ಪರರ ಪಾಲಾಗಿರುವ ರಾಜ್ಯದ ನೆಲ ವಾಪಸ್ಸಿಗೆ ಚಳುವಳಿ ಹುಟ್ಟುಹಾಕಬೇಕಿದೆ : ಶಾಸಕ ಕೆಎಸ್.ಲಿಂಗೇಶ್ ಅಭಿಮತ

 ಬೇಲೂರು : ಭಾಷಾವಾರು ಪ್ರಾಂತ್ಯ ವಿಂಗಡಣೆ ವೇಳೆ ರಾಜ್ಯದ ಹಲವು ಭೂ ಪ್ರದೇಶಗಳು ಇತರೆ ರಾಜ್ಯಗಳ ಪಾಲಾಗಿದ್ದು ಅವುಗಳನ್ನು ವಾಪಸ್ ಪಡೆಯಲು ಚಳುವಳಿ ಮಾರ್ಗ ಅನಿವಾರ್ಯವಾಗಿದೆ ಶಾಸಕ ಕೆಎಸ್.ಲಿಂಗೇಶ್ ಹೇಳಿದರು.



ಕನ್ನಡರಾಜ್ಯೋತ್ಸವದಲ್ಲಿ ರಾಜ್ಯಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ರವಾಸಿತಾಣವಾದ ಊಟಿ, ತಮಿಳುನಾಡಿನ ಹೊಸೂರು ಸೇರಿದಂತೆ ಬೆಳಗಾವಿಯ ಹಲವು ಭಾಗಗಳು ನಮ್ಮದಾಗಿದ್ದರೂ ಇತರೆ ರಾಜ್ಯದ ಹಿಡಿತದಲ್ಲಿದೆ. ಇವುಗಳ ವಾಪಸ್ ಪಡೆಯಲು ಚಳುವಳಿ ಹುಟ್ಟುಹಾಕಬೇಕಾಗಿದೆ. ಇಂದು ಕನ್ನಡಪರ ಸಂಘಟನೆಗಳಿಂದಾಗಿ ಭಾಷೆ, ನೆಲ, ಜಲ ಉಳಿಯಲು ಕಾರಣವಾಗಿದೆ ಎಂದರು.


ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ಹಲ್ಮಿಡಿ ಗ್ರಾಮಕ್ಕೆ ತೆರಳುವ ರಸ್ತೆ ವಿಸ್ತರಣೆ ಅಗತ್ಯವಿದ್ದು ಇದಕ್ಕಾಗಿ ೩ ಕೋಟಿ ರೂ. ಯೋಜನೆ ಮತ್ತು ಯಮಸಂದಿ ಹಳ್ಳದ ಬಳಿ ಚಕ್‌ಡ್ಯಾಂ ನಿರ್ಮಿಸಿ ಅಲ್ಲಿನ ನೀರನ್ನು ೬೩ ಕೆರೆಗಳಿಗೆ ನೀರು ಹರಿಸುವ ೮೦ ಕೋಟಿ ರೂ.ಯೋಜನೆ ಸಿದ್ದಗೊಂಡಿದೆ. ೩ ಕೋಟಿ ರೂ. ವೆಚ್ಚದಲ್ಲಿ ಬೇಲೂರು ಪಟ್ಟಣದಲ್ಲಿ ಶಾಂತಲಾ ನೃತ್ಯಶಾಲೆ ಆರಂಭಿಸಲಾಗುವುದು. ಮುಖ್ಯರಸ್ತೆ ಅಗಲೀಕರಣ, ಹೊಳೇಬೀದಿಗೆ ಹಾಸನ ರಸ್ತೆಯಿಂದ ಸಂಪರ್ಕ ಸಾಧಿಸುವ ಮತ್ತೊಂದು ರಸ್ತೆ ಹಾಗೂ ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.


ಪುರಸಭಾ ಅಧ್ಯಕ್ಷ ಸಿ.ಎನ್.ದಾನಿ ಮಾತನಾಡಿ, ನಾವು ಇತಿಹಾಸ ತಿಳಿದುಕೊಳ್ಳಬೇಕು. ಹಲವು ಮಹತ್ವಗಳನ್ನು ಒಳಗೊಂಡಿರುವ ರಾಜ್ಯದಲ್ಲಿ ಕನ್ನಡ ಭಾಷೆ ಉಳಿವಿಗೆ ಹೋರಾಟ ಮಾರ್ಗ ಅನಿವಾರ್ಯ ಎನ್ನುವಂತಾಗಿದೆ. ಕನ್ನಡಕ್ಕೆ ಶಾಸ್ತ್ರೀಯಸ್ಥಾನಮಾನ ದೊರೆತರೂ ಅದಕ್ಕೆ ಪೂರಕವಾದ ಸೌಲಭ್ಯಗಳು ದೊರೆತಿಲ್ಲ. ಕನ್ನಡ ಭಾಷೆಗೆ ಶತ್ರುಗಳೆಂದರೆ ಅದು ಕನ್ನಡಿಗರಾದ ನಾವುಗಳೇ ಆಗಿದ್ದೇವೆ. ಸಮ್ಮೇಳನಗಳಲ್ಲಿ ಹತ್ತಾರು ಕನ್ನಡ ಭಾಷೆ ಪರ ವಿಷಯ ನಿರ್ಣಯಗಳಾದರೂ ಅದಾವುದೂ ಅನುಷ್ಠಾನಕ್ಕೆ ಬರುವುದಿಲ್ಲ. ಆಂಗ್ಲಮಾಧ್ಯಮ ವ್ಯಾಮೋಹದಿಂದ ಪೋಷಕರು ಮಕ್ಕಳೊಂದಿಗೆ ಇಂಗ್ಲೀಷನಲ್ಲೇ ಮಾತನಾಡುವುದು ಹೆಚ್ಚುತ್ತಿದ್ದು ಇದು ಕನ್ನಡಕ್ಕೆ ಕುತ್ತು ತರುತ್ತಿದೆ. ಗಡಿ ಜಿಲ್ಲೆಗಳಲ್ಲಿ ಕನ್ನಡ ಭಾಷಾ ಕಲಿಕೆಗೆ ಭಾರಿ ಹಿನ್ನಡೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.


ತಹಸೀಲ್ದಾರ್ ಮೋಹನಕಮಾರ್ ರಾಷ್ಟçಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ಎಂಬುದು ಸಂಸ್ಕೃತಿಯ ಪರಂಪರೆ, ಮನುಷ್ಯನ ಬದುಕಿನ ಭಾಷೆ. ಬೆಂಗಳೂರಿನಲ್ಲಿ ಅನ್ಯ ಭಾಷೆಯ ಬಳಕೆ ಹೆಚ್ಚುತ್ತಿದೆ. ಕನ್ನಡ ಅನ್ನದ ಭಾಷೆಯಾಗಬೇಕು. ಪರಕೀಯರ ದಾಳಿ, ದಬ್ಬಾಳಿಕೆ ನಡುವೆಯೂ ಕನ್ನಡ ಉಳಿದಿದೆ ಎಂಬುದು ಹೆಮ್ಮೆಯ ವಿಚಾರ ಎಂದು ಸ್ಮರಿಸಿದರು.  ಎಪಿಎಂಸಿ ಅಧ್ಯಕ್ಷ ಸಿಹೆಚ್.ಮಹೇಶ್, ಹಳೇಬೀಡು ಬೇಲೂರು ಪ್ರಾಧಿಕಾರದ ಅಧ್ಯಕ್ಷ ಬಸವರಾಜು ಮಾತನಾಡಿದರು. 


ಇದೆ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಿ.ನಿರೀಕ್ಷಾ (ನೃತ್ಯ), ಲಾಲಿತ್ಯಕುಮಾರ್ (ಭರತನಾಟ್ಯ), ಬೇಲೂರು ನಾಗೇಶ್ (ಕಲೆ), ಇಂದಿರಮ್ಮ (ನಾಗರೀಕ ಸೇವೆ) ಡಾ.ಚಂದ್ರಮೌಳಿ ಹಾಗೂ ಅಂಬ್ಯುಲೆನ್ಸ್ ಚಂದ್ರು (ಸಮಾಜಸೇವೆ), ಪಲ್ಲವಿ (ಸಾಹಿತ್ಯ), ಬಸವೇಗೌಡ (ಕೃಷಿ ಪರಿಸರ), ರಘುನಾಥ್ (ಪತ್ರಿಕೋಧ್ಯಮ), ರಾಮುಯಮಸಂಧಿ (ಕ್ರೀಡೆ), ರಾಜು ಜಯಕರ್ನಾಟಕ (ಕನ್ನಡ ಸಂಘಟನೆ) ಇವರನ್ನು ಸನ್ಮಾನಿಸಲಾಯಿತು. ಇದರೊಂದಿಗೆ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪಿಯು ಹಾಗೂ ಎಸ್‌ಎಸ್‌ಎಲ್‌ಸಿಯ ೨೮ ವಿದ್ಯಾರ್ಥಿಳನ್ನು ಅಭಿನಂದಿಸಲಾಯಿತು ಪುರಸಭೆ ಉಪಾಧ್ಯಕ್ಷೆ ರತ್ನಮ್ಮಸತ್ಯನಾರಾಯಣ, ಹಳೇಬೀಡು ಬೇಲೂರು ಪ್ರಾಧಿಕಾರದ ಮಾಜಿ ಅಧ್ಯಕ್ಷ ಗೋವಿಂದಪ್ಪ, ಬಿಇಒ ಲೋಕೇಶ್, ತಾ.ಪಂ.ಇಒ ರವಿಕುಮಾರ್, ಸಿಪಿಐ ಶ್ರೀಕಾಂತ್, ಪುರಸಭೆ ಮುಖ್ಯಾಧಿಕಾರಿ ಸುಜಯ್‌ಕುಮಾರ್, ಪಿಎಸ್‌ಐ ಎಸ್.ಜಿ.ಪಾಟೀಲ್ ಇದ್ದರು. 

Post a Comment

Previous Post Next Post