ಬೇಲೂರು :ಮಾರಣಾಂತಿಕ ಕೋವಿಡ್ ಅಲೆ ಸಮಯದಲ್ಲಿ ಕೊರೊನಾಕ್ಕೆ ತುತ್ತಾಗಿ ಮೃತಪಟ್ಟವರನ್ನು ಕುಟುಂಬಸ್ತರೆ ಮುಟ್ಟದಿರುವ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಅಂತ್ಯ ಸಂಸ್ಕಾರ ಮಾಡುತ್ತಿದ್ದ ಪಟ್ಟಣದ ೨೪ x ೭ ತಂಡದ ಸಕ್ರೀಯ ಕಾರ್ಯಕರ್ತ ಜುಬೇರ್‌ಅಹ್ಮದ್ ಇಂದು ಹೃದಯಾಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ್ದಾರೆ.
![]() |
| ಮೃತ ಜುಬೇರ್ ಅಹ್ಮದ್ |
೩೨ ವರ್ಷ ವಯಸ್ಸಿನ ಮೃತರು ಪತ್ನಿ ೫ ವರ್ಷದ ಹೆಣ್ಣುಮಗುವನ್ನು ಹೊಂದಿದ್ದರು. ತಂಡದ ನೇತಾರ ನೂರ್‌ಅಹ್ಮದ್ ಅವರ ತಂಡದೊಂದಗೆ ಜಾತಿ, ಧರ್ಮ ರಹಿತವಾಗಿ ಅನಾಥ ಶವ ಸಂಸ್ಕಾರ, ಬಿಕ್ಷುಕರ, ಅನಾಥರ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡಿದ್ದಲ್ಲದೆ, ಕೊರೊನಾ ಅಲೆಯ ಆರಂಭದಿಂದಲೂ ಮಧ್ಯಾಹ್ನ ಮತ್ತು ರಾತ್ರಿ ಊಟದ ಪೊಟ್ಟಣಗಳನ್ನು ಬಿಕ್ಷುಕರಿಗೆ ವಿತರಿಸುವ ಜವಾಬ್ದಾರಿ ಹೊತ್ತಿದ್ದರು. ಇದರ ಜೊತೆಗೆ ಕೊರೊನಾದಿಂದ ಮೃತಪಟ್ಟು ಕುಟುಂಬಸ್ಥರ ನಿರ್ಲಕ್ಷ್ಷ್ಯ ಕೆ ಒಳಗಾದ ಮೃತ ದೇಹಗಳನ್ನು ಪ್ರಾಣದ ಹಂಗು ತೊರೆದು ಸಂಸ್ಕಾರ ಮಾಡುವುದರಲ್ಲಿ ಮುನ್ನೆಜ್ಜೆ ಇಡುತ್ತಿದ್ದರು. ಇದೀಗ ಸೇವಾ ಮನೋಭಾವದ ವ್ಯಕ್ತಿ ಹೃದಯಾಘಾತದಿಂದ ತಂಡದ ಸದಸ್ಯರನ್ನು ತೊರೆದು ತನ್ನ ದೇಹದ ಸಂಸ್ಕಾರವನ್ನು ತನ್ನ ತಂಡದ ಜವಾಬ್ದಾರಿಯೆಂದು ಕಳಚಿಕೊಂಡಿದ್ದಾರೆ.
ಕಳೆದ ೧೦ ವರ್ಷದ ಹಿಂದೆ ಸ್ನೇಹಿತರನ್ನು ಒಗ್ಗೂಡಿಸಿಕೊಂಡು ಬಂದಂತ ತಂಡ ಕೊರೊನಾ ಸಂದರ್ಭದಿಂದ ೨೪ x ೭ ಹೆಸರಿನಲ್ಲಿ ಹಗಲು, ರಾತ್ರಿ ಎನ್ನದೆ ಸೇವಾಕಾರ್ಯದಲ್ಲಿ ತೊಡಗಿಕೊಂಡಿತು. ಕೆಲವರ ನಿಷ್ಕೃಷ್ಠದ ನಿಂದನಾತ್ಮಕ ಮಾತುಗಳ ನಡುವೆಯೂ ಕೋವಿಡ್‌ನಿಂದ ಮೃತಪಟ್ಟ ಸುಮಾರು ೫೧ ಮೃತದೇಹಗಳಿಗೆ ಸಂಸ್ಕಾರ ನಡೆಸಿರುವ ತಂಡ ಅನಾಥ ಮೃತದೇಹಗಳ ಸಂಸ್ಕಾರ ಬಹಳ ಹಿಂದಿನಿಂದಲೂ ಮಾಡಿಕೊಂಡು ಬರುತ್ತಿದೆ. ಇಂದಿಗೂ ತಮ್ಮ ಸೇವಾಕಾರ್ಯ ಮೊಟಕುಗೊಳಿಸದೆ ಮುನ್ನುಗ್ಗುತ್ತಿರುವ ತಂಡದ ಸದಸ್ಯರಾದ ನೂರ್‌ಅಹ್ಮದ್, ಫಾಜಿಲ್‌ಮಾಸ್ಟರ್, ಸಂಪತ್‌ಕುಮಾರ್, ಫಾಜಿಲ್‌ಸಜಜುಕಿ, ಮೆಜೆಸ್ಟಿಕ್‌ಅಕ್ಬರ್, ನಿಷಾದ್, ಮುಜಾಹಿದ್, ಅಸ್ಗರ್, ಸಾಕೀಬ್, ಮುಜಾಮಿಲ್, ಸಾಹಿಲ್ ಇವರೆಲ್ಲರನ್ನು ಬಿಟ್ಟು ಹೊರಟಿದ್ದು ಎಲ್ಲರಿಗೂ ನೋವಿನ ಸಂಗತಿಯೆ ಹೌದು.
ದೇವರು ಕುಟುಂಬಸ್ಥರಿಗೆ ಹಾಗೂ ತಂಡದ ಸದಸ್ಯರಿಗೆ ನೋವು ತಡೆಯುವ ಶಕ್ತಿ ನೀಡಲಿ, ಎಂಬುದಷ್ಟೇ ಹಿತೈಷಿಗಳ ಅಭಿಮಾನದ ನುಡಿ.
