ಅರಕಲಗೂಡು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಎ.ಟಿ. ರಾಮಸ್ವಾಮಿ ಅರಕಲಗೂಡು ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಇಂಗಿತ ಹೊರ ಹಾಕಿದ್ದಾರೆ.
ಕಳೆದ 2008 ಮತ್ತು 13ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎ.ಟಿ. ರಾಮಸ್ವಾಮಿ ಅವರು ಅಂದು ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ವಿರುದ್ದ ಪರಾಭವಗೊಂಡಿದ್ದರು. ಅಂದಿನ ಚುನಾವಣಾ ಫಲಿತಾಂಶದ ನಂತರ ನಡೆದ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಎ.ಟಿ. ರಾಮಸ್ವಾಮಿ ಅವರು ದೇವೇಗೌಡರ ಸಮ್ಮುಖದಲ್ಲಿ ವೈಯಕ್ತಿಕವಾಗಿ ಸೋಲೊಪ್ಪಿಕೊಂಡಿರೂ ಸಹ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಒತ್ತಡದ ಮೇರೆಗೆ ಸ್ಪರ್ಧಿಸಿದ್ದೆ. ಪಕ್ಷದೊಳಗಿನ ಭಿನ್ನರ ನಡೆಯಿಂದಾಗಿ ಸತತ ಎರಡು ಬಾರಿಯೂ ಸೋಲಬೇಕಾಯಿತು ಎಂದು ಆಕ್ರೋಶ ವ್ಯಕ್ತಪಡಿಸುವ ಮುಖೇನ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು. ಕಾರ್ಯಕರ್ತರ ಒತ್ತಡ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಮಾತಿಗೆ ಕಟ್ಟುಬಿದ್ದು 2018ರ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎ.ಟಿ. ರಾಮಸ್ವಾಮಿ ಅವರು ಪ್ರತಿಸ್ಪರ್ಧಿ ಮಾಜಿ ಸಚಿವ ಎ. ಮಂಜು ಅವರನ್ನು 10 ಸಾವಿರ ಮತಗಳ ಅಂತರದಿAದ ಸೋಲಿಸಿ ಗೆಲುವು ಸಾಧಿಸಿದರು.
ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಎ.ಟಿ. ರಾಮಸ್ವಾಮಿ ಅವರ ಸ್ಪರ್ಧೆ ಕೂಡ ನಿಗೂಢವಾಗಿತ್ತು. ಈ ಬಗ್ಗೆ ಹಲವು ಊಹಾಪೋಹಗಳು ಹುಟ್ಟಿಕೊಂಡು ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿತ್ತು. ಈ ನಡುವೆ ಶಾಸಕರು ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಕ್ಷೇತ್ರಕ್ಕೆ ನನ್ನ ಶ್ರಮ ಮತ್ತು ದುಡಿಮೆ ಮುಂದಿನ ದಿನಗಳಲ್ಲಿ ಗೆದ್ದೆ ಗೆಲುತ್ತದೆ ಎನುವ ಮೂಲಕ ಚುನಾವಣೆಗೆ ಸನ್ನದ್ಧರಾಗುವುದಾಗಿ ರಾಜಕೀಯ ವಿರೋಧಿಗಳಿಗೆ ಪರೋಕ್ಷವಾಗಿ ಸಂದೇಶ ರವಾನಿಸಿದರು.
ಕಳೆದ ಕೆಲವು ವರ್ಷಗಳಿಂದ ನಿಷ್ಠಾವಂತರಿಗೆ, ಪ್ರಾಮಾಣಿಕರಿಗೆ ಚುನಾವಣೆ ಕಷ್ಟಸಾಧ್ಯ ಎಂದು ಹೇಳುತ್ತಲೇ ರಾಮಸ್ವಾಮಿ ಅವರು ಕಳೆದ ಚುನಾವಣೆಯಲ್ಲಿಯೂ ಸ್ಪರ್ಧಿಸಿ ವಿಜಯ ಪತಾಕೆ ಹಾರಿಸಿದ್ದರು. ಮುಂಬರುವ 2023ನೇ ಚುನಾವಣೆಯಲ್ಲಿ ಅವರು ಸ್ಪರ್ಧಿಸುವುದಿಲ್ಲ, ಬದಲಾಗಿ ಆಪ್ತ ವಲಯದಲ್ಲಿ ಗುರುತ್ತಿಸಿಕೊಂಡಿರುವ ಸ್ನೇಹಿತರಿಗೆ ಜೆಡಿಎಸ್ ಪಕ್ಷದಿಂದ ಟಿಕೆಟ್ ಕೊಡಿಸಿ ಗೆಲ್ಲಿಸುತ್ತಾರೆ ಎಂಬುದಾಗಿ ರಾಜಕೀಯ ವಲಯದಲ್ಲಿ ಊಹಾಪೋಹಗಳ ಚರ್ಚೆ ನಡಯುತ್ತಿತ್ತು. ಆ ಊಹಾಪೋಹಗಳಿಗೆ ಇದೀಗ ತೆರೆ ಬಿದ್ದಿದೆ. ಸ್ವತಃ ಶಾಸಕರೇ ಅರಕಲಗೂಡು ಕ್ಷೇತ್ರಕ್ಕೆ ಶೈಕ್ಷಣಿಕ ಮತ್ತು ಆರೋಗ್ಯ ಹಾಗೂ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ವಿದ್ಯುತ್, ನೀರಾವರಿ ಸೇರಿದಂತೆ ಹಲವಾರು ಜನಪರ ಯೋಜನೆಗಳಿಗೆ ಕೋಟಿಗಟ್ಟಲೆ ಅನುದಾನವನ್ನು ತರುವ ಜತೆಗೆ ಕ್ಷೇತ್ರ ಜನತೆಯ ಕಷ್ಟಕ್ಕೆ ಸ್ಪಂದಿಸಿಸುತ್ತಿರುವೆ. ನಿರಂತರವಾಗಿ ಅನ್ಯಾಯ, ಅಕ್ರಮ, ಲೂಟಿ, ದರೋಡೆ, ಭ್ರಷ್ಟಾಚಾರ ವಿರೋಧಿ ಹೋರಾಟ ನಡೆಸಿಕೊಂಡು ರಾಜ್ಯದಲ್ಲಿ ನಿಷ್ಠಾವಂತ ಪ್ರಾಮಾಣಿಕವಾಗಿ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿರುವ ಏಕೈಕ ವ್ಯಕ್ತಿ ಎಂದರೇ ಈ ಕ್ಷೇತ್ರದ ಶಾಸಕ ಆದ ಎ.ಟಿ. ರಾಮಸ್ವಾಮಿ ಅವರೇ ಎನ್ನುವ ಮಟ್ಟಿಗೆ ಕ್ಷೇತ್ರ ಘನತೆಯನ್ನು ರಾಜ್ಯಕ್ಕೆ ಪರಿಚಯಸಿದ್ದು ಇಂತಹ ಶ್ರಮ ದುಡಿಮೆಗೆ ಮುಂದಿನಗಳಲ್ಲಿ ಜಯ ಒಲಿಯಲಿದೆ. ಕ್ಷೇತ್ರದ ಜನತೆ ಆಶೀರ್ವದಿಸುತ್ತಾರೆ ಎಂದು ತಾವೇ ಹೇಳುವ ಮೂಲಕ ಚುನಾವಣೆ ಸ್ಪರ್ಧೆಯ ಸುಳಿವು ನೀಡಿದರು.
ಇತ್ತ ಶಾಸಕ ಎ.ಟಿ. ರಾಮಸ್ವಾಮಿ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಚರ್ಚೆಗಳು ಸಾರ್ವಜನಿಕವಾಗಿ ಸದ್ದು ಮಾಡುತ್ತಿದ್ದು ರಾಜಕೀಯ ವಲಯದಲ್ಲಿ ಕುತೂಹಕ್ಕೆ ಕಾರಣವಾಗಿದೆ. ಆದರೆ, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುವ ಕುರಿತು ಶಾಸಕರು ಎಲ್ಲಿಯೂ ಬಹಿರಂಗಪಡಿಸಿಲ್ಲ.
Tags
ಅರಕಲಗೂಡು