ಹಾಸನ : ನಮ್ಮ ಭಾಷೆ, ನಮ್ಮ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಪ್ರತಿನಿತ್ಯ ಕನ್ನಡ
ಬಳಕೆ ಮಾಡುವ ಮೂಲಕ ದೇಶದ ಪ್ರಗತಿಗೆ ಮುಂದಾಗುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ
ಕಾರ್ಯನಿರ್ವಾಹಣಾಧಿಕಾರಿ ಬಿ.ಎ. ಪರಮೇಶ್ ಕರೆ ನೀಡಿದರು.
ನಗರದ
ಹಾಸನಾಂಬ ಕಲಾಕ್ಷೇತ್ರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ
ಇಲಾಖೆ ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಕನ್ನಡಕ್ಕಾಗಿ ನಾವು ಕರ್ನಾಟಕ ರಾಜ್ಯೋತ್ಸವ ಅಭಿಯಾನ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಉಸಿರು ಕನ್ನಡ, ಭಾಷೆ, ನೆಲ, ಜಲ
ಸಂರಕ್ಷಿಸುವುದು ಪ್ರತಿಯೊಬ್ಬರ ಹೊಣೆಗಾರಿಕೆ ಯಾಗಿದೆ ಎಂದರು. ಕನ್ನಡದ ಜೊತೆ ಇತರೆ ಭಾಷೆಗಳನ್ನು
ಗೌರವಿಸಬೇಕು ಎಂದರಲ್ಲದೆ, ವಿದ್ಯಾರ್ಥಿಗಳು ಕನ್ನಡದ ಜೊತೆಗೆ ಆಂಗ್ಲ ಭಾಷೆಯನ್ನು ಅಭ್ಯಾಸ
ಮಾಡುವುದರಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ರಾಜ್ಯ
ಸರ್ಕಾರಿ ನೌಕರರ ಜಿಲ್ಲಾ ಸಂಘದ ಅಧ್ಯಕ್ಷರಾದ ಈ.ಕೃಷ್ಣೆಗೌಡ ಅವರು ಮಾತನಾಡಿ, ಇತ್ತೀಚಿನ
ದಿನಗಳಲ್ಲಿ ಕನ್ನಡ ಭಾಷೆ ಬಳಕೆ ಕಣ್ಮರೆಯಾಗುತ್ತಿದ್ದು, ವಿದ್ಯಾರ್ಥಿಗಳು ಕನ್ನಡದ ಬಗ್ಗೆ ಹೆಚ್ಚು
ಒಲವು ತೋರಿ ಸಾಹಿತ್ಯ ಪುಸ್ತಕಗಳನ್ನು ಓದುವುದರ ಮೂಲಕ ಜ್ಞಾನವೃದ್ದಿ ಮಾಡಿಕೊಳ್ಳುವಂತೆ ಸಲಹೆ
ನೀಡಿದರು.
ಕನ್ನಡ
ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಸುದರ್ಶನ್ ಅವರು ಕಾರ್ಯಕ್ರಮ ಕುರಿತು
ಪ್ರಸ್ತಾವಿಕ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಬನುಮ ಗುರುದತ್ತ ಮತ್ತು ತಂಡದವರಿಂದ ಸುಗಮ
ಸಂಗೀತ ಹಾಗೂ ಉನ್ನತ್ ಹೆಚ್. ಆರ್. ಮತ್ತು ತಂಡದವರಿಂದ ನೃತ್ಯ ರೂಪಕ ಕಾರ್ಯಕ್ರಮ ಜರುಗಿತು.
ನಗರಸಭೆ
ಅಧ್ಯಕ್ಷರಾದ ಮೋಹನ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಲಂಬಾಣಿ,
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರುಗಳಾದ ಜಾವಗಲ್ ಪ್ರಸನ್ನ,
ಕಲಾವಿದ ಹಾಗೂ ಪ್ರಶಸ್ತಿ ವಿಜೇತ ಬಿ.ಟಿ.ಮಾನವ ಇತರರು ಉಪಸ್ಥಿತರಿದ್ದರು.