ಬೇಲೂರು ತಾಲ್ಲೂಕಿನ ಮಲೆನಾಡು ಭಾಗವಾದ ಮಲ್ಲಿಗನೂರು ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆಗೆ ಗುದ್ದಲಿಪೂಜೆ ನಡೆದು ತಿಂಗಳು ಕಳೆದರೂ ಕಾಮಗಾರಿ ಆರಂಭಗೊಂಡಿಲ್ಲದ ಬಗ್ಗೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಇದೆ ವೇಳೆ ಮಲ್ಲಿಗನೂರು ಗ್ರಾಮದ ಸಮೀಪ ದೊಡ್ಡಹೊಳೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ಎರಡೂ ಬದಿಯ ಮಣ್ಣು ಕುಸಿಯುತ್ತಿದ್ದು ಸಂಪರ್ಕ ಕಡಿತದ ಆತಂಕ ಗ್ರಾಮಸ್ಥರ ಮನೆಮಾಡಿದೆ.
ಮಲ್ಲಿಗನೂರು ಗ್ರಾಮದಿಂದ ಈಶ್ವರ ದೇಗುಲದ ಸಮೀಪದವರಗೆ ಸುಮಾರು ೪೦೦ ಮೀಟರ್ ಉದ್ದದ ಕಾಂಕ್ರಿಟ್ ರಸ್ತೆಗೆ ೨೧ ಲಕ್ಷರೂ. ಅನುದಾನ ಬಿಡುಗಡೆಯಾಗಿದ್ದು ಶಾಸಕ ಕೆ.ಎಸ್.ಲಿಂಗೇಶ್ ಇತರ ಗಣ್ಯರು ಒಂದು ತಿಂಗಳ ಹಿಂದೆ ಗುದ್ದಲಿಪೂಜೆ ನೆರವೇರಿದ್ದರು. ಈ ವೇಳೆ ಕಾಮಗಾರಿ ಗುತ್ತಿಗೆದಾರರೂ ಹಾಜರಿದ್ದರು. ಗುದ್ದಲಿಪೂಜೆ ನಂತರ ಕಾಮಗಾರಿ ಆರಂಭದ ವೇಳೆ ಗ್ರಾಮದೊಳಗಿನಿಂದ ಕೆಲಸ ಆರಂಭಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು.
ಆದರೆ ಗ್ರಾಮದೊಳಗಿನಿಂದ ಕೆಲಸ ಆರಂಭಿಸಬೇಕೆಂಬ ಬೇಡಿಕೆ ಗ್ರಾಮಸ್ಥರದ್ದಾಗಿದ್ದು ಮತ್ತೊಂದು ಭಾಗದಿಂದ ಆರಂಭಿಸಲು ಯೋಚಿಸಿದ್ದನ್ನು ಗ್ರಾಮಸ್ಥರು ವಿರೋಧಿಸಿದ್ದಾರೆ.
ಹಿಂದೆ ಇದೆ ರಸ್ತೆಗೆ ಜಲ್ಲಿ ಹಾಕಲಾಗಿದ್ದು ಇದರ ಮೇಲೆ ಮಣ್ಣುತಂದು ಹಾಕಿದ್ದರಿಂದ ರಸ್ತೆ ಕೆಸರು ಗದ್ದೆಯಂತೆ ಆಗಿದೆ. ವಾಹನ ಸಂ ಚಾರಕ್ಕೆ ಹಾಗೂ ನಡೆದುಕೊಂಡು ಹೋಗುವವರಿಗೆ ಹಿಂಸೆಯಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಶೀಘ್ರವೆ ಕಾಮಗಾರಿ ಆರಂಭಿಸಬೇಕೆಂದು ಒತ್ತಾಯಿಸಿದ್ದಾರೆ.
ಇದು ರಸ್ತೆಯ ಕತೆಯಾದರೆ, ಮಲ್ಲಿಗನೂರು ಸಮೀಪ ಹೊಸಹಳ್ಳಿ, ಬೆಳ್ಳಾವರ ಗ್ರಾಮದ ಮೂಲಕ ಅರೇಹಳ್ಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯೊಂದು ಸುಮಾರು ಒಂದೂವರೆ ವರ್ಷದ ಹಿಂದೆ ಅಂದಾಜು ೭೦ ಲಕ್ಷರೂ.ಗಳಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಸೇತುವೆ ಎರಡೂ ಬದಿಯಲ್ಲಿ ಮಣ್ಣು ಹಾಕಲಾಗಿದೆ. ಆದರೆ ಇದೀಗ ಹೊಳೆಯ ನೀರು ಹಾಗೂ ರಸ್ತೆಮೇಲಿನ ನೀರು ಹರಿದು ಮಣ್ಣು ಕೊಚ್ಚಿಕೊಂಡು ಹೋಗುತ್ತಿದ್ದು ರಸ್ತೆ ಕುಸಿಯುತ್ತಿದೆ. ಇದು ಹೀಗೆ ಮುಂದುವರಿದರೆ ಸಂಪರ್ಕ ಕಡಿತವಾಗುವ ಆತಂಕ ಗ್ರಾಮಸ್ಥರದ್ದಾಗಿದೆ. ಮಣ್ಣು ಹಾಕಿದ ಮೇಲೆ ಪಕ್ಕಕ್ಕೆ ಕಲ್ಲಿನಿಂದ ತಡೆಗೋಡೆ ನಿರ್ಮಿಸಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
