ಕನ್ನಡ ರಾಜ್ಯೋತ್ಸವ ಸರಳ ಆಚರಣೆಗೆ ನಿರ್ಧಾರ: ಸಾಧಕರಿಗೆ ಸನ್ಮಾನ

ಬೇಲೂರು: ಕನ್ನಡ ರಾಜ್ಯೋತ್ಸವ ಹಾಗೂ ಶನಿವಾರ ಕಿತ್ತೂರುರಾಣಿ ಚನ್ನಮ್ಮ ಜಯಂತಿ ಆಚರಣೆ ಕುರಿತು ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಬೇಲೂರಿನಲ್ಲಿ ಕನ್ನಡರಾಜ್ಯೋತ್ಸವ ಮತ್ತು ಕಿತ್ತೂರುರಾಣಿ ಚನ್ನಮ್ಮ ಜಯಂತಿ ಆಚರಣೆ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಶಾಸಕ ಕೆ.ಎಸ್.ಲಿಂಗೇಶ್, ಕನ್ನಡರಾಜ್ಯೋತ್ಸವ ಅರ್ಥಪೂರ್ಣವಾಗಿ ಆಚರಣೆ ಆಗಬೇಕು. ಕೊರೊನಾ ಕಾರಣದಿಂದ ಸರ್ಕಾರ ಕೆಲವೊಂದು ಮಾರ್ಗಸೂಚಿಗಳನ್ನು ಜಾರಿಗೆ ತಂದಿದ್ದು ಅದರಂತೆ ಸರಳವಾಗಿ ಆಚರಿಸಲಾಗುವುದು. ರಾಜ್ಯೋತ್ಸದಂದು ಕ್ರೀಡೆ, ಸಮಾಜಸೇವೆ, ಪತ್ರಿಕೋಧ್ಯಮ, ನಾಗರೀಕಸೇವೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ, ಕನ್ನಡದಲ್ಲಿ ೧೨೫ ಅಂಕ ಪಡೆದ ಹತ್ತನೇ ತರಗತಿ ಮತ್ತು ಪಿಯು ತರಗತಿಯ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರದ ಜೊತೆಗೆ ಕನ್ನಡನಿಘಂಟು ಪುಸ್ತಕ ನೀಡಲು ಸಭೆ ನಿರ್ಧರಿಸಿತು.

ಸಾಧಕರನ್ನು ಆಯ್ಕೆ ಮಾಡಲು ಶಾಸಕ ಕೆಎಸ್.ಲಿಂಗೇಶ್ ಅವರ ಅಧ್ಯಕ್ಷರಾಗಿರುವ ಹಾಗೂ ತಹಸೀಲ್ದಾರ್ ಮೋಹನಕುಮಾರ್, ಪುರಸಭೆ ಅಧ್ಯಕ್ಷ ಸಿ.ಎನ್.ದಾನಿ, ಎಪಿಎಂಸಿ ಅಧ್ಯಕ್ಷ ಮಹೇಶ್, ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಬಿ.ಮೋಹನಕುಮಾರ್ ಒಳಗೊಂಡ ಸಮಿತಿ ರಚಿಸಲಾಯಿತು. ರಾಜ್ಯೋತ್ಸವಕ್ಕೆ ಒಂದು ದಿನ ಮುಂಚಿತವಾಗಿ ಸರ್ಕಾರಿ ಕಟ್ಟಡಗಳ ಮೇಲೆ ವಿದ್ಯುತ್ ಅಲಂಕಾರ ಮಾಡುವುದು ಖಾಸಗಿ ವ್ಯಕ್ತಿಗಳೂ ಸಹ ಅಭಿಮಾನ ಪೂರ್ವಕವಾಗಿ ಅಲಂಕಾರ ಮಾಡಿಕೊಳ್ಳಬೇಕೆಂದು ಸಲಹೆ ನೀಡಲಾಯಿತು. 

ರಾಜರಾಜೇಶ್ವರಿ ಮೂರ್ತಿ ಮೆರವಣಿಗೆ ಮಂಟಪಕ್ಕೆ ತಾಲ್ಲೂಕು ಆಡಳಿತದಿಂದ ೧೦ ಸಾವಿರ ರೂ. ನೀಡಲು ಸಭೆ ಒಪ್ಪಿತು. ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ಅಕ್ಷರ ದೊಡ್ಡದಾಗಿರುವಂತೆ ಕರವೇ ಚಂದ್ರಶೇಖರ್ ಮನವಿ ಮಾಡಿದರು. ನೊಟೀಸ್ ನೀಡಿ ಕ್ರಮ ಕೈಗೊಳ್ಳುವಂತೆ ಪುರಸಭೆಯ ಮುಖ್ಯಾಧಿಕಾರಿ ಸುಜಯಕುಮಾರ್‌ಗೆ ಶಾಸಕರು ಸೂಚಿಸಿದರು. ಕನ್ನಡ ರಾಜ್ಯೋತ್ಸವಕ್ಕೆ ಸರ್ಕಾರ ಹಣ ನೀಡಲಿದ್ದು ಇದರಲ್ಲಿ ಭುವನೇಶ್ವರಿ ಮೆರವಣಿಗೆಗೆ ಹಣ ನೀಡುವಂತೆ ತಾ.ಪಂ.ಮಾಜಿ ಅಧ್ಯಕ್ಷ ರವಿಕುಮಾರ್ ಅವರು ಸಲಹೆ ನೀಡಿದರು. ಆದರೆ ಸರ್ಕಾರ ಕಿತ್ತೂರುರಾಣಿ ಚನ್ನಮ್ಮ ಜಯಂತಿ ಹೊರತುಪಡಿಸಿ ಉಳಿದ ಜಯಂತಿಗೆ ಹಣ ಬಿಡುಗಡೆ ಮಾಡಿಲ್ಲ ಎಂದು ತಹಸೀಲ್ದಾರ್ ಮೋಹನಕುಮಾರ್ ಸಭೆ ಗಮನಕ್ಕೆ ತಂದರು.

ಮೆರವಣಿಗೆಗೆ ಅವಕಾಶ ನೀಡಬೇಕೆಂಬ ಕರವೇ ಅಧ್ಯಕ್ಷ ಚಂದ್ರಶೇಖರ್ ಅವರ ಮನವಿಗೆ ಪ್ರತಿಕ್ರಿಯಿಸಿದ ಶಾಸಕರು, ಸರ್ಕಾರದ ಸೂಚನೆಯಂತೆ ಆಚರಿಸಲಾಗುವುದು. ಖಾಸಗಿಯಾಗಿ ನೀಡುವ ಮಾಡಿಕೊಳ್ಳುವುದಿದ್ದರೆ ಮಾಡಿಕೊಳ್ಳಿ ಎಂದು ತಿಳಿಸಿದರು. ವಯುಕ್ತಿಕವಾಗಿ ವೆಚ್ಚಭರಿಸಿಕೊಂಡು ಮೆರವಣಿಗೆ ನಡೆಸಲಾಗುವುದು ಎಂದು ಚಂದ್ರಶೇಖರ್ ಸ್ಪಷ್ಟಪಡಿಸಿದರು. ಪೊಲೀಸರು ಅವಕಾಶ ನೀಡಿದರೆ ಮಾಡಿ ಎಂದು ಶಾಸಕರು ಹೇಳಿದರು.

ಸನ್ಮಾನಿತರನ್ನು ಗೌರವಯುತವಾಗಿ ಸನ್ಮಾನಿಸುವಂತೆ ಕಸಾಪ ಮಾಜಿ ಗೌ.ಕಾರ್ಯದರ್ಶಿ ಹಾಲಪ್ಪ ಸಲಹೆ ನೀಡಿದರು. ಬಸವೇಶ್ವರ ಜಯಂತಿ ಆಚರಿಸಿಲ್ಲ, ಕೆಲವೊಂದು ಆಚರಿಸುವುದು ಕೆಲವೊಂದಕ್ಕೆ ಕೊರೊನಾ ನಿಯಮ ಹೇಳುವುದು ಸರಿಯಲ್ಲ ಎಂದು ಬಲ್ಲೇನಹಳ್ಳಿರವಿಕುಮಾರ್ ಆಕ್ಷೇಪಿಸಿದರು. ಪೂರ್ವಭಾವಿ ಸಭೆಗೆ ಅಧಿಕಾರಿಗಳ ಗೈರು ಇರುವ ಬಗ್ಗೆ ಕರವೇ ಅಧ್ಯಕ್ಷ ಚಂದ್ರಶೇಖರ್ ಹಾಗೂ ತೀರ್ಥಂಕರ್ ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆಎಸ್.ಲಿಂಗೇಶ್, ಪ್ರತಿಯೊಂದು ಜಯಂತಿ ಪೂರ್ವಭಾವಿ ಸಭೆಗೆ, ಕಾರ್ಯಕ್ರಮಕ್ಕೆ ಎಲ್ಲರೂ ಬರುವುದಾದರೆ ಉಳಿದ ಕೆಲಸ ಕಾರ್ಯಗಳು ಆಗಬೇಡವೆ? ನಾನಿದ್ದೇನಲ್ಲಾ, ಆಚರಣೆಗೆ ಅಧಿಕಾರಿಗಳಿಂದ ಸಹಕಾರ ಪಡೆದುಕೊಳ್ಳಲಾಗುವುದು ಎಂದು ಸಮಜಾಯಿಸಿ ಹೇಳಿದರು. ಹಾಗಾದರೆ ಸಭೆ ಏತಕ್ಕೆ ಮಾಡಬೇಕು, ಹಾಗೆ ನಿರ್ಧಾರ ಕೈಗೊಳ್ಳಿ ಎಂದು ಚಂದ್ರಶೇಖರ್, ತೀರ್ಥಂಕರ್ ಆಕ್ರೋಶ ವ್ಯಕ್ತಪಡಿಸಿದರು. 

ಶನಿವಾರ ಕಿತ್ತೂರುರಾಣಿ ಚನ್ನಮ್ಮ ಜಯಂತಿ ಆಚರಣೆ ಮಾಡಲಾಗುತ್ತಿದೆ. ಪ್ರತಿಯೊಬ್ಬ ಆದರ್ಶ ಪುರುಷರ ಜಯಂತಿಯನ್ನು ಪ್ರತ್ಯೇಕವಾಗಿ ಆಚರಿಸುವುದು, ಕನ್ನಡಪರ ಸಂಘಟನೆಗಳ ಪ್ರಮುಖರು ಹಾಗೂ ಜಾತಿ ಮುಖ್ಯಸ್ಥರಿಗೆ ಪೂರ್ವಭಾವಿ ಸಭೆಗೆ ಹಾಗೂ ಜಯಂತಿಗೆ ಆಹ್ವಾನ ನೀಡಲು ಸಭೆ ತೀರ್ಮಾನಿಸಿತು. ಪುರಸಭೆಯ ಅಧ್ಯಕ್ಷ ತಾ.ಪಂ.ಇಒ ರವಿಕುಮಾರ್, ಬಿಇಒ ಲೋಕೇಶ್, ಪುರಸಭ ಸಿಒ ಸುಜಯಕುಮಾರ್, ಉಪತಹಸೀಲ್ದಾರ್ ನಾಗರಾಜ್, ದೈಶಿ ಅಧೀಕ್ಷಕ ಪಾಲಾಕ್ಷಮೂರ್ತಿ ಇತರರು ಇದ್ದರು.



Post a Comment

Previous Post Next Post