ಸಾಮಾನ್ಯ ಜನರ ಮೇಲೆ ರೇವಣ್ಣನ ದಬ್ಬಾಳಿಕೆ: ಬಿ.ಪಿ. ಮಂಜೇಗೌಡ ಆಕ್ರೋಶ


ಹಾಸನ: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಸರ್ಕಾರದ ಎಸ್ಕಾರ್ಟ್ ವಾಹನವನ್ನು ದುರುಪಯೋಗ ಪಡಿಸಿಕೊಂಡು ಜನರ ಮೇಲೆ ದಬ್ಬಾಳಿಕೆ –ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪತ್ರಿಕೆ ಹೇಳಿಕೆ ನೀಡಿರುವ ಅವರು ಮಾಜಿ  ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಮಗ ಎನ್ನುವ ಗೌರವಕ್ಕೆ ಸರ್ಕಾರ ಇವರಿಗೆ ಎಸ್ಕಾರ್ಟ್ ನೀಡಿದೆ. ಆದರೆ ರೇವಣ್ಣ ಏನೂ ಸಚಿವ ಸಂಪುಟದ ಸದಸ್ಯರಲ್ಲ. ಒಬ್ಬ ಶಾಸಕ ಇಂತಹ ವಾಹನವನ್ನು ಬೇಕಾಬಿಟ್ಟಿ ತಿರುಗಾಡಲು ಉಪಯೋಗಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯ ಜನರ ವಾಹನಗಳು ಅಡ್ಡ ಬಂದ ತಕ್ಷಣ ಅವರ ಮೇಲೆ  ಪೊಲೀಸ್ ಇಲಾಖೆಯಿಂದ ನೋಟಿಸ್ ಕೊಡಿಸಿ ಹೆದರಿಸುವುದು, ದಂಡ ವಿಧಿಸುವಂತೆ ತಾಕೀತು ಮಾಡುತ್ತಾ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

 ಜುಲೈ ೫ ರಂದು ಕಾಂಗ್ರೆಸ್  ಪಕ್ಷದ ಕಾರ್ಯಕರ್ತ ಚನ್ನರಾಯಪಟ್ಟಣ ತಾಲ್ಲೂಕು  ದೊಡ್ಡಕರಡೆ ಗ್ರಾಮದ  ಮಂಜುನಾಥ್  ಡಿ.ಎಲ್. ಬಿನ್ ನಿಂಗೇಗೌಡ ಅವರ ಮಗ ಸೋನುಕುಮಾರ್   ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೊಳೆನರಸೀಪುರದಿಂದ ಹಾಸನಕ್ಕೆ ಮಧ್ಯಾಹ್ನ ಬರುವ ವೇಳೆ ಹಾಸನದ ಹೊಸಕೊಪ್ಪಲು ಬಳಿ ಅಡ್ಡ ಬಂದರು ಎಂಬ ಕಾರಣ ಹೇಳಿ ಸಂಚಾರಕ್ಕೆ ಅಡ್ಡಿ ಪಡಿಸಿದ್ದಾರೆಂದು  ಹಾಸನದ ಸಂಚಾರಿ ಪೊಲೀಸರಿಂದ ನೋಟಿಸ್  ಕೊಡಿಸಿ  ಕಾಂಗ್ರೆಸ್ ಕಾರ್ಯಕರ್ತನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿದ್ದಾರೆ.

 ಹೆಚ್.ಡಿ. ರೇವಣ್ಣ ಕನಿಷ್ಟ ಜ್ಞಾನ ಇಲ್ಲದ ಶಾಸಕ. ಜಿಲ್ಲೆಯಲ್ಲಿ ಹಿಟ್ಲರಂತೆ ವರ್ತಿಸುತ್ತಿದ್ದಾರೆ. ಪೊಲೀಸರನ್ನು ಹೆದರಿಸಿ  ತಮ್ಮ  ಕೈಗೊಂಬೆಯಂತೆ  ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಇವರ ದರ್ಪಕ್ಕೆ ಪೊಲೀಸರು ಸಹಾಯಕರಾಗಿದ್ದಾರೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ  ರೇವಣ್ಣರ ದಬ್ಬಾಳಿಕೆ- ದೌರ್ಜನ್ಯ ಹೆಚ್ಚು ಕಾಲ ನಡೆಯುವುದಿಲ್ಲ, ಶೀಘ್ರ ಬ್ರೇಕ್ ಬೀಳಲಿದೆ. ಇವರ  ಹಿಟ್ಲರ್ ಸಂಸ್ಕೃತಿಗೆ ಮುಂದಿನ  ಚುನಾವಣೆಯಲ್ಲಿ  ಜಿಲ್ಲೆಯ ಜನರು ತಕ್ಕ ಪಾಠ ಕಲಿಸಲಿದ್ದಾರೆ . ಕಾಂಗ್ರೆಸ್ ಕಾರ್ಯಕರ್ತರು ಇವರ ಆಟಟೋಪಗಳಿಗೆ ಭಯ ಪಡುವ ಅಗತ್ಯವಿಲ್ಲ ಎಂದು ಎಚ್ಚರಿಸಿದ್ದಾರೆ. 


Post a Comment

Previous Post Next Post