ಎರಡನೆಯ ಅಲೆ ಸೃಷ್ಟಿ ಮಾಡಿದ ಸಂಕಷ್ಟಗಳಿಂದ ನಾವೆಲ್ಲ ಈಗಷ್ಟೆ ಸುಧಾರಿಸಿಕೊಳ್ಳುತ್ತಿದ್ದೇವೆ. ಎರಡನೆಯ ಅಲೆ ಕೊನೆಗೊಳ್ಳದೆ ತಾಂತ್ರಿಕವಾಗಿ ಮೂರನೆ ಅಲೆ ಏಳುವುದಿಲ್ಲವೆಂದು ಗೊತ್ತಿದ್ದರೂ ಮೂರನೆಯ ಅಲೆಯ ಬಗ್ಗೆ ಮಾದ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆಗಳು ಕಾವು ಪಡೆದುಕೊಳ್ಳುತ್ತಿದೆ. ಲಸಿಕೆ ಹಾಕಲು ಸುಮಾರು ಎರಡು ತಿಂಗಳು ಮೀನಾಮೇಷ ಎಣಿಸಿದವರು ಕೂಡ ಈಗ ಮುಂಜಾನೆ ಎಂಟು ಗಂಟೆಯಿಂದಲೆ ಲಸಿಕಾ ಕೇಂದ್ರಗಳ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. More you sweat in peace , less you bleed in war ನುಡಿಮುತ್ತಿನ ತಾತ್ಪರ್ಯ ಮೊದಲ ಮತ್ತು ಎರಡನೆಯ ಅಲೆಯ ವಿಷಯದಲ್ಲಿ ನಿಜವಾದ ಕಾರಣ, ಬರಬಹುದಾದ ಮೂರನೆಯ ಅಲೆಯನ್ನು ಎದುರಿಸಲು ಕೈಗೊಳ್ಳಬಹುದಾದ ತಯಾರಿ ಕೂಡ ಬಿರುಸಿನಿಂದ ಸಾಗುತ್ತಿದೆ.
ಒಂದು ಶತಮಾನದ ಹಿಂದೆ ಭಾರತದಲ್ಲಿ ಸುಮಾರು ಹದಿನೆಂಟು ಮಿಲಿಯನ್ ಜನರ ಸಾವಿಗೆ ಕಾರಣವಾಗಿದ್ದ ಸ್ಪ್ಯಾನಿಷ್ ಫ್ಲೂ ಕೂಡ ಅಲೆಗಳ ಮಾದರಿಯಲ್ಲಿ ಅಪ್ಪಳಿಸಿತ್ತು. ಅತೀ ಹೆಚ್ಚು ಸಾವುಗಳು ಅದರ ಎರಡನೆಯ ಅಲೆಯಲ್ಲಿ ಸಂಭವಿಸಿದ್ದ ಕಾರಣಕ್ಕೆ ಜನರು ಇತಿಹಾಸದ ಪುಟಗಳನ್ನೂ ಕುತೂಹಲದಿಂದ ಮತ್ತೆ ತಿರುವುತ್ತಿದ್ದಾರೆ. ಮಕ್ಕಳ ತಜ್ಞರು ಮಕ್ಕಳ ರೋಗಗಳಿಗಿಂತ ಹೆಚ್ಚು ಸಮಯ ಹೆತ್ತವರ ಆತಂಕಗಳನ್ನು ನಿವಾರಿಸುವುದರಲ್ಲಿ ಕಳೆಯುವ ಕಾರಣ ಮೂರನೆಯ ಅಲೆ ಮಕ್ಕಳನ್ನು ತೀವ್ರ ರೀತಿಯಲ್ಲಿ ಭಾದಿಸಬಹುದೆಂಬ ಊಹಾಪೋಹಗಳು ಸಮಾಜದಲ್ಲಿ ಆತಂಕವನ್ನು ಸೃಷ್ಟಿಸಿದೆ. ಎಲ್ಲಾ ವಯಸ್ಸಿನ ಮಕ್ಕಳಿಗೆ ಕೊಡಬಹುದಾದ ಕೋವಿಡ್ ಲಸಿಕೆ ಈಗ ಪ್ರಯೋಗದ ಹಂತದಲ್ಲಿರುವ ಕಾರಣ ಮಕ್ಕಳು ಲಸಿಕೆಯ ರಕ್ಷಣೆಯಿಂದ ವಂಚಿತರಾಗಿರುವ ವಿಷಯ ಹೆತ್ತವರ ಆತಂಕಗಳನ್ನು ಹೆಚ್ಚಿಸಿದೆ. ಮೊದಲ ಮತ್ತು ಎರಡನೇಯ ಅಲೆಯಲ್ಲಿ ಸುಮಾರು ಮೂವತ್ತನಾಲ್ಕು ಲಕ್ಷ ಮಕ್ಕಳಿಗೆ ಕೋವಿಡ್ ಫಾಸಿಟಿವ್ ಬಂದಿದ್ದರೂ ( Source -Ministry of health and family welfare , Govt of India dated July 1 2021) ಅದು ಸಾಮಾನ್ಯ ಶೀತ ಜ್ವರದ ಮಾದರಿಯಲ್ಲಿದ್ದ ಕಾರಣ ಅರೋಗ್ಯವಂತ ಮಕ್ಕಳಲ್ಲಿ ಅದು ಯಾವದೇ ಸಾವು ನೋವಿಗೆ ಕಾರಣವಾಗಿರಲಿಲ್ಲ. ಅಸಲಿಗೆ ಹೆಚ್ಚಿನ ಮಕ್ಕಳಿಗೆ ಕೋವಿಡ್ ಸೋಂಕು ತಗಲುವಾಗ ಯಾವುದೇ ರೋಗಲಕ್ಷಣಗಳು ಕಾಣಿಸಿಕೊಳ್ಳದ ಕಾರಣ ಕೋವಿಡ್ ಸೋಂಕು ಅಂಟಿಸಿಕೊಂಡರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳದ ಕೋಟ್ಯಾಂತರ ಮಕ್ಕಳಿರಬಹುದು. ಕೊಡಗಿನಲ್ಲಿ ಸಾವಿರಾರು ಮಕ್ಕಳಿಗೆ ಕೋವಿಡ್ ಪಾಸಿಟಿವ್ ಈಗಾಗಲೇ ಬಂದಿದೆ ಮತ್ತು ಕೋವಿಡ್ ಸೋಂಕು ತಗುಲಿದ್ದರೂ ಪರೀಕ್ಷೆ ಮಾಡಿಸಿಕೊಳ್ಳದ ಮಕ್ಕಳು ಇದಕ್ಕಿಂತ ಹತ್ತು ಪಟ್ಟು ಹೆಚ್ಚಿರಬಹುದಾದ ಸಂಭವವಿದ್ದರೂ ಕೋವಿಡ್ ಸೋಂಕಿನಿಂದಾಗಿ ಜಿಲ್ಲೆಯಲ್ಲಿ ಯಾವುದೇ ಮಗು ಅಸುನೀಗಿದ ವರದಿಗಳಿಲ್ಲ.
ಕೋವಿಡ್ ಸೋಂಕು ಮನುಷ್ಯನ ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಜೊತೆಗೆ ಬಹುಅಂಗಾಂಗ ವೈಫಲ್ಯಕ್ಕೂ ಕಾರಣವಾಗುತ್ತದೆ. ಕೊರೊನಾ ಸೋಂಕು ತಗುಲಿದ ಶೇಕಡ ಒಂದು ಪ್ರತಿಶತದಷ್ಟು ಹಿರಿಯರಲ್ಲಿ ಈ ಕಾಯಿಲೆ ಮಾರಣಾಂತಿಕವಾಗಲು ವೈರಸ್ಸಿನ ಶಕ್ತಿಗಿಂತಲೂ ಹೆಚ್ಚು, ದೇಹದ ರೋಗ ನಿರೋಧಕ ಶಕ್ತಿ ತೀವ್ರಪ್ರಮಾಣದಲ್ಲಿ ವೈರಸ್ಸ್ ವಿರುದ್ಧ ತಿರುಗಿ ಬೀಳುವುದೇ ಕಾರಣ. ದೇಹದ ರೋಗ ನಿರೋಧಕ ವ್ಯವಸ್ಥೆ ವೈರಸ್ಸನ್ನು ನಿಗ್ರಹಿಸುವುದರ ಜೊತೆ ದೇಹದ ವಿವಿಧ ಅಂಗಾಂಗಗಳ ಮೇಲೆ ತನ್ನ ದುಷ್ಪರಿಣಾಮಗಳನ್ನು ಬೀರುತ್ತದೆ. ಹಾಗಾಗಿ ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಸ್ವಲ್ಪ ಮೃದುಗೊಳಿಸಿ ಹತೋಟಿಗೆ ತರಲು ನಾವು ಬೇರೆ ಕಾಯಿಲೆಗಳಲ್ಲಿ ಬಳಸುವ ಸ್ಟೀರಾಯ್ಡ್ ಔಷಧಿಯೆ ಕೋವಿಡ್ ಶ್ವಾಸಕೋಶದ ಸಮಸ್ಯೆ ಮತ್ತು ಬಹು ಅಂಗಾಗ ವೈಫಲ್ಯದಿಂದ ರೋಗಿಗಳನ್ನು ಕಾಪಾಡಲು ಇರುವ ರಾಮಬಾಣ.
ಮಕ್ಕಳ ದೇಹದ ರೋಗನಿರೋಧಕ ಶಕ್ತಿ ತೀವ್ರ ರೀತಿಯಲ್ಲಿ ಕೋವಿಡ್ ವೈರಸ್ಸಿಗೆ ಸ್ಪಂದಿಸದಿರುವುದರಿಂದ ಮಕ್ಕಳಲ್ಲಿ ಹೆಚ್ಚಿನ ರೋಗಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಚಿಕ್ಕ ಮಕ್ಕಳಿಗೆ ವರ್ಷದಲ್ಲಿ ಅನೇಕ ಬಾರಿ ಶೀತ ಮತ್ತು ಜ್ವರ ಬಂದು ಹೋಗುವುದನ್ನು ನೀವು ಗಮನಿಸಿರಬಹುದು. ಶಾಲೆಯಲ್ಲಿ ಒಂದು ಮಗುವಿಗೆ ಅದು ಬಂದರೆ ಇಡೀ ತರಗತಿಯ ಮಕ್ಕಳು ಶೀತ, ಜ್ವರ ಮತ್ತು ಗಂಟಲು ನೋವಿಗೆ ತುತ್ತಾಗುತ್ತಾರೆ. ಬೆಳೆಯುವ ಮಕ್ಕಳಿಗೆ ಬಂದು ಹೋಗುವ ಇಂತಹ ಸಾಮಾನ್ಯ ಶೀತ ಜ್ವರಕ್ಕೆ ಕಾರಣ ನಮ್ಮ ಪರಿಸರದಲ್ಲಿರುವ ಸಾವಿರಾರು ವೈರಸ್ಸುಗಳು. ಈ ಹೆಚ್ಚಿನ ಎಲ್ಲಾ ವೈರಸ್ಸುಗಳು ಭೂಮಿಯ ಮೇಲೆ ಮನುಷ್ಯ ಕಾಲಿಡುವ ಮೊದಲೇ ಇರುವ ಕಾರಣ ಮತ್ತು ಅವುಗಳು ಮಾರಣಾಂತಿಕವಾಗದ ಕಾರಣ ಗಂಟಲ ದ್ರವದಿಂದ ಅವರ ಪತ್ತೆ ಹಚ್ಚವಲ್ಲಿ ನಾವು ಆಸಕ್ತಿ ವಹಿಸುವುದಿಲ್ಲ.
ಬ್ಲ್ಯಾಕ್ ಫಂಗಸ್ ಮತ್ತು MISC ( multisystem inflammatory syndrome in Children) ಎಂಬ ಎರಡು ಪದಗಳು ಮಕ್ಕಳ ಮತ್ತು ಹೆತ್ತವರ ಎದೆಬಡಿತವನ್ನು ಹೆಚ್ಚಿಸಿವೆ. ಫಂಗಸ್ ರೋಗಾಣುಗಳು ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ನಮ್ಮೊಂದಿಗೆ ವಾಸ ಮಾಡುತ್ತವೆ. ಆರೋಗ್ಯವಂತ ದೇಹದೊಳಗೆ ದಾಳಿ ಮಾಡಬಲ್ಲ ಸಾಮರ್ಥ್ಯ ಅವುಗಳಿಗಿಲ್ಲ. ಕೋವಿಡ್ ಕಾರಣಕ್ಕೆ ಸ್ಟೀರಾಯ್ಡ್ ಪಡೆದ ರೋಗಿಗಳಲ್ಲಿ ಮತ್ತು ರೋಗನಿರೋಧಕ ಶಕ್ತಿ ಕಡಿಮೆಯಿರುವ ಕೆಲವೇ ಕೆಲವು ಮಂದಿಯಲ್ಲಿ ಈ ರೋಗ ಕಾಣಿಸಿಕೊಂಡಿದೆ.ಹಾಗಾಗಿ ಮಕ್ಕಳ ಆರೋಗ್ಯದ ಮೇಲೆ ಈ ಬ್ಲ್ಯಾಕ್ ಫಂಗಸ್ಸಿಗೆ ಯಾವುದೇ ಕಪ್ಪು ಚುಕ್ಕಿಯಿಡುವ ಸಾಮರ್ಥ್ಯವಿಲ್ಲ.
MISC (Multi system Inflammatory syndrome in children ) ಎಂಬ ಗಂಭೀರ ಸ್ವರೂಪದ ಅನಾರೋಗ್ಯ ಮಕ್ಕಳಲ್ಲಿ ಈ ಹಿಂದೆ ಗುರುತಿಸಲ್ಪಟ್ಟ ಕವಸಾಕಿ ಕಾಯಿಲೆಯನ್ನು ಹೋಲುತ್ತದೆ. ಕೋವಿಡ್ ಸೋಂಕು ಬಂದು ಗುಣವಾದ ಸುಮಾರು ಒಂದು ತಿಂಗಳ ನಂತರ ಕೆಲವು ಮಕ್ಕಳಲ್ಲಿ ವಿಪರೀತ ಜ್ವರ ಮತ್ತು ಬಹುಅಂಗಾಂಗ ಸಮಸ್ಯೆಗಳು ಕಾಣಿಸಿಕೊಳ್ಳುವ ರೋಗ ಲಕ್ಷಣಗಳನ್ನು ನಾವು MISC ಎಂದು ಕರೆಯುತ್ತೇವೆ. ಕವಸಾಕಿ ಕಾಯಿಲೆಯಂತೆ ಈ ರೋಗವೂ ಸ್ಟೀರಾಯ್ಡ್ ಮತ್ತು ಐವಿಐಜಿ ಔಷಧಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತದೆ. ತಡಮಾಡದೆ ಆಸ್ಪತ್ರೆಗೆ ದಾಖಲಾದಲ್ಲಿ ಇಂತಹ ಮಕ್ಕಳು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಾರೆಂಬ ವೈಜ್ಞಾನಿಕ ಮಾಹಿತಿ ವಿಶ್ವದ ಎಲ್ಲಾ ಕಡೆಗಳಲ್ಲಿ ದಾಖಲಾಗಿದೆ.
ಮಕ್ಕಳಲ್ಲಿ ಕೋವಿಡ್ ಸೋಂಕು ಗಂಭೀರವಾದ ಸಮಸ್ಯೆಗಳನ್ನು ಮಾಡದಿದ್ದರೂ ಅವರಿಗೆ ಲಸಿಕೆಯ ಅಗತ್ಯ ಏಕೆಂದು ಅನೇಕರಲ್ಲಿ ಅನುಮಾನಗಳು ಮೂಡಬಹುದು. ಮಕ್ಕಳು ಕೋವಿಡ್ ಸೋಂಕನ್ನು ಮನೆಯಲ್ಲಿ ಹಿರಿಯರಿಗೆ ಹರಡಲು ಕಾರಣರಾಗಬಹುದಾದ ಕಾರಣ ಮತ್ತು ಹೆತ್ತವರು ಮಕ್ಕಳನ್ನು ಧೈರ್ಯ ಮಾಡಿ ಶಾಲೆಗೆ ಕಳುಹಿಸಲು ಮಾನಸಿಕ ಸ್ಥೈರ್ಯ ಕೊಡುವ ಸಾಮರ್ಥ್ಯ ಲಸಿಕೆಗೆ ಇರುವ ಕಾರಣ ಮಕ್ಕಳಲ್ಲಿ ಸುರಕ್ಷಿತವಾಗಿ ಬಳಸಬಹುದಾಗ ಲಸಿಕೆಗಳು ಪ್ರಯೋಗದ ಹಂತದಲ್ಲಿವೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೇವೆಂದು ಮಾರುಕಟ್ಟೆಗೆ ಬಂದ ಅನೇಕ ವಾಣಿಜ್ಯ ಉತ್ಪನ್ನಗಳು ಪರಿಸ್ಥಿತಿಯ ಲಾಭ ಪಡೆಯುವಲ್ಲಿ ಯಾವುದೇ ಹಿಂಜರಿಕೆ ತೋರುತ್ತಿಲ್ಲ. ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿ ಲಕ್ಷಾಂತರ ವರ್ಷಗಳಿಂದ ಮಾನವನ ಅಸ್ತಿತ್ವವನ್ನು ಭೂಮಿಯಲ್ಲಿ ಸುರಕ್ಷಿತವಾಗಿಡಲು ಕಾಲ ಕಾಲಕ್ಕೆ ತನ್ನೊಳಗೆ ಅನೇಕ ಬದಲಾವಣೆಗಳನ್ನು ಮಾಡಿಕೊಂಡು ಬಂದಿದೆ. ಉತ್ತಮವಾದ ಪೌಷ್ಟಿಕಾಹಾರ , ವ್ಯಾಯಾಮ ಮತ್ತು ನಿದ್ರೆಗಿಂತ ಹೆಚ್ಚು ಆರೋಗ್ಯ ಮಾರುಕಟ್ಟೆಯಿಂದ ಕಾಸು ಕೊಟ್ಟು ತರುವ ಯಾವದೇ ಇಮ್ಮೂನ್ ಬೂಸ್ಟರ್ ನೀಡುವುದಿಲ್ಲ.
ನಮ್ಮ ದೇಶ ದಿನವೊಂದರಲ್ಲಿ ನಾರ್ವೇ ದೇಶದ ಒಟ್ಟು ಜನಸಂಖ್ಯೆಯಷ್ಟು ಪ್ರಮಾಣದ ಜನರಿಗೆ ( ಸುಮಾರು ಐವತ್ತು ಲಕ್ಷ) ಲಸಿಕೆ ನೀಡುವ ದೇಶವ್ಯಾಪಿ ಅಭಿಯಾನ ನಡೆಸುತ್ತಿದೆ. ಹೆಚ್ಚು ಜನರಿಗೆ ಲಸಿಕೆ ದೊರೆತು ಕೋವಿಡ್ ರೋಗಕ್ಕೆ ತುತ್ತಾಗಬಹುದಾದಂತವರ ಸಂಖ್ಯೆ ( Susceptible population ) ಕಮ್ಮಿಯಾದಾಗ ಯಾವ ಅಲೆಯೂ ಉಂಟಾಗುವುದಿಲ್ಲ. ಉರಿಯಬಹುದಾಗ ಸರಕುಗಳಿಲ್ಲದೆ ಹೇಗೆ ಬೆಂಕಿ ಹಚ್ಚಲು ಸಾಧ್ಯವಿಲ್ಲವೋ ಹಾಗೆಯೆ ಕೋವಿಡ್ ಸೋಂಕು ಅಂಟಿಸಿಕೊಳ್ಳಬಹುದಾದವರ ಸಂಖ್ಯೆ ಕಡಿಮೆಯಾದಾಗ ಯಾವ ಅಲೆಯೂ ಹುಟ್ಟಲಾರದು. ಕರ್ನಾಟಕ ಮತ್ತು ಕೇರಳದಂತಹ ರಾಜ್ಯಗಳ ಲಸಿಕಾಕರಣದ ವೇಗ ಆ ದಿಕ್ಕಿನಲ್ಲಿದ್ದರೆ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಈ ಓಟದಲ್ಲಿ ಹಿಂದೆ ಬಿದ್ದಿವೆ.
ಮಕ್ಕಳಿಗೆ ಶಾಲೆ ಪಾಠವನ್ನು ಕಲಿಸುವ ಕೋಣೆ ಮಾತ್ರವಲ್ಲ, ಅದು ಮಗುವಿನ ಸಾಮಾಜಿಕ, ನೈತಿಕ, ದೈಹಿಕ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುವ ಸಂಸ್ಥೆ. ಅನೇಕ ಬಡ ಮಕ್ಕಳ ಅರೋಗ್ಯದಲ್ಲೂ ಶಾಲೆಯ ಬಿಸಿಯೂಟ , ಕ್ಷೀರ ಭಾಗ್ಯದ ಜೊತೆಗೆ ಅಟೋಟ ಸ್ಪರ್ಧೆ ಮತ್ತು ದೈಹಿಕ ವ್ಯಾಯಾಮದ ಕೊಡುಗೆಯಿದೆ. ದೀರ್ಘ ಕಾಲದ ಲಾಭ ನಷ್ಟಗಳನ್ನು ಅವಲೋಕಿಸಿದರೆ ಶಾಲೆ ತರೆಯದೆ ಇರುವ ಕಾರಣಕ್ಕೆ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಕೆಯ ಮೇಲೆ ಊಂಟಾಗಿರುವ ಪರಿಣಾಮ ಕೋವಿಡ್ ಸೋಂಕಿನಿಂದ ಮಕ್ಕಳಿಗೆ ಬರುವ ಸರಳ ಶೀತ ಜ್ವರಕ್ಕಿಂತಲೂ ಅಪಾಯಕಾರಿಯಾಗಲಿದೆ.
ಲೇಖಕರು : ಡಾ ಕುಶ್ವಂತ್ ಕೋಳಿಬೈಲು