ಬೇಲೂರು:ಇಲ್ಲಿನ ದೇವಾಂಗ ಬೀದಿಯಲ್ಲಿರುವ ಚೌಡೇಶ್ವರಿ ಅಮ್ಮನವರ ದೇಗುದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಬೇಲೂರಿನ ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು, ಭಕ್ತರು ದರ್ಶನ ಪಡೆದರು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು |
ದೇವರಿಗೆ ಅಭಿಷೇಕ, ಹೋಮದೊಂದಿಗೆ ವಿಶೇಷ ಪುಷ್ಪಾಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ನೂರಾರು ಭಕ್ತರು ದೇವರ ಪೂಜಾಕಾರ್ಯದಲ್ಲಿ ಪಾಲ್ಗೊಂಡಿದ್ದರು. ಪೂಜಾಕಾರ್ಯವನ್ನು ಪ್ರಧಾನ ಅರ್ಚಕರಾದ ಮೋಹನಭಟ್ಟರ್ ಹಾಗೂ ಶಶಿಪ್ರಕಾಶಭಟ್ ನೆರವೇರಿಸಿದರು.
ಇದೆ ಸಂದರ್ಭ ದೇವಾಂಗ ಸಮುದಾಯದ ವಿಶೇಷ ಗಣ್ಯ ವ್ಯಕ್ತಿಗಳಾದ ಡಾ.ಚಂದ್ರಮೌಳಿ, ಹಳೇಬೀಡು ಪದವಿ ಕಾಲೇಜು ಪ್ರಾಂಶುಪಾಲ ಡಾ.ಎಸ್.ನಾರಾಯಣ್, ಪುರಸಭ ಸದಸ್ಯೆ ಮಣಿಶೇಖರ್, ಡಾ.ಚೇತನ್‌ಕುಮಾರ್ ಇವರನ್ನು ಸನ್ಮಾನಿಸಲಾಯಿತು. ಹಾಸನದಲ್ಲಿ ನಡೆದ ಮೂರೂವರೆ ವರ್ಷ ವಯಸ್ಸಿನವರ ಬ್ಯೂಟಿ ಅಂಡ್ ಆಕ್ಟೀವ್ ಸ್ಪರ್ಧೆಯಲ್ಲಿ `ಟಿಟ್ಲ್ ಆಟ್ರಾಕ್ಟೀವ್ ಪೇಸ್ ಆಫ್ ಕರ್ನಾಟಕ-೨೦೨೧' ಬಹುಮಾನ ಪಡೆದುದ್ದಕ್ಕಾಗಿ ಬಿ.ಆರ್.ತೀರ್ಥಂಕರ್ ಅವರ ಮೊಮ್ಮಗಳು ಹನಿವಸಂತ್ ಇವರನ್ನು ದೇವಾಂಗ ಸಂಘದ ಅಧ್ಯಕ್ಷ ರಂಗನಾಥ್ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಾಂಶುಪಾಲ ಎಸ್.ನಾರಾಯಣ್, ಸಾಧಿಸಬೇಕೆಂಬ ಛಲವೊಂದಿದ್ದರೆ ಏನನ್ನಾದರೂ ಮಾಡಬಹುದು. ಆಸಕ್ತಿ, ತಾಳ್ಮೆ ಮುಖ್ಯ. ಬಡಕುಟುಂಬದಲ್ಲಿ ಹುಟ್ಟಿದ ನಾನು ಕಷ್ಟಪಟ್ಟೇ ಶಿಕ್ಷಣ ಪಡೆದೆ. ಕುಟುಂಬದ ಸ್ಥಿತಿಗತಿಗಳನ್ನು ನನ್ನನ್ನು ಜೀವನದಲ್ಲಿ ಮುಂದೆ ಬರಬೇಕೆಂಬುದಕ್ಕೆ ಕಾರಣವಾಯಿತು. ಮಕ್ಕಳಿಗೆ ಪ್ರಥಮವಾಗಿ ಶಿಕ್ಷಣ ಕೊಡಿಸಬೇಕು. ಶಿಕ್ಷಣ ಪಡೆದವರು ಎಲ್ಲಿಯಾದರೂ ಬದುಕು ಕಟ್ಟಿಕೊಳ್ಳಬಹುದೆಂದರು. ಸಂಘದಿಂದ ಸನ್ಮಾನಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಡಾ.ಚಂದ್ರಮೌಳಿ ಸನ್ಮಾನಿತರಾಗಿ ಮಾತನಾಡಿ, ಬೇಲೂರಿಗೆ ಬಂದು ೨೫ ವರ್ಷಗಳಾಗಿದ್ದು ವೈದ್ಯಕೀಯ ವೃತ್ತಿ ಹಾಗೂ ಲಯನ್ಸ್ ಸೇವಾ ಸಂಸ್ಥೆಯ ಮೂಲಕ ಜನರ ಸೇವೆ ಮಾಡುವ ಭಾಗ್ಯ ದೊರೆತಿದೆ. ಕೊರೊನಾ ಸಂದರ್ಭದಲ್ಲಿ ಕ್ಲಿನಿಕ್ ಮುಚ್ಚದೆ, ಹೆಚ್ಚು ಶುಲ್ಕ ಪಡೆಯದೆ ಎಂದಿನAತೆ ಚಿಕಿತ್ಸೆ ನೀಡಿದ್ದೇನೆ. ಇದಕ್ಕೆ ನನ್ನ ಪತ್ನಿಯ ಸಹಕಾರ ಹೆಚ್ಚಿತ್ತು. ಇಂದು ದೇವಾಂಗ ಸಂಘದಿಂದ ಸನ್ಮಾನಿಸುತ್ತಿರುವುದಕ್ಕೆ ಹರ್ಷವಾಗಿದೆ ಎಂದು ಹೇಳಿದರು.
ಮತ್ತೊಬ್ಬ ಸನ್ಮಾನಿತ ಡಾ.ಚೇತನಕುಮಾರ್ ಮಾತನಾಡಿ, ಇಂದು ಯಾವುದೆ ವ್ಯಕ್ತಿ ಬೆಳೆಯಲು ಸಮುದಾಯದ ಸಹಕಾರ ಬೇಕು. ರಾಜಕಾರಣದ ಜೊತೆ ಶೈಕ್ಷಣಿಕ ಸಂಸ್ಥೆ ನಡೆಸಿಕೊಂಡು ಜೊತೆಯಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದೇನೆ. ಯುವಕನಾಗಿ ರಾಜಕೀಯದಲ್ಲಿ ಸ್ಥಾನಮಾನಗಳ ಅವಕಾಶವಿದ್ದು ಜನಾಂಗದವರು ಸಹಕಾರ ನೀಡಬೇಕೆಂದರು.
ಕಾರ್ಯಕ್ರಮದಲ್ಲಿ ದೇವಾಂಗ ಸಂಘದ ಅಧ್ಯಕ್ಷ ರಂಗನಾಥ್ ಮಾತನಾಡಿದರು. ಅರ್ಚಕರು ವರಮಹಾಲಕ್ಷ್ಮಿ ಹಬ್ಬ ಆಚರಣೆ ಕುರಿತು ಮಾಹಿತಿ ಒದಗಿಸಿದರು. ಹೊನ್ನರಾಜು ನಿರೂಪಿಸಿದರು. ಯಜಮಾನಶೆಟ್ಟರಾದ ಸುಬ್ಬರಾಜಶೆಟ್ಟಿ, ಅಧ್ಯಕ್ಷ ರಂಗನಾಥ್, ಉಪಾಧ್ಯಕ್ಷ ಬಿ.ಕೆ.ಮೋಹನಕುಮಾರ್, ಕಾರ್ಯದರ್ಶಿ ದಿವಾಕರ್, ಮಾಜಿ ಅಧ್ಯಕ್ಷ ವಸಂತಶೇಖರ್, ನಿರ್ದೇಶಕರಾದ ಲೋಕೇಶ್, ಪ್ರದೀಪ್, ಪ್ರಭಾಕರ್, ಕುಮಾರ್ ಇದ್ದರು.