ಹಿರಿಯೂರು: ಬಯಲು ಸೀಮೆಯ ಜೀವನಾಡಿ ವೇದಾವತಿ ನದಿಗೆ ಅಡ್ಡಲಾಗಿ ನಿಮಿ೯ಸಿರುವ ವಾಣಿವಿಲಾಸ ಸಾಗರಕ್ಕೆ ಪ್ರಸಕ್ತ ಸಾಲಿನಲ್ಲಿ ಸೆಪ್ಟಂಬರ್ 13 ರಂದು 107 ಅಡಿ ನೀರು ಹರಿದು ಬಂದಿದೆ. ಹತ್ತು ವಷ೯ಗಳ ಬಳಿಕ ನೀರಿನ ಮಟ್ಟ 107 ರ ಗಡಿ ದಾಟಿರುವುದು ವಿಶೇಷವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಬಾಬಬುಡನ್ ಗಿರಿ ಸುತ್ತಮುತ್ತಲಿನ, ಕಡೂರು, ಬೀರೂರು, ಅಜ್ಜಂಪುರ, ತೆರೀಕೆರೆ, ಹೊಸದುಗ೯ ತಾಲೂಕಿನಾದ್ಯಂತ ಸುರಿದ ಮಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅಜ್ಜಂಪುರ ಸಮೀಪದ ಪಂಪ್ ಹೌಸ್ ನಿಂದ ನಿತ್ಯ ನೀರನ್ನು ಲಿಫ್ಟ್ ಮಾಡುತ್ತಿರುವುದರಿಂದಾಗಿ ಅಲ್ಲಿನ ಬಹುತೇಕ ಕೆರೆ ಕಟ್ಟೆ, ಬ್ಯಾರೇಜ್ ಗಳು ಭತಿ೯ಯಾಗಿದ್ದು ವಾಣಿವಿಲಾಸ ಸಾಗರಕ್ಕೆ ಹರಿದು ಬರುತ್ತಿರುವ ನೀರಿನ ಒಳ ಹರಿವು ಸ್ಪಲ್ಪ ಮಟ್ಟಿಗಿದ್ದು ಮುಂದಿನ ಒಂದು ವಾರದಲ್ಲಿ 110 ಅಡಿಯಷ್ಟು ಏರಿಕೆ ಕಾಣುವ ನಿರೀಕ್ಷೆಯಿದೆ ಎಂಬುದು ನೀರಾವರಿ ಇಲಾಖೆಯ ಅಧಿಕಾರಿಗಳ ಅನಿಸಿಕೆಯಾಗಿದೆ.
ಗುಡ್ಡ, ಬೆಟ್ಟಗಳ ಮಧ್ಯ ಸ್ವಾಭಾವಿಕವಾಗಿ ನಿಮಿ೯ಸಿರುವ ವಾಣಿವಿಲಾಸ ಸಾಗರಕ್ಕೆ ಹೆಚ್ಚಿನ ನೀರು ಹರಿದು ಬಂದಿರುವುದರಿಂದ ನೋಡಲು ನಯನ ಮನೋಹರವಾಗಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಡ್ಯಾಂ ಬಳಿಯೆ ಇರುವ ಔಷಧಿ ವನವು ನೋಡುಗರಿಗೆ ಖುಷಿ ಒದಗಿಸುತ್ತಿದೆ. ಜಲಾಶಯದ ಸುತ್ತಲು ಸುಳಿಯುವ ಇಂಪಾದ ವಾತಾವರಣ, ಸೂಯೋ೯ದಯ ಸೂರ್ಯಾಸ್ತ ಸಮಯದಲ್ಲಿ ಸೂಯ೯ನ ಕಿರಣಗಳು ಪ್ರವಾಸಿಗರಿಗೆ ಹೆಚ್ಚಿನ ರಂಜನೆ ನೀಡುತ್ತಿವೆ.
ಹಿರಿಯೂರು ಪಟ್ಟಣದಿಂದ ಅಣತಿ ದೂರಕ್ಕೆ ಕ್ರಮಿಸಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಿಂದ ಪಶ್ಚಿಮಕ್ಕೆ ತಿರುವು ಪಡೆದು ಹೊಸದುಗ೯ ರಸ್ತೆಯಲ್ಲಿ 17 ಕಿಲೋ ಮೀಟರ್ ಸಾಗಿದರೆ ಸಿಗುವುದೇ ಭಾರತ ಮಾತೆಯ ಭೂಪಟ ಹೋಲುವ ಸುಂದರ ಜಲಾಶಯವೇ ವಾಣಿವಿಲಾಸ ಸಾಗರವಾಗಿದೆ.
ಇಂದಿನ ಕೊರೊನಾ ಸಂಕಷ್ಟದಲ್ಲಿ ಉದ್ಯೋಗ ಕಳೆದುಕೊಂಡು ಹಳ್ಳಿಗಳ ಕಡೆ ಮುಖ ಮಾಡಿದ ಯುವಕರಿಗೆ ತುಂಬಿ ಹರಿಯುತ್ತಿರುವ ವಾಣಿವಿಲಾಸ ಸಾಗರ ನೀರಿನಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಲು ಪ್ರೇರೇಪಿಸಿದೆ, ಇದರಿಂದ ತಾಲ್ಲೂಕಿನಲ್ಲಿ ಮತ್ತೆ ಹಸಿರು ಪರಿಸರ ಸೃಷ್ಟಿಯಾಗಲಿದೆ, ಅಲ್ಲದೆ ಬಯಲುಸೀಮೆಯಾದ ಚಿತ್ರದುರ್ಗ ಇದೀಗ ಹಸಿರುಸೀಮೆಯಾಗುವ ಕಾಲ ಸನ್ನಿಹಿತವಾಗಿದೆ.
Tags
ಪ್ರವಾಸ