ಕನ್ನಡಕ್ಕಾಗಿ ಕೈ ಎತ್ತು; ನಿನ್ನ ಕೈಕಲ್ಪವೃಕ್ಷವಾಗುತ್ತದೆ.
ಕನ್ನಡಕ್ಕಾಗಿ ಕೊರಳೆತ್ತು ;ಅಲ್ಲಿ ಪಾಂಚಜನ್ಯ ಮೂಡುತ್ತದೆ/
ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು,ಇಂದು ಅದೆ
ಗೋವರ್ಧನ ಗಿರಿಯಾಗುತ್ತದೆ.//
ರಾಷ್ಟ್ರಕವಿ ಕುವೆಂಪು ರವರು ಕನ್ನಡಿಗರಿಗೆ ನೀಡಿರುವ ಈ ದೀಕ್ಷಾಮಂತ್ರವನ್ನು ತಮ್ಮ ಪ್ರತಿನಿತ್ಯದ ಪ್ರಾರ್ಥನೆ ಮಾಡಿಕೊಂಡು ತಾಯಿ ಭುವನೇಶ್ವರಿಯ ಪಾದಾರವಿಂದಗಳಿಗೆ ಕವಿತೆಯೆಂಬ ಕುಸುಮ ಚೆಲ್ಲುತ್ತಾ ಭಕ್ತಿಯಿಂದ ನಮಿಸಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಮೂಲಕ ಕರ್ನಾಟಕದ ಮೂಲೆಮೂಲೆಗಳಿಗೂ,ಹೊರರಾಜ್ಯಗಳಿಗೂ ಅಷ್ಟೇಯಲ್ಲದೇ ಹೊರದೇಶಗಳವರೆಗೂ ಕನ್ನಡದ ತೇರನ್ನು ನಿರಂತರವಾಗಿ, ಶ್ರದ್ಧೆಯಿಂದ ಎಳೆಯುತಿರುವ ನಮ್ಮ ವೇದಿಕೆಯ ಹೆಮ್ಮೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ.ಕೊಟ್ರೇಶ್ ಎಸ್ ಉಪ್ಪಾರ್ ರವರ ಮೊದಲ ಕವನಸಂಕನವಾದ 'ಮುಗಿಲಾಚೆಗಿನ ಮಾತು' ನ ಕವಿತೆಗಳ ಭಾವವನ್ನು ನನ್ನ ತೊದಲು ನುಡಿಗಳಲ್ಲಿ ಹೇಳಲು ಪ್ರಯತ್ನಿಸಿರುವೆ.
'ಕೀರ್ತಿಯನ್ನಲ್ಲದೆ ಕಾಯಕವನ್ನು ಬೆನ್ನಟ್ಟುವ ವ್ಯಕ್ತಿಯನ್ನು ಕೀರ್ತಿಯೇ ಬೆನ್ನಟ್ಟುತ್ತದೆ'ಎಂಬುದಕೆ ಸೂಕ್ತ ನಿದರ್ಶನ ಶ್ರೀ ಕೊಟ್ರೇಶ್ ಎಸ್ ಉಪ್ಪಾರ ರವರು ಎಂದರೆ ತಪ್ಪಾಗಲಾರದು. ಇವರ ಸಾಹಿತ್ಯಿಕ ಸಾಧನೆ ಅದ್ಬುತ! ಚಿಕ್ಕ ವಯಸ್ಸಿನಲ್ಲಿ ೭೦ ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ.(ಕಾವ್ಯ-೦೬,ವಚನ-೧೧,ವಿಜ್ಞಾನ-೬,ಶಿಕ್ಷಣ-೧೨,ವಿಮರ್ಶೆ-೧೧,ಸಂಪಾದಕೀಯ-೧೪,ಅಚ್ಚಿನಲ್ಲಿ-೬)ಇವರ ಸಾಧನೆ ಕುರಿತು ನಾಡಿನ ಹೆಸರಾಂತ ಸಾಹಿತಿಗಳಾದ ದಿವಂಗತ ಪ್ರೊ: ವಸಂತ ಕುಷ್ಟಗಿ ಅವರು,"೧೯೮೦ ರಲ್ಲಿ ಮಾನವ ಸಂಪನ್ಮೂಲದ ಚೇತನಗಳಲ್ಲಿ ಒಂದಾಗಿ ಬಂದ ಶ್ರೀ ಕೊಟ್ರೇಶ್ ಚಿಕ್ಕ ವಯಸ್ಸಿನಲ್ಲಿ ಅವರ ದೃಷ್ಟಿಕೋನ,ಸಾಧಿಸಿರುವ ಚಿಂತನಾಸಂಪತ್ತು ಬೆರಳುಕಚ್ಚುವಂತಹದ್ದು. ಅವರ ಲೋಕಜ್ಞಾನ ಸಂಗ್ರಹವು ತುಂಬಾ ವೈವಿಧ್ಯಪೂರ್ಣವಾದದ್ದು" ಎಂದಿರುವುದು ಹೌದು ಹೌದೆನ್ನೆವಂತಿದೆ.
ಮಾಯಾ ಮಲಿನ ಮನದಿಂದಗಲದೆ
ಕಾಯದ ದಂದುಗ ಕಳೆಯಿಂದಗಲದೆ
ಅರಿವು ಬರಿದೆ ಬಪ್ಪುದೆ..?
ವ್ಯಾಮೋಹದ ಮಾಯಾ ಮಾಲಿನ್ಯವನ್ನು ದೂರ ಸರಿಸದೇ,ದಂದುಗ ( ಚಿಂತೆ) ವ್ಯಸನ,ವ್ಯಥೆಗಳು ದೇಹಕ್ಕಂಟಿದ ಈ ಕ್ಲೇಶಗಳನ್ನು ಕಳೆದುಕೊಳ್ಳದೆ ಅರಿವು ಸಾಧ್ಯವಿಲ ಎಂಬುದನ್ನರಿತು ಅರಿವಿನ ಹಾದಿಯನ್ನು ಹುಡುಕುತ್ತಾ ಕೊಟ್ರೇಶ್ ಸರ್ ರವರು ಕನ್ನಡಸಾಹಿತ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ತಪಸ್ವಿಯಾಗಿ ಏಕಾಗ್ರಚಿತ್ತದಿಂದ ತೊಡಗಿಸಿಕೊಂಡು ಸಿದ್ಧಿ ಪ್ರಾಪ್ತಿಮಾಡಿಕೊಂಡಿದ್ದಾರೆ. ಈ ಕನ್ನಡತಪಸ್ವಿಯ ಚೊಚ್ಚಲ ಕವನ ಸಂಕಲನ ಮುಗಿಲಾಚೆಗಿನ ಮಾತನ್ನು ಆಲಿಸಲು ನಾವೀಗ ಬಾನೆತ್ತರಕೆ ಹಾರೋಣವೇ....???
ಅವತರಿಸಿ ಬಾ
ಮತ್ತೊಮ್ಮೆ ಮಗದೊಮ್ಮೆ
ಅವತರಿಸಿ ಬಾ ರಸೃಷಿಯೇ
ಕನ್ನಡದ ಇಂಪನ್ನು ಸೂಸು ಬಾ
ಕನ್ನಡದ ಕಂಪನ್ನು ಬೀರು ಬಾ
ನಮ್ಮಗಳ ಕರ್ಣಕ್ಕೆ ಮೀಯು ಬಾ...
ಈ ಸಂಕಲನದ ಮೊದಲ ಕವನ ಇದಾಗಿದ್ದು...ಕವಿ ತಾವು ಪ್ರಭಾವಕ್ಕೆ ಒಳಗಾದ ರಸಋಷಿ ಕುವೆಂಪುರವರನ್ನು ಮತ್ತೊಮ್ಮೆ ಮಗದೊಮ್ಮೆ ಅವತರಿಸಿ ಬಾ ರಸ ಋಷಿಯೇ ಎಂದು ಕೂಗಿ ಕೂಗಿ ಕರೆದಿದ್ದಾರೆ. ಅವರ ಅಗಲುವಿಕೆಯ ನೋವನ್ನು ತುಂಬಾ ಸೊಗಸಾಗಿ ಚಿತ್ರಿಸಿದ್ದಾರೆ.
ಕರುನಾಡು ಕಂಡ ಕಿಶೋರಚಂದ್ರನೇ
ಸಾವಿರಾರು ಕಲ್ಲಿನ ಶಿಲೆಗಳು
ನಿನ್ನ ಸ್ಪರ್ಶ ವೀಯದೇ
ಅಹಲ್ಯೆಯಂತೆಯೇ ಇಹರು
ಶಿಲಾಶಕ್ತಿಗಳಿಗೆ ಪುನಶ್ಚೇತನ
ನೋಡೋನೋರ್ವಕವಿ ವಲ್ಲಭ
ಕರುನಾಡು ಕುಲಕೋಟಿಗೆ//ಅವತರಿಸಿ ಬಾ//
"ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ ಆ ನಂತರ ಆ ಮಗುವನ್ನು ಜಾತಿ,ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಹಾಗಾಗಬಾರದು ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು" ಎಂಬ ಸಂದೇಶವನ್ನು ಸಾರುವ ಮೂಲಕ ಪ್ರತಿಯೊಬ್ಬ ಮಗುವು ಸರ್ವಶ್ರೇಷ್ಠ ಎಂಬುದನ್ನು ಘಂಟಾಘೋಷವಾಗಿ ಸಾರಿದ ಮಲೆನಾಡಿನ ಮುಕುಟ ಕುವೆಂಪು ರವರನ್ನು ಕವಿ ಈ ಕವಿತೆಯಲ್ಲಿ ಕರುನಾಡು ಕಂಡ ಕಿಶೋರಚಂದ್ರನೇ ಸಾವಿರಾರು ಕಲ್ಲಿನ ಶಿಲೆಗಳು (ಯುವಕವಿಗಳು)ನಿಮ್ಮ ಸ್ಪರ್ಷವಿಲ್ಲದೇ ಅಹಲ್ಯೆಯಂತೆಯೇ ಇದ್ದಾರೆ ಅವರನ್ನು ಸ್ಪರ್ಶಿಸಿ ಜೀವಂತಗೊಳಿಸಲು ಮತ್ತೊಮ್ಮೆ ಅವತರಿಸಿ ಬಾ ಎಂದು ಗೋಗರೆದಿರುವುದು ಮನಮುಟ್ಟುವಂತಿದೆ.
ಜಲಸಮಾಧಿ
ಜುಳು ಜುಳು ಹರಿಯುವ ನದಿ
ಕಣ್ಣು ಹಾಯಿಸಿದಷ್ಟು ಕಾಣುವ ಹಸಿರು
ಮನ ಪುಳಕಗೊಳಿಸುವ
ಹಕ್ಕಿಗಳ ಕಲರವ
ಮೈ ಮರೆವ ನಿಸರ್ಗ ಸೌಂದರ್ಯ
ಮೋಡಕ್ಕೆ ಮುತ್ತಿಟ್ಟ
ಹಿಮಶಿಖರದ ಟೋಪಿಗಳು...
ಮನುಷ್ಯನ ಹಾಗೇ ಸಾಹಿತ್ಯವೂ ಪರಿಸರದ ಶಿಶು,ಸಾಹಿತ್ಯ ಸೃಷ್ಟಿಯೂ ಅದಕನುಗುಣವಾಗಿಯೇ ಆಗಿರುತ್ತದೆ ಜೊತೆಗೆ ಸಾಹಿತ್ಯವು ಆ ಕಾಲದ ವಾಸ್ತವ ಸ್ಥಿತಿಯನ್ನು ಹೇಳುತ್ತಲೇ ಸಮಾಜ ಎತ್ತ ಸಾಗುತ್ತಿದೆ,ಅದರ ಗುರಿಯೇನು ಎಂಬುದನ್ನು ಬಿಂಬಿಸುತ್ತದೆ. ಈ ನಿಟ್ಟಿನಲ್ಲಿ ಕವಿಯ ಜಲಸಮಾಧಿ ಕವಿತೆ
ಇಂದು ನಾವು ಅತಿಯಾದ ತಂತ್ರಜ್ಞಾನ ಬಳಸಿಕೊಂಡು ಪ್ರಕೃತಿಯ ವಿಕೋಪಕ್ಕೆ ನಾವೇ ಕಾರಣರಾಗಿದ್ದು....ಭೂತಕಾಲದಲ್ಲಿ ನಮ್ಮ ಪರಿಸರ ಹೇಗಿತ್ತು ಎಂಬುದನ್ನು ಸೊಗಸಾಗಿ ಚಿತ್ರಿಸಿದ್ದು ಹಿಮಶಿಖರಗಳನ್ನು ಮೋಡಕ್ಕೆ ಮುತ್ತಿಟ್ಟ ಟೋಪಿಗಳು ಎಂದು ಬಣ್ಣಿಸಿರುವ,ಕವಿಯ ಕಲ್ಪನೆಯ ಈ ಸೊಬಗು ಮನವನು ತಣಿಸುತ್ತದೆ.
ಆದರೀಗ ಹಸಿರಿಲ್ಲ
ನೀರಿಲ್ಲ,ಟೋಪಿಗಳು ಮಾಯ!
ಎಲದಲೆಲ್ಲೂ ಖಾಲಿ ಖಾಲಿ!ಹೀಗೇಕಾಯ್ತಂದು ತಲೆತುಂಬ
ಸಾವಿರಾರು ಪ್ರಶ್ನೆಗಳು
ವರ್ತಮಾನದಲ್ಲಿ ಆ ಸುಂದರ ಪರಿಸರ ಹೇಗೆ ಬದಲಾಯಿತು,ಇದಕ್ಕೆ ಕಾರಣಗಳೇನು...ಹೀಗೇಕಾಯ್ತು ಎಂಬ ಸಾವಿರಾರು ಪ್ರಶ್ನೆಗಳನ್ನು ಕವಿ ತಮ್ಮಲ್ಲಿ ಹಾಕಿಕೊಂಡು ಸುಂದರ ಪರಿಸರ ರಕ್ಷಿಸುವಲ್ಲಿ ನಾವು ಹೇಗೆ ಎಡವಿದ್ದೇವೆ ಎಂಬುದರ ಆತ್ಮಾವಲೋಕನ ಮಾಡಿಕೊಂಡಿದ್ದು ಸಮಾಜವನ್ನು ಎಚ್ಚರಿಸುವ ಪ್ರಯತ್ನ ಮಾಡಿರುವುದು ಅವರಿಗಿರುವ ಸಾಮಾಜಿಕ ಕಳಕಳಿಯನ್ನು ಎತ್ತಿತೋರಿಸುತ್ತದೆ.
ಹಸಿರ ಹೊದಿಕೆಯ ಸರ್ವನಾಶ!
ಬಿಸಿಯಾಗುತ್ತಿರುವ ಧರೆ!
ಕರಗುತ್ತಿರುವ ಹಿಮಗಡ್ಡೆ..!
ಧರೆ,ಜಲ,ವಾಯುನಾಶಕ್ಕೆ
ಪಣ ತೊಟ್ಡು ನಿಂತಿಹೆವು.
'ಮರ ನಕ್ಕರೆ ಜಗ ನಗುವುದು;ಮರ ಅತ್ತರೆ ಜಗ ಅಳಿವುದು' ಈ ವಾಕ್ಯ ಹಸಿರು ಎಷ್ಟು ಮುಖ್ಯ ಎಂಬುದು ತಿಳಿಯುತ್ತದೆ. ಹಸಿರೇ ಉಸಿರು ಎಂದು ತಿಳಿದಿದ್ದರೂ ಅದರ ಪೋಷಣೆ ಮಾಡಲಾಗುತ್ತಿಲ್ಲ, ನೀರು ಅಮೂಲ್ಯ ಎಂದು ತಿಳಿದಿದ್ದರೂ ಮಿತವಾಗಿ ಬಳಸುತ್ತಿಲ್ಲ,ಶುದ್ಧಗಾಳಿ ಜೀವದುಸಿರು ಎಂಬುದು ಅರಿತಿದ್ದರೂ ಶುಭ್ರವಾಗಿಟ್ಟುಕೊಳ್ಳದೇ ಅತಿಯಾದ ತಂತ್ರಜ್ಞಾನ ಬಳಕೆಯಿಂದ ವಾಯುಮಾಲಿನ್ಯಧರೆ ಮಾಡುತ್ತಿದ್ದೇವೆ. ಇವೆಲ್ಲದರ ಅರ್ಥ ಧರೆ,ಜಲ,ವಾಯು ನಾಶಕ್ಕೆ ಪಣ ತೊಟ್ಟು ನಿಂತಿದ್ದೇವೆ ಎಂಬ ವಾಸ್ತವ ಸತ್ಯವನ್ನು ಸಾರುವ ಮೂಲಕ ಕವಿಯ ಮನದ ಅಳಲನ್ನು ತೋಡಿಕೊಂಡಿದ್ದಾರೆ.
ಭವಿಷ್ಯದ ದುರಂತವ
ಇಂದೇ ಆಹ್ವಾನಿಸುತ್ತಾ
ಸಾಗರದೊಡಲ ನಾಗರೀಕತೆಯಾಗಿ
ಅವಶೇಷಗಳ ಪಟ್ಟಿಗೆ ಸೇರಿ
ಮುಂದಿನ ನಾಗರೀಕತೆಗೆ
ಸಂಶೋಧನೆ ಪಳೆಯುಳಿಕೆ
ಅಗೋ..ಕೈ ಬೀಸಿ ಕರೆಯುತಿದೆ
ಸಾಗೋಣ ಬನ್ನಿ ಸಾಗರಕೆ
ಜಲ ಸಮಾಧಿಯಾಗೋಣ ಬನ್ನಿ....
'ಪ್ರಕೃತಿ ನಶಿಸಿದರೆ ಮನುಕುಲವು ನಶಿಸುತ್ತದೆ' ಎಂಬುದನ್ನು ಮನಗಂಡಿರುವ ಶ್ರೀಕೊಟ್ರೇಶ್ ಸರ್ ರವರು ತಮ್ಮ ಕವಿತೆಯಲ್ಲಿ ಭವಿಷ್ಯದ ದುರಂತ ಊಹಿಸಿ ಇಂದೇ ಆಹ್ವಾನಿಸಿ ಅವಶೇಷಗಳ ಪಟ್ಟಿ ಸೇರಿ ಸಾಗರೆಕೆ ಸಾಗಿ ಜಲಸಮಾಧಿಯಾಗೋಣ ಬನ್ನಿ ಎಂದು ಕರೆದಿದ್ದಾರೆ. ಈ ಕೂಗಿನ ಒಳ ಅರ್ಥ ನಾವು ಸೂಕ್ಷ್ಮವಾಗಿ ತಿಳಿಯಬೇಕಿದೆ. ಮಾಡಿದ್ದುಣ್ಣೋ ಮಾರಾಯ ಎಂಬಂತೆ ಪ್ರಕೃತಿ ನಾಶ ಮಾಡುವ ಮೂಲಕ ನಮ್ಮ ಗುಂಡಿಯನ್ನು ನಾವೇ ತೋಡಿಕೊಳಲ್ಳುತಿದ್ದೇವೆ ಎಂಬುದನ್ನು ತುಂಬಾ ಸ್ಪಷ್ಟವಾಗಿ ತಿಳಿಸಿರುವುದು ಕವಿಯ ಚಾಕಚಕ್ಯತೆಯನ್ನು ತೋರಿಸುತ್ತದೆ.
ನಾವೇ ನಿರ್ಗತಿಕರು
ನಾವೇ ನಿರ್ಗತಿಕರು ಪ್ರಭು!
ನಿಮ್ಮ ಅಟ್ಟಹಾಸದ ಬೇಗೆಯಲಿ
ಬೆಂದು,ನೀಡಿದ ಹಳಸಿದನ್ನವ
ತಿಂದು,ಕೂಗಿದಾಗಲೆಲ್ಲಾ ಬುದ್ಧೀ,ಬುದ್ದೀ
ಎಂದು ಕಾಲುಹಿಡಿದವರು,
ಶ್ವಾನದಂತೆ ಮೊಂಡುಬಾಲ ವಾಡಿಸುತ ಬಳಿ ಇದಗದವರು//
ಕವಿಯ ಈ ಕವಿತೆ ಡಾ.ಸಿದ್ಧಲಿಂಗಯ್ಯನವರ ಭಕ್ತರಪೋ ಭಕ್ತರು ನನ್ನ ಜನಗಳು ಕವನವನ್ನು ನೆನಪಿಸುತ್ತದೆ. ದಣಿಗಳನ್ನು ದೇವರೆಂದು ಕಣ್ಣಿಗೆ ಒತ್ತಿಕೊಂಡು ಸೇವೆ ಮಾಡುವ ನಾವೇ ನಿರ್ಗತಿಕರು ಎಂದು ನೊಂದ ಮನದಿಂದ ನುಡಿದಿದ್ದಾರೆ. ಶ್ವಾನದಂತೆ ನಿಯ್ಯತ್ತಿನಿಂದ ದುಡಿದರೂ ನಮಗೆ ಯಾವುದೇ ಬೆಲೆ ಇಲ್ಲ, ಕೊನೆಗೆ ನಮಗೆ ಸಿಗುವುದು ಅಳಸಿದ ಅನ್ನ. ನಮ್ಮ ಬಾಳು ಯಾರೂ ಅರಿಯದ,ಸ್ಪಂದಿಸಿದ ಗೋಳು ಎಂಬುದನ್ನು ನೈಜವಾಗಿ ಚಿತ್ರಿಸಿದ್ದಾರೆ.
ಒದ್ದಷ್ಟು ಸಲ ಒದೆ ತಿಂದು,ಮೂಳೆ
ಊನವಾದರೂ,ಬಿದಿರುಕಟ್ಡಿ
ತೆವಳತ್ತಾ ತಮ್ಮ ಪಾದರಕ್ಷೆಯ
ಸ್ವಚ್ಚಗೊಳಿಸಿದವರು,ಉಗಿದಷ್ಟು
ಸಲ ಉಗಿಸಿಕೊಂಡು, ಹರುಕದಿಂದ ಮಾರೆ ಒರೆಸಿತ್ತಾ,ನಿಮ್ಮ ಪಾದ ಅದುಮಿದವರು//
ನಿರ್ಗತಿಕರ ಬಾವನೆಗಳಿಗೆ ಬೆಲೆಯೇ ಇಲ್ಲ ಎಂಬುದನ್ನು ಕವಿ ಇಲ್ಲಿ ತುಂಬಾ ಸೂಕ್ಷ್ಮವಾಗಿ ವಿವರಿಸಿದ್ದಾರೆ.ಒಡೆದಷ್ಟು ಒದೆ ತಿಂದು, ಉಗಿದಷ್ಟು ಉಗಿಸಿಕೊಂಡರೂ,ನೀವು ಕಾಲಲಿ ಹೇಳಿದ ಕೆಲಸವನ್ನು ಕೈಯಲಿ ಮಾಡಿದ ನಮ್ಮಯ ಭಾವನೆಗಳಿಗೆ ಬೆಲೆ ಇಲ್ಲ; ನಿಮ್ಮ ದರ್ಬಾರೇ ಎಲ್ಲಾ ಎಂಬುದನ್ನು ಕವಿ ಇಲ್ಲಿ ಹೇಳಿರುವುದು ಕವಿಯ ಖಂಡನೀಯ ಸ್ವಭಾವವನ್ನು ನಮಗೆ ಪರಿಚಯಿಸುತ್ತದೆ.
ಶತಶತಮಾನಗಳಿಂದ ಜೀತದಲ್ಲಿ
ಜೀವಿಸಿ,ಬಡ್ಡಿ ಚಕ್ರ ಬಡ್ಡಿಯ.
ಗಾಣದಲ್ಲಿ ಮೈ ಹಿಂಡಿಸಿ ಕೊಂಡವರು,
ಕಂಡದನ್ನು ಕೂಗಲು ಧ್ವನಿಯಿಲ್ಲದೇ
ಜೀವಂತ ಹೆಣವಾದವರು
ಭಾರತಾಂಬೆಯ ಬೆಂದ ಮಕ್ಕಳು ನಾವೇ ಪ್ರಭು//
ನೊಂದವರ ನೋವನ್ನು ಎಲ್ಲರಿಗೂ ಅರ್ಥವಾಗುವಂತೆ,ಮನಮುಟ್ಟುವಂತೆ ಸರಳ ಪದಗಳನ್ನು ಬಳಸಿ ಕವಿತೆ ಬರೆಯ ಹೊರಟ ಕವಿಗೆ ಸಹೃದಯತೆಯ ಜೊತೆಗೆ ಬೇರೆಯವರ ನೋವಿಗೆ ಮಿಡಿಯುವ ತಾಯಿಹೃದಯ ಬೇಕು. ಹಾಗಾದಲೆ ಆ ಕವಿತೆಗೆ ಜೀವಂತಿಕೆ ಬರುವುದು. ಶ್ರೀ ಕೊಟ್ರೇಶ್ ಸರ್ ಅವರಿಗೆ ಆ ತಾಯಿಹೃದಯ ಇದೆ ಎಂಬುದನ್ನು ಈ ಕವಿತೆ ನಿಸ್ಸಂದೇಹವಾಗಿ ಹೇಳುತ್ತದೆ.
ನಗರಗಳಲ್ಲಿಂದು
ನಡೆದಿದೆ ಔದ್ಯೋಗಿಕ ಕ್ರಾಂತಿ
ತಳೆದಿದೆ ಭೌತಿಕಗಳ ಬ್ರಾಂತಿ
ನಾಗರೀಕತೆಯ ನಾಮದಡಿ ಅಧಃಪತನ!
ಆಧುನಿಕತೆಯ ಬೆನ್ನ ಹತ್ತಿದ ನಾವುಗಳು ನಾಗರೀಕತೆ ಎಂಬ ಪದಕೆ ಹೊಸರೂಪ ನೀಡಿ ಅದರ ಮೂಲ ಅರ್ಥವನ್ನು ಮರೆಮಾಚಿದ್ದೇವೆ.
ಅತ್ಯ-ಹತ್ಯೆ-ಮತ್ಸರಗಳದೇ ರಾಜ್ಯಭಾರ
ಹೃದಯಗಳು
ಮನಗಳು ಮಂಕಾಗಿವೆ
ರೀತಿನೀತಿಗಳು ನಾಶವಾಗಿವೆ
ಸಾಮಾಜಿಕ ವಿಘಟನೆಗೆ
ಕಾರಣವಾದ ಔದ್ಯೋಗಿಕ
ರಾಷ್ಟ್ರ ರಾಷ್ಟ್ರಗಳ ನಡುವಿನ ವಿರಸ
ದಿನೇ ದಿನೇ ಯುದ್ಧ ಸೃಷ್ಟಿಯ
ಪರಿಸರ, ವಿನಾಶದ ಕರೆಘಂಟೆ..!
ನಾಡೊಂದ ಕಟ್ಟೋಣ ಬನ್ನಿ
ಎದೆಯ ಬಾಂದಳದಲ್ಲಿ
ಹೃದಯ ಮಂದಿರದಲ್ಲಿ
ಭುವನೇಶ್ವರಿ ಕಾಣೋಣ ಬನ್ನಿ...!
ಮರೆಯದೇ ತಾಯನ್ನ
ತೆಗಳದೇ ಪರರನ್ನ
ಕನ್ನಡ ಜ್ಯೋತಿಯ ಬೆಳಗ ಬನ್ನಿ..!
ಮಳೆಹನಿ
ಮಳೆಯ ಹನಿಯೊಂದು
ಥಟ್ಟನೆ ತಾಯಿಯ ಅಗಲಿತು
ಕೆಳ ನೋಡಿದರೆ ಮಬ ಝಲ್ಲೆನ್ನುವ
ಆಳ! ಆಸರೆಯಾಗಿ ತಾಯಿಯ
ಕರವೂ ಎಟಕುತ್ತಿಲ್ಲ!
ನಗರಗಳಲ್ಲಿಂದು
ನಡೆದಿದೆ ಔದ್ಯೋಗಿಕ ಕ್ರಾಂತಿ
ತಳೆದಿದೆ ಭೌತಿಕಗಳ ಬ್ರಾಂತಿ
ನಾಗರೀಕತೆಯ ನಾಮದಡಿ ಅಧಃಪತನ!
ಆಧುನಿಕತೆಯ ಬೆನ್ನ ಹತ್ತಿದ ನಾವುಗಳು ನಾಗರೀಕತೆ ಎಂಬ ಪದಕೆ ಹೊಸರೂಪ ನೀಡಿ ಅದರ ಮೂಲ ಅರ್ಥವನ್ನು ಮರೆಮಾಚಿದ್ದೇವೆ. ಶ್ರೀ ಕೊಟ್ರೇಶ್ ಉಪ್ಪಾರ್ ರವರ ನಗರಗಳಲ್ಲಿಂದು ಕವನ ಅಲ್ಲಮಪ್ರಭುರವರ,
"ಅಜ್ಞಾನವೆಂಬ ತೊಟ್ಟಿಲೊಳಗೆ,ಜ್ಞಾನವೆಂಬ ಶಿಶುವ ಮಲಗಿಸಿ
ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ
ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ!"
ಈ ವಚನ ನೆನಪಿಸುತ್ತಿದೆ. ನಗರಗಳಲ್ಲಿ ಆಧುನೀಕರಣ ಎಂಬ ಹೆಸರನಡಿ ಆಗುತಿರುವ ಬದಲಾಣೆ ಹಾಗೂ ಅನಾಹುತದ ಸಂದರ್ಭಗಳನ್ನು ಎಳೆ ಎಳೆಯಾಗಿ ಎಣೆದಿರುವುದು ವಾಸ್ತವತೆಯಿಂದ ಕೂಡಿದೆ.
ಅತ್ಯ-ಹತ್ಯೆ-ಮತ್ಸರಗಳದೇ ರಾಜ್ಯಭಾರ
ಹೃದಯಗಳು
ಮನಗಳು ಮಂಕಾಗಿವೆ
ರೀತಿನೀತಿಗಳು ನಾಶವಾಗಿವೆ
ಸಾಮಾಜಿಕ ವಿಘಟನೆಗೆ
ಕಾರಣವಾದ ಔದ್ಯೋಗಿಕ
ರಾಷ್ಟ್ರ ರಾಷ್ಟ್ರಗಳ ನಡುವಿನ ವಿರಸ
ದಿನೇ ದಿನೇ ಯುದ್ಧ ಸೃಷ್ಟಿಯ
ಪರಿಸರ, ವಿನಾಶದ ಕರೆಘಂಟೆ..!
ಕವಿಯಾದವನು ಭೂತಕಾಲ,ವರ್ತಮಾನ ಕಾಲದ ಆಗುಹೋಗುಗಳನ್ನು ಮೆಲಕು ಹಾಕುವ ಹಾಗೂ ಭವಿಷ್ಯದಲ್ಲಿ ಆಗುವದನ್ನು ಬಹುಬೇಗನೆ ಗ್ರಹಿಸುವ,ಊಹಿಸುವ ಸಾಮರ್ಥ್ಯವನ್ನು ಹೊಂದಿರುತ್ತಾನೆ ಎಂಬುದು ನನ್ನ ಅಭಿಪ್ರಾಯ. ಸಾಮಾಜಿಕ ಕಳಕಳಿ ಇರುವ ಕವಿ ಕೊಟ್ರೇಶ್ ರವರು ನಗರಗಳಲ್ಲಿಂದು ಅಭಿವೃದ್ಧಿ ಹೆಸರಿನಲ್ಲಿ ನಡೆಯುತಿರುವ ಬದಲಾವಣೆಗಳು ವಿನಾಶದ ಕರೆಘಂಟೆಯನ್ನು ತಿಳಿಯುತಿಲ್ಲ ಎಂದು ನೊಂದಿರುವುದು ಈ ಕವಿತೆಯ ಮೂಲಕ ತಿಳಿಯುತ್ತದೆ.
ನಾಡೊಂದ ಕಟ್ಟೋಣ ಬನ್ನಿ
ಎದೆಯ ಬಾಂದಳದಲ್ಲಿ
ಹೃದಯ ಮಂದಿರದಲ್ಲಿ
ಭುವನೇಶ್ವರಿ ಕಾಣೋಣ ಬನ್ನಿ...!
ಮರೆಯದೇ ತಾಯನ್ನ
ತೆಗಳದೇ ಪರರನ್ನ
ಕನ್ನಡ ಜ್ಯೋತಿಯ ಬೆಳಗ ಬನ್ನಿ..!
ನುಡಿದಂತೆ ನಡೆಯುವ ಗುಣದ ಕವಿಯ ಈ ಕವಿತೆ ತನ್ನ ಮನದಿ ಪೂಜಿಪ ತಾಯಿ ಭುವನೇಶ್ವರಿಯ ಮೇಲಿನ ಭಕ್ತಿಯ ಆಳವನ್ನು ತೋರಿಸುತ್ತದೆ. ಕವಿ ಕೊಟ್ರೇಶ್ ರವರು ತಮ್ಮ ಕನಸನ್ನು ಇಂದು ನನಸುಗೊಳಿಸಿ ಎಲೆಮರೆಕಾಯಿಯಂತಿರುವ ಸಹಸ್ರಾರು ಕನ್ನಡ ಯುವಕವಿಗಳಿಗೆ ಬೃಹತ್ ವೇದಿಕೆ ಕಲ್ಪಿಸಿ ನಿರಂತರವಾಗಿ ಸಾಹಿತ್ಯ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ತಾಯಿ ಭುವನೇಶ್ವರಿಯ ಸೇವೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ.
ಮಳೆಹನಿ
ಮಳೆಯ ಹನಿಯೊಂದು
ಥಟ್ಟನೆ ತಾಯಿಯ ಅಗಲಿತು
ಕೆಳ ನೋಡಿದರೆ ಮನ ಝಲ್ಲೆನ್ನುವ
ಆಳ! ಆಸರೆಯಾಗಿ ತಾಯಿಯ
ಕರವೂ ಎಟಕುತ್ತಿಲ್ಲ!
ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ 'ಮಳೆಹನಿ' ವಿಷಯವಾಗಿಸಿಕೊಂಡು ಸುಂದರ ಕವಿತೆ ರಚಿಸಿದ್ದಾರೆ. ಮಳೆಹನಿ ತಾಯಿಯ(ಆಕಾಶ) ಅಗಲಿ ಭೂಮಿ ತಾಕುವಷ್ಟರಲ್ಲಿ ಮನದಲ್ಲಿ ನಡೆಯುವ ತಳಮಳವನ್ನು ಎಷ್ಟು ಸೊಗಸಾಗಿ ಚಿತ್ರಿಸಿದ್ದಾರೆ.
ಮಳೆಹನಿ ದೇವರಲ್ಲಿ ಧ್ಯಾನಿಸುತ್ತಾ,
ಮರಳುಗಾಡಿನಲ್ಲಿ ಬೀಳಿಸಿ ವ್ಯಯಮಾಡಬೇಡ,
ಬೆಂಕಿಯ ಮೇಲೆ ಬೀಳಿಸಿ ಮೈ ಸುಡಬೇಡ,
ತಾವರೆಯ ದಳಕ್ಕೆಸೆದು ಜಲಕ್ಕೆ ಜಾರಿಸಬೇಡ
ನನ್ನ ಚಿರವಾಗಿಸು
ಬಯಕೆಯಂತೆ ಬೀಳುವ
ವೇಳೆಗೆ ಕಪ್ಪೆಯ ಚಿಪ್ಪೊಂದು
ಬಾಯಿ ತೆರೆದು ಕಾದಿತ್ತು
ಉದರಕ್ಕೆ ಸೇರಿ ಬೆಲೆ
ಬಾಳುವ ಮುತ್ತಾಗಿತ್ತು ಹನಿ.
ಎಂತಹ ಅಮೋಘ ಕಲ್ಪನೆ! ಕವಿಯ ಕವಿತಾಶಕ್ತಿ,ಭಾಷೆ ಬಳಕೆಯಲ್ಲಿನ ಪ್ರಭುತ್ವ ನಿಜಕೂ ಅದ್ಭುತವೆನಿಸುವುದು. ಈ ಕವಿತೆ ಪ್ರತಿ ಓದುಗನ ಮನಮುಟ್ಟುವುದು ಎಂಬುದು ನನ್ನ ದೃಢವಾದ ನಂಬಿಕೆ. ಇವಷ್ಟೇಯಲ್ಲದೇ ಮುಗಿಲಾಚೆಗಿನ ಮಾತು ಈ ಸಂಕಲನದಲ್ಲಿ ಅಗೋಚರ,ನಿಗೂಢ,ಡೊಳ್ಳುರಿ,ಜೀವಜೋಪಡಿ,ಜೀವಾವಧಿ ಶಿಕ್ಷೆ,ನೀರವತೆ,ಘಳಿಗೆ,ಸಂಕ್ರಾಂತಿ,ಜೀವಬಿಂಬ,ಆಂಗ್ಲರು,ಗುಲಾಬಿ,ಅಂಬೇಡ್ಕರ್,ಮುಸುಕದ ರವಿ ಇನ್ನೂ ಅನೇಕ ಕವಿತೆಗಳುಸೊಗಸಾಗಿ ಮೂಡಿಬಂದಿವೆ.
ಹಿರಿಯ ಸಾಹಿತಿ ಡಾ.ಸಿ.ಪಿ.ಕೆ ರವರು ಶ್ರೀ ಉಪ್ಪಾರ್ ಸರ್ ಕುರಿತು,"ಕೊಟ್ರೇಶರಿಗೆ ಅವರದೇಯಾದ ಚಿತ್ತವಿದೆ,ಅದರಿಂದಾಗಿ ಅವರು ಚಿತ್ತಸ್ಪರ್ಶಿಯಾದ ಸಾಹಿತ್ಯ ರಚಿಸಿಬಲ್ಲ ಸಾಮರ್ಥ್ಯವುಳ್ಳವರು" ಎಂದಿರುವುದು ಅಕ್ಷರಶಃ ಸತ್ಯ ಎಂಬುದಕೆ ಇವರ ಮುಗಿಲಾಚೆಗಿನ ಮಾತು ಕವನಸಂಕಲನದ ಕವಿತೆಗಳು ಸಾಕ್ಷಿಯಾಗಿವೆ.
' ಇತರರನ್ನು ಗೆಲ್ಲಿಸುವ ವ್ಯಕ್ತಿ ತಾನಾಗಿಯೇ ತನಗರಿವಿಲ್ಲದಂತೆ ಗೆದ್ದುಬಿಡುತ್ತಾನೆ' ಎಂಬ ಮಾತಿನಂತೆ ಸ್ವಾರ್ಥಿಯಲ್ಲದ ಶ್ರೀ ಕೊಟ್ರೇಶ್ ಎಸ್ ಉಪ್ಪಾರ್ ರವರು ನಮ್ಮಂತಹ ಅನೇಕರಿಗೆ ಪ್ರೋತ್ಸಾಹ ನೀಡುವ ಮೂಲಕ ಅವರಿಗೆ ಅರಿವಿಲ್ಲದಂತೆ ಅವರು ಎತ್ತರಕೆ ಬೆಳೆಯುತಿದ್ದಾರೆ ಎಂಬುದು ನನ್ನ ಮನದಿಂಗಿತ.
'ನಮ್ಮಲ್ಲಿನ ಶಕ್ತಿಯನ್ನು ಈ ಪ್ರಪಂಚಕ್ಕೆ ಪರಿಚಯಿಸುವ ಅಸ್ತ್ರಗಳೆ ಟೀಕೆಗಳು' ಎಂಬುದನ್ನು ದೃಢವಾಗಿ ನಂಬಿ ಮುಂದೆ ಸಾಗುತಿರುವ ನಮ್ಮ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಕೊಟ್ರೇಶ್ ಎಸ್ ಉಪ್ಪಾರ್ ಸರ್ ರವರು 'ಸಮಾಜಕ್ಕೆ ಸಹಕರಿಸುವ ವ್ಯಕ್ತಿಗಳು ಇತಿಹಾಸ ಸೃಷ್ಟಿಸುವ ಮಹಾಪುರುಷರು' ಎಂಬಂತೆ ಕನ್ನಡ ತಾಯಿಯ ಸೇವೆ ಮಾಡುವ ಮೂಲಕ ಕನ್ನಡದ ಕಣ್ಮಣಿಯಾಗಲಿ ಎಂದು ಮನಸಾರೆ ಆಶಿಸುತ್ತಾ ನನ್ನ ಲೇಖನಿಗೆ ವಿರಾಮನ್ನಿಡುತ್ತಿದ್ದೇನೆ.
ಡಿ.ಶಬ್ರಿನಾ ಮಹಮದ್ ಅಲಿ,ಚಳ್ಳಕೆರೆ
ರಾಜ್ಯ ಸಂಚಾಲಕರು
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ)
ಬೆಂಗಳೂರು

