ಹಾಸನ ಸೀಮೆ ನ್ಯೂಸ್ ಬೇಲೂರು :
ದೇಶದ ಅಭಿವೃದ್ಧಿ ಹಿನ್ನಲೆಯಲ್ಲಿ ಜನಸಂಖ್ಯಾ ನಿಯಂತ್ರಣದ ಅಗತ್ಯವಿದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
![]() |
| ಶಾಸಕ ಕೆ.ಎಸ್.ಲಿಂಗೇಶ್ ಹಸಿರು ಭಾವುಟ ಪ್ರದರ್ಶಿಸುವ ಮೂಲಕ ವಿಶ್ವಜನಸಂಖ್ಯಾ ದಿನಾಚರಣೆಯ ವಾಹನಕ್ಕೆ ಚಾಲನೆ ನೀಡಿದರು. |
ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಿಂದ ಏರ್ಪಡಿಸಿದ್ದ ವಿಶ್ವಜನಸಂಖ್ಯಾ ದಿನಾಚರಣೆಯಲ್ಲಿ ಜಾಗೃತಿ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಪಂಚದಲ್ಲಿ ಐದುನೂರು ದಶ ಕೋಟಿಯ ಅಂತ್ಯದ ಮಗುವಾಗಿ ಯುಗೋಸ್ಲೋವಿಯಾ ದೇಶದಲ್ಲಿ ಗಂಡುಮಗುವೊಂದು ಜನನವಾದ ಹಿನ್ನಲೆಯಲ್ಲಿ ವಿಶ್ವಜನಸಂಖ್ಯಾ ದಿನಾಚರಣೆಯನ್ನು ಆರಂಭಿಸಲಾಗಿದ್ದು ಅಂದಿನಿಂದ ದಿನಾಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆ.
ಇದೀಗ ೧೩೩ ಕೋಟಿ ಜನಸಂಖ್ಯೆ ಹೊಂದಿರುವ ಭಾರತ ವಿಶ್ವದಲ್ಲಿ ೧೪೦ ಕೋಟಿ ಜನರು ಇರುವ ಚೈನ ಹೊರತುಪಡಿಸಿ ಭಾರತ ಎರಡನೆ ಸ್ಥಾನದಲ್ಲಿದ್ದರೂ ಸಾಂದ್ರತೆಯಲ್ಲಿ ಭಾರತ ಮುಂದಿದೆ. ಇದರ ನಡುವೆ ಜನಸಂಖ್ಯಾ ಸ್ಫೋಟವಾದರೆ ಆಹಾರ ಸಮಸ್ಯೆ, ಉದ್ಯೋಗ ಸಮಸ್ಯೆ, ಆರೋಗ್ಯ ಸಮಸ್ಯೆ ಉಂಟಾಗಲಿದೆ.
ಇದನ್ನು ತಡೆಗಟ್ಟುವಲ್ಲಿ ಜನಸಂಖ್ಯಾ ನಿಯಂತ್ರಣದ ಅಗತ್ಯವಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ೨ ಮಕ್ಕಳಿಗೆ ಸೀಮಿತಗೊಳಿಸಿ ಯಾವುದೆ ಧರ್ಮ, ಜಾತಿ ಇಲ್ಲದೆ ಆದೇಶವನ್ನು ಹೊರಡಿಸಿದ್ದಾರೆ. ಇಂದು ನಮಗೆ ದೇಶದ ಅಭಿವೃದ್ಧಿ ಮುಖ್ಯವಾಗಿರುವುದರಿಂದ ಜನಸಂಖ್ಯಾ ನಿಯಂತ್ರಣದತ್ತ ನಾವು ಆಲೋಚಿಸಬೇಕಿದೆ. ವಿಜ್ಞಾನಿಗಳ, ವೈದ್ಯರ, ತಜ್ಞರ ಸಲಹೆ ಪಡೆದು ನಿಯಮ ರೂಪಿಸಬೇಕಿದೆ ಎಂದು ಹೇಳಿದರು.
ಯಾವುದೆ ನಿಯಮ ಜಾರಿಗೆ ತರಲೇಬೇಕೆಂದಾಗ ಜನಜಾಗೃತಿ ಮೂಡಿಸಿ ನಂತರ ಸಾಧಕ ಬಾದಕಗಳ ಚರ್ಚೆ ನಡೆಸಿ ಜಾರಿಗೆ ತರುವ ಅಗತ್ಯವಿದೆ.
ಯಾವುದೆ ರೀತಿಯಲ್ಲಾದರೂ ಜನಸಂಖ್ಯಾ ನಿಯಂತ್ರಣ ಅತ್ಯಗತ್ಯವಿದೆ. ಮಾನವಸಂಪ್ಮೂಲ, ಆರೋಗ್ಯ, ಶಿಕ್ಷಣಕ್ಕೆ ಒತ್ತು ಕೊಡಬೇಕಿದೆ. ನೈಸರ್ಗಿಕ ಸಂಪತ್ತು ಬಳಕೆ ಮಾಡಿಕೊಂಡು ಯುವಕರಿಗೆ ಉದ್ಯೋಗ ಕಲ್ಪಿಸಬೇಕಿದೆ ಎಂದು ಹೇಳಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ವಿಜಯ್ ಮಾತನಾಡಿ, ಪ್ರತಿವರ್ಷ ನಾವು ಜನಸಂಖ್ಯಾ ದಿನಾಚರಣೆ ಆಚರಿಸುತ್ತಿದ್ದೇವೆ. ಇಂದು ದಿನಾಚರಣೆ ದಿನಾಚರಣೆಯಾಗೆ ಉಳಿಯಬಾರದು, ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ. ಜನಸಂಖ್ಯೆ ಸ್ಫೋಟಗೊಂಡರೆ ಸೌಲಭ್ಯ ಒದಗಿಸಲು ಸಾಧ್ಯವಾಗುವುದಿಲ್ಲ ಹಾಗೂ ಆರೋಗ್ಯ ಸಮಸ್ಯೆ ಉಂಟಾಗಲಿದೆ. ಮುಂದಿನ ಪೀಳಿಗೆಗೆ ಅನುಕೂಲ ಆಗುವಂತೆ ಯೋಜನೆ ರೂಪಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಮೋಹನಕುಮಾರ್, ಇಒ ರವಿಕುಮಾರ್, ಡಾ.ನರಸೇಗೌಡ ಹಾಗೂ ಆರೋಗ್ಯ ಇಲಾಖೆ ನೌಕರರು ಇದ್ದರು.
