ನವದೆಹಲಿ : ನಿನ್ನೆಯಷ್ಟೆ ಕೃಷಿ ರಾಜ್ಯ ಖಾತೆ ಮತ್ತು ರೈತ ಕಲ್ಯಾಣ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಸಂಸದೆ ಶೋಭಾ ಕರಂದ್ಲಾಜೆ ಇಂದು ಕಚೇರಿ ಪೂಜೆ ಮಾಡುವ ಮೂಲಕ ಪದಗ್ರಹಣ ಮಾಡಿದರು.
ದೆಹಲಿಯ ಕೃಷಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಷಿ ಸಮ್ಮುಖದಲ್ಲಿ ಅಧಿಕಾರ ವಹಿಸಿಕೊಂಡರು.
ಪ್ರದಗ್ರಹಣದ ಬಳಿಕ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕೆಲಸದ ಅನುಭವವಿದೆ ಈಗ ರೈತರ ಸಮಸ್ಯೆ ಅರಿತು ಕೆಲಸ ಮಾಡುವ ಜವಾಬ್ದಾರಿ ಇದೆ, ರೈತರ ಆದಾಯ ದ್ವಿಗುಣವಾಗಬೇಕು,ನಗರಕ್ಕೆ ವಲಸೆ ಹೋಗುವುದು ಕಡಿಮೆ ಆಗಬೇಕು ರೈತ ಭೂಮಿಯಲ್ಲೇ ದುಡಿಯುವಂತೆ ಮಾಡುವುದು ಮೋದಿ ಕನಸು ಅದನ್ನು ಈಡೇರಿಸುವ ಪ್ರಯತ್ನ ಮಾಡಲಿದ್ದೇನೆ
ರೈತನ ಕಷ್ಟಕ್ಕೆ ನೆರವಾಗುವ ಕೆಲಸ ಮಾಡುತ್ತೇನೆ, ಮೂರು ಹೊಸ ಕೃಷಿ ಕಾನೂನುಗಳು ರೈತರ ಹಿತದೃಷ್ಟಿಯಿಂದ ಜಾರಿ ಮಾಡಲಾಗಿದೆ ಕೃಷಿ ಕಾನೂನುಗಳಿಂದ ರೈತರಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಕೃಷಿ ಕಾನೂನುಗಳ ಬಗ್ಗೆ ಅರಿವು ಮೂಡಿಸುತ್ತೇನೆ ಎಂದರು.