ಹಾಸನ - ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ಈ ಪ್ರಕ್ರಿಯೆಯಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಬಿ.ಎ ಪರಮೇಶ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ಶಾಲಾ ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ಚುನಾವಣಾ ಪ್ರಕ್ರಿಯೆ, ಮತದಾರರ ಜಾಗೃತಿ ಕುರಿತು ಹಾಗೂ ಸ್ವಾತಂತ್ರ್ಯೋತ್ಸವದ ಸುವರ್ಣ ಮಹೋತ್ಸವದ ಅಂಗವಾಗಿ ವಿವಿಧ ಚಟುವಟಿಕೆಗಳನ್ನು ಆಯೋಜಿಸುವ ಬಗ್ಗೆ ಅಧಿಕಾರಿಗಳು, ಪ್ರಾಂಶುಪಾಲರ ಸಭೆ ನಡೆಸಿ ಅವರು ಮಾತನಾಡಿದರು.
ಮತದಾರರ ಜಾಗೃತಿ ನಿರಂತರ ಪ್ರಕ್ರಿಯೆಯಾಗಿದೆ. ಕೋವಿಡ್-19 ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ಕಳೆದ ಎರಡು ವರ್ಷಗಳಿಂದ ಭೌತಿಕವಾಗಿ, ಗುಂಪು ಚಟುವಟಿಕೆ ನಡೆಸಲು ಸಾಧ್ಯವಾಗಿಲ್ಲ. ಆದರೆ ಆನ್‍ಲೈನ್ ಸ್ಪರ್ಧೆಗಳನ್ನು ನಡೆಸಲಾಗಿದೆ. ಈ ಬಾರಿಯೂ ರಾಷ್ಟ್ರೀಯ ಮತದಾರರ ದಿನಾಚರಣೆಗೆ ಪೂರಕವಾಗಿ ಹಾಗೂ ಸ್ವಾತಂತ್ರ್ಯೋತ್ಸವದ ಸುವರ್ಣ ಮಹೋತ್ಸವದ ಕುರಿತು ಎಲ್ಲಾ ಶಾಲೆ, ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.
18 ವರ್ಷ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಅರಿವು ಮೂಡಿಸಿ ಜೊತೆಗೆ ಎಲ್ಲಾ ಚುನಾವಣೆಗಳಲ್ಲಿ ಅರ್ಹ ಮತದಾರರು ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕು ಹೇಳಿದರು.
ವಿದ್ಯಾರ್ಥಿಗಳಿಗೆ ವಿವಿಧ ಹಂತಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಹೆಚ್ಚಿನ ಅರಿವು ನೀಡಬೇಕು ಜೊತೆಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರಮವಹಿಸಬೇಕು ಎಂದರು.
ಎಲ್ಲಾ ಪದವಿ ಕಾಲೇಜು, ಪದವಿ ಪೂರ್ವ ಕಾಲೇಜುಗಳು , ವೈದ್ಯಕೀಯ ಕಾಲೇಜು ಹಾಗೂ ಇಂಜಿನಿಯರಿಂಗ್ ಕಾಲೇಜುಗಳೂ ಹೆಚ್ಚು ಸಕ್ರಿಯವಾಗಿ ಇದರಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜು ಹಂತ, ತಾಲ್ಲೂಕು ಹಾಗೂ ಜಿಲ್ಲಾ ಹಂತದಲ್ಲಿ ಮತದಾರರ ಜಾಗೃತಿ ಚಟುವಟಿಕೆ ಹಾಗೂ ಸ್ವಾತಂತ್ರ್ಯೋತ್ಸವದ ಸುವರ್ಣ ಮಹೋತ್ಸವ ಕಾರ್ಯಕ್ರಮಗಳನ್ನು ನಡೆಸಿರುವ ಕುರಿತು ವರದಿ ಸಲ್ಲಿಸಬೇಕು ಹಾಗೂ ಚುನಾವಣಾ ಆಯೋಗದಲ್ಲಿ ಗೂಗಲ್ ಸ್ಪ್ರೆಡ್ ಶೀಟ್‍ನಲ್ಲಿ ನಿಗಧಿತ ಅವಧಿಯೊಳಗೆ ದಾಖಲಿಸಬೇಕು ಎಂದು ಅವರು ತಿಳಿಸಿದರು.
ಸ್ವೀಪ್ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ವಿನೋದ್ ಚಂದ್ರ ಅವರು ಮಾತನಾಡಿ ಸಾಮಾಜಿಕ ಜಾಲತಾಣಗಳು ಮತ್ತು ಸಮೂಹ ಮಾಧ್ಯಮಗಳು, ನವ ಮಾಧ್ಯಮಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚು ಸಕ್ರಿಯವಾಗಿ ಮತದಾರರ ಜಾಗೃತಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಕ್ರಮವಹಿಸಬಹುದಾಗಿದೆ ಎಂದರು.
ಕಳೆದ ಬಾರಿಯಂತೆ ಈ ಬಾರಿಯೂ ಶಾಲಾ ಕಾಲೇಜು ಹಂತಗಳ ನೋಡಲ್ ಅಧಿಕಾರಿಗಳು ಸ್ಪರ್ಧೆಗಳನ್ನು ಸಂಘಟಿಸಬೇಕು ಎಂದು ಅವರು ತಿಳಿಸಿದರು.
ತಾಲ್ಲೂಕು ಹಂತದ ತರಬೇತಿಯ ಜವಾಬ್ದಾರಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯ ಅಧಿಕಾರಿಗಳು ಹಾಗೂ ಪ್ರಾಂಶುಪಾಲರುಗಳು ವಹಿಸಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಸ್ವೀಪ್ ನೋಡಲ್ ಅಧಿಕಾರಿ ಮತ್ತು ಸಂಪನ್ಮೂಲ ವ್ಯಕ್ತಿಯಾದ ಕಾಂತರಾಜು ಅವರು ಸ್ವೀಪ್ ಚಟುವಟಿಕೆ ಉದ್ದೇಶ, ಚುನಾಚಣಾ ಆಯೋಗದ ಸೂಚನೆಗಳು, ಸ್ಪರ್ಧೆಗಳನ್ನು ಸಂಘಟಿಸುವ ಸ್ವರೂಪದ ಬಗ್ಗೆ ಸಭೆಯಲ್ಲಿ ತರಬೇತಿ ನೀಡಿದರು.
ಸಭೆಯಲ್ಲಿ ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಹಾಲಿಂಗಯ್ಯ, ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಕಾಲೇಜುಗಳ ಪ್ರಾಂಶುಪಾಲರು ಮತ್ತಿತರರು ಹಾಜರಿದ್ದರು.
***********
ಕೃಪೆ : ( ಕರ್ನಾಟಕ ವಾರ್ತೆ ) Hassan varthe