ಅರೇಹಳ್ಳಿಯಲ್ಲಿ ಅರ್ಚಕರಿಗೆ ಆಹಾರದ ಕಿಟ್ ವಿತರಣೆ : ಅರ್ಚಕರಿಗೆ ಮಾಸಿಕ ೧೦ ಸಾವಿರ ವೇತನಕ್ಕೆ ಶಾಸಕ ಆಗ್ರಹ

 ಬೇಲೂರು: ತಾಲೂಕಿನ ಅರೇ ಹಳ್ಳಿ ಹೋಬಳಿಯ ೫೮ ಅರ್ಚಕರಿಗೆ ಮುಜರಾಯಿ ಇಲಾಖೆಯಿಂದ ನೀಡಲಾದ ಆಹಾರ ಸಾಮಗ್ರಿಯ ಕಿಟ್ ಗಳನ್ನು ನೀಡಲಾಯಿತು.ಆಹಾರದ ಕಿಟ್ ವಿತರಿಸಿ ಮಾತನಾಡಿದ ಶಾಸಕ ಕೆ.ಎಸ್.ಲಿಂಗೇಶ್,ತಮ್ಮ ಪೂರ್ವಜರ ಕಾಲದಿಂದ ನಾಡಿನ ಒಳಿತಿಗಾಗಿ ದೇವರ ಪೂಜೆ ಮಾಡುತ್ತಿರುವ ಅನೇಕ ಮಂದಿ ಅರ್ಚಕರು ಇಂದು ಕೊರೊನಾ ಹಾವಳಿಯಿಂದ ಭಕ್ತರ ಕೊರತೆಯಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ನೀಡುತ್ತಿರುವ ಅಲ್ಪ ವೇತನ ಕಡಿಮೆಯಾಗಿದ್ದು ದೇವಸ್ಥಾನಗಳಲ್ಲಿ ಪೂಜೆ ಮಾಡುತ್ತಿರುವ ಅರ್ಚಕರ ಅಭಿವೃದ್ಧಿಗಾಗಿ ಮಾಸಿಕ ೧೦ ಸಾವಿರ ವೇತನ ನೀಡುವಂತೆ ಸರಕಾರವನ್ನು ಒತ್ತಾಯಿಸಲಾಗಿದೆ ಎಂದರು.

ಬೇಲೂರು ತಾಲೂಕು ಆಡಳಿತದಿಂದ ಅರೇಹಳ್ಳಿಯಲ್ಲಿ ೫೮ ಜನ

ಅರ್ಚಕರಿಗೆ ಆಹಾರದ ಕಿಟ್ ವಿತರಿಸಲಾಯಿತು


ಮುಜರಾಯಿ ಇಲಾಖೆಗೆ ಸೇರಿದ ತಾಲೂಕಿನ ಅನೇಕ ದೇವಸ್ಥಾನಗಳಲ್ಲಿ ಆದಾಯ ತರುವ ಭೂಮಿ ಸಂಪತ್ತು ಇತ್ತಾದರೂ ಉಳುವವನೇ ಭೂಮಿಯ ಒಡೆಯ ಯೋಜನೆಯಲ್ಲಿ ಕಂಡವರ ಪಾಲಾಯಿತು ಎಂದರು ಕೊರೋನಾ ರೋಗವು ಎಲ್ಲರನ್ನೂ ಸಂಕಷ್ಟಕ್ಕೆ ತಳ್ಳಿದ್ದು ಲಾಭನಷ್ಟ ನೋಡದೆ ಅರ್ಚಕರು ತಮ್ಮ ಸೇವೆಯನ್ನು ಸಮಾಜದ ಒಳಿತಿಗಾಗಿ ಸಲ್ಲಿಸುತ್ತಿದ್ದು ಅವರನ್ನು ಗೌರವಿಸಬೇಕು ಎಂದರು.


ತಹಸಿಲ್ದಾರ್ ಮೋಹನ್‌ಮಾರ್ ಮಾತನಾಡಿ, ಲಾಕ್‌ಡೌನ್ ನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಅರ್ಚಕರಿಗೆ ಸರ್ಕಾರ ತಲಾ ಮೂರು ಸಾವಿರ ರೂ ಸಹಾಯಧನ ಬಿಡುಗಡೆ ಮಾಡಿದ್ದು ಮುಜರಾಯಿ ಇಲಾಖೆಗೆ ಸೇರಿದ ಅರ್ಚಕರು ಬ್ಯಾಂಕ್ ಖಾತೆ ಮೂಲಕ ಪಡೆಯಬಹುದು ಎಂದರು. ಸರ್ಕಾರದ ಆದೇಶದಂತೆ ತಾಲೂಕಿನಲ್ಲಿ ಕೆರೆಕಟ್ಟೆ, ಸ್ಮಶಾನ, ಗುಂಡುತೋಪುಗಳ ರಕ್ಷಣೆ ಹಾಗೂ ಸರ್ವೆ ಕಾರ್ಯ ಪ್ರಗತಿಯಲ್ಲಿದ್ದು ಮಲೆನಾಡು ಪ್ರದೇಶವಾದ ಅರೇಹಳ್ಳಿ ಹೋಬಳಿಯ ಅನೇಕ ಹಳ್ಳಿಗಳಲ್ಲಿ ಕೆರೆ ಒತ್ತುವರಿ ಮಾಡಿ ಕಾನೂನು ಬಾಹಿರವಾಗಿ ಗುಡಿಸಲು ಮತ್ತು ಮನೆಗಳ ನಿರ್ಮಾಣ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು ಅಂಥವರು ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಕೆರೆ ಕಟ್ಟೆಗಳ ಪುನಶ್ಚೇತನ ಮಾಡಲು ತಾಲೂಕು ಆಡಳಿತ ಮುಂದಾಗಿದ್ದು ಈ ಕೆರೆಕಟ್ಟೆ ಉಳಿಸಿ ಅಭಿಯಾನದಲ್ಲಿ ಎಲ್ಲರೂ ಕೈಜೋಡಿಸಿ ಅಭಿವೃದ್ಧಿಗೆ ಸಹಕಾರ ನೀಡಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಾಲ್ಕು ಜನ ಮಹಿಳೆಯರಿಗೆ ವಿವಿಧ ಯೋಜನೆಯ ಮಂಜೂರಾತಿ ಪತ್ರ ನೀಡಲಾಯಿತು. ಗ್ರಾಮಪಂಚಾಯಿತಿ ಅಧ್ಯಕ್ಷೆ ಫಾತಿಮಾಬಿ, ಜೆಡಿಎಸ್ ಮುಖಂಡ ನಟರಾಜ್, ಉಪ ತಹಶೀಲ್ದಾರ್ ಭೋಜೆಂದ್ರಪ್ಪ, ಪಿಡಿಒ ಸಂತೋಷ್, ರಾಜಸ್ವ ನಿರೀಕ್ಷಕ ಚಂದ್ರೇಗೌಡ ಇತರರು ಹಾಜರಿದ್ದರು

Post a Comment

Previous Post Next Post