ಮೇಲೆ ಆರೋಪ ಮಾಡಿದ್ದಾರೆ. ಹೀಗಾಗಿ, ಈ ಬಗ್ಗೆ ವಕೀಲರೊಂದಿಗೆ ಚರ್ಚಿಸಿದ್ದೇನೆ. ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇನೆ ಎಂದೂ ಸಂತೋಷ್ ಎಚ್ಚರಿಕೆ ನೀಡಿದ್ದಾರೆ.
ನಿಮ್ಮ ಹುಳುಕು, ನಿಮ್ಮ ಆಂತರಿಕ ಸಮಸ್ಯೆಗೆ ನನ್ನನ್ನು ಯಾಕೆ ಎಳೆದು ತರುತ್ತೀರಿ ಎಂದು ಹರಿಹಾಯ್ದ ಸಂತೋಷ್, ಶಾಸಕರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು. ಕ್ಷೇತ್ರದ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಸುಳ್ಳು ಹೇಳುವುದು ನಿಮಗೆ ಶೋಭೆ ತರಲ್ಲ ಎಂದು ಎಚ್ಚರಿಸಿದ ಸಂತೋಷ್, ಇನ್ನಾದರೂ ಇದನ್ನು ನಿಲ್ಲಿಸಿ ಎಂದು ಆಗ್ರಹಿಸಿದರು.
ಜೆಡಿಎಸ್ನಿಂದ ಗೆದ್ದಿದ್ದ ವಾರ್ಡ್ನಲ್ಲಿ ನಡೆದ ನಗರಸಭೆ ಉಪಚುನಾವಣೆಯಲ್ಲಿ ಬಿಜೆಪಿ ಸದಸ್ಯನನ್ನು ಜನ ಆಯ್ಕೆ ಮಾಡಿದ್ದಾರೆ ಎಂದು ಹೇಳಿದ ಸಂತೋಷ್, ಸುಳ್ಳು ಹೇಳುವ ಮೂಲಕ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ನಾನೊಬ್ಬ ಪಕ್ಷದ ಕಾರ್ಯಕರ್ತ, ಚುನಾವಣೆ ಆಕಾಂಕ್ಷಿ ಕೂಡಾ ಅಲ್ಲ ಎಂದು ಹೇಳಿದ್ದಾರೆ. ಆದ್ರೆ, ನಮ್ಮ ಪಕ್ಷದ ಅಭ್ಯರ್ಥಿಯನ್ನು ಅರಸೀಕೆರೆಯಲ್ಲಿ ಮುಂದಿನ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದು ಸಂತೋಷ್ ಹೇಳಿದ್ದಾರೆ.
ಜೆಡಿಎಸ್ ಪಕ್ಷದ ಏಳು ಸದಸ್ಯರು ನಗರಸಭೆಯಲ್ಲಿ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಿಕೊಡಿ ಎಂದು ಡಿಸಿಗೆ ಮನವಿ ಕೊಟ್ಟಿದ್ದಾರೆ. ಅದರ ಜೊತೆ ತಮ್ಮ ವಾರ್ಡ್ಗಳ ಅಭಿವೃದ್ಧಿಗಾಗಿ ಇಬ್ಬರು ಪಕ್ಷೇತರ ಸದಸ್ಯರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಜೆಡಿಎಸ್ ಸದಸ್ಯರ ಭಿನ್ನಾಭಿಪ್ರಾಯ, ಆ ಪಕ್ಷದ ಆತಂರಿಕ ವಿಚಾರವಾಗಿದ್ದು, ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಸಂತೋಷ್ ಹೇಳಿದ್ದಾರೆ.
ಪಕ್ಷೇತರರಿಗೆ ಬಿಜೆಪಿ ಮೇಲೆ ಒಲವಿದೆ, ನಮ್ಮ ವಾರ್ಡ್ಗಳಲ್ಲಿ ಕೆಲಸ ಆಗುತ್ತೆ ಅಂದುಕೊಂಡಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ, ನಾವು ಅದನ್ನು ಸ್ವಾಗತ ಮಾಡುತ್ತೇವೆ ಎಂದಿರುವ ಸಂತೋಷ್, ಶಾಸಕ ಶಿವಲಿಂಗೇಗೌಡ ಅವರು ತಮ್ಮ ಹುಳುಕು, ದೌರ್ಬಲ್ಯ ಮುಚ್ಚಿಕೊಳ್ಳಲು ನನ್ನ ಹೆಸರು ಬಳಸಿಕೊಳ್ಳುತ್ತಿದ್ದಾರೆ. ಶಿವಲಿಂಗೇಗೌಡರು ನಗರಸಭೆ ಸದಸ್ಯರ ಸಭೆ ಕರೆದು ಮಾತನಾಡಿದ್ದಾರೆ. ಸಭೆಗೆ ಸಹಕಾರ ಕೊಡಬೇಡಿ, ವಿರೋಧ ಮಾಡಿ, ಯಾವುದೇ ನಿರ್ಣಯಗಳು ಪಾಸ್ ಆಗಬಾರದು ಎಂದು ಹೇಳುತ್ತಿದ್ದಾರೆ. ಇದೇ ರೀತಿ ಸಂಘರ್ಷ ಮುಂದುವರಿದರೆ ವಾರ್ಡ್ಗಳಲ್ಲಿ ಕೆಲಸ ಆಗಲ್ಲ. ಶಿವಲಿಂಗೇಗೌಡರ ಪರಮಾಪ್ತರೊಬ್ಬರು ಎಲ್ಲಾ ಕೆಲಸಗಳಲ್ಲಿ ಮೂಗು ತೂರಿಸುತ್ತಿದ್ದಾರೆ. ಇದರಿಂದ ಬೇಸತ್ತ ಜೆಡಿಎಸ್ ಸದಸ್ಯರು ಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ ಎಂದು ಸಂತೋಷ್ ವಿವರಿಸಿದರು.