ಬೇಲೂರು : ಇಂದು ಕನ್ನಡ ರಾಜ್ಯೋತ್ಸವ ಆಚರಣೆ ನಡೆಸಬೇಕೆಂದಿದ್ದರೂ ಪಟ್ಟಣದ ದಿವ್ಯ ಆಂಗ್ಲಮಾಧ್ಯಮ ಶಾಲೆಯಲ್ಲಿ ಹಿಂದಿ ಭಾಷಾ ಪರೀಕ್ಷೆ ನಡೆಸುತ್ತಿರುವುದನ್ನು ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶಾಲಾ ಮುಖ್ಯಸ್ಥರನ್ನು ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.
ಬೇಲೂರಿನ ದಿವ್ಯ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ರಾಜ್ಯೋತ್ಸವದಂದು ಹಿಂದಿ ಪರೀಕ್ಷೆ ಬರೆಸುತ್ತಿದ್ದದನ್ನು ಪತ್ತೆಹಚ್ಚಿದ ಕರವೇ ಕಾರ್ಯಕರ್ತರು ತರಾಟೆ ತೆಗೆದುಕೊಂಡರು |
ಮಾಹಿತಿ ತಿಳಿದ ರಕ್ಷಣಾ ವೇದಿಕೆ ಅಧ್ಯಕ್ಷ ಚಂದ್ರಶೇಖರ್ ಹಾಗೂ ಕಾರ್ಯಕರ್ತರು ಶಾಲೆಗೆ ಭೇಟಿ ನೀಡಿದ ಸಂದರ್ಭ ಹಿಂದಿ ಭಾಷಾ ಪರೀಕ್ಷೆ ನಡೆಸುತ್ತಿದ್ದದು ಕಂಡುಬಂತು. ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ಶಾಲಾ ಮುಖ್ಯಸ್ಥ ಗೌಡೇಗೌಡರನ್ನು ತರಾಟೆ ತೆಗೆದುಕೊಂಡರಲ್ಲದೆ ವಿಷಯವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೂ ತಂದರು ಹಾಗೂ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳನ್ನು ಹೊರಕಳುಹಿಸಿದರು.
ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ರಾಜ್ಯಾದ್ಯಂತ ರಾಜ್ಯೋತ್ಸವ ಆಚರಿಸುತ್ತಿರುವ ಈ ಸಂದರ್ಭ ದಿವ್ಯ ಆಂಗ್ಲಭಾಷಾ ಪರೀಕ್ಷೆ ನಡೆಸುತ್ತಿರುವುದು ಕನ್ನಡ ವಿರೋಧಿತನವಾಗಿದೆ. ಕನ್ನಡ ಭಾಷೆಗೆ ಅವಮಾನ ಮಾಡಿರುವ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಬಿಇಒ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಕರವೇ ಗೌರವಾಧ್ಯಕ್ಷ ಮಾಳೇಗೆರೆತಾರಾನಾಥ್, ನಾಡಹಬ್ಬ ಆಚರಣೆ ದಿನ ರಾಜ್ಯೋತ್ಸವ ಆಚರಿಸುವುದನ್ನು ಬಿಟ್ಟು ಹಿಂದಿಭಾಷಾ ಪರೀಕ್ಷೆ ನಡೆಸುತ್ತಿರುವುದು ಖಂಡನೀಯ, ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕಾರ್ಯದರ್ಶಿ ಖಾದರ್ ಮಾತನಾಡಿ, ಮೂರು ಕೊಠಡಿಯಲ್ಲಿ ಪರೀಕ್ಷೆ ಮಾಡಲಾಗುತ್ತಿದೆ. ಅಧಿಕಾರಿಗಳ ಗಮನಕ್ಕೆ ಬಂದಿದೆಯೊ ಇಲ್ಲವೋ ತಿಳಿದಿಲ್ಲ. ಶಾಲಾ ಮುಖ್ಯಸ್ಥರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ದೂರು ಬಂದ ಹಿನ್ನಲೆಯಲ್ಲಿ ದಿವ್ಯಾ ಆಂಗ್ಲಮಾಧ್ಯಮ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಮಾತನಾಡಿ, ಕನ್ನಡ ರಾಜ್ಯೋತ್ಸವ ದಿನಾಚರಣೆ ಮಾಡಲು ಸೂಚಿಸಿದ್ದೆವು. ಆದರೆ ಶಾಲೆಯಲ್ಲಿ ಹಿಂದಿ ಭಾಷಾ ಪರೀಕ್ಷೆ ನಡೆಸಲಾಗುತ್ತಿದೆ. ನಾಳೆ ಮತ್ತೊಬ್ಬ ಅಧಿಕಾರಿಯನ್ನು ಶಾಲೆಗೆ ಕಳುಹಿಸಿ ಮಾಹಿತಿ ಪಡೆದು ನಂತರ ನೊಟೀಸ್ ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭ ಚಂದ್ರೇಗೌಡ, ಹನೀಫ್, ಮೋಹನ್, ಪ್ರಸನ್ನ, ಸ್ವಾಮಿ, ಸಂದೀಪ್, ಅಪ್ಪು ಇತರರು ಇದ್ದರು.