ಬೇಲೂರು : ಇಲ್ಲಿನ ಶ್ರೀಚನ್ನಕೇಶವಸ್ವಾಮಿ ದೇಗುದಲ್ಲಿ ಗೋಪೂಜೆಯನ್ನು ನೆರೆವೇರಿಸಲಾಯಿತು.
ಸಂಜೆ ೬ ಗಂಟೆಗೆ ಮಂಗಳವಾಧ್ಯದೊAದಿಗೆ ಹೆಣೆದ ಮರದಲ್ಲಿ ಅಕ್ಕಿ, ಬೆಲ್ಲ, ಬಾಳೆಹಣ್ಣು ಹಾಗೂ ಪೂಜಾಸಾಮಾಗ್ರಿಗಳನ್ನು ತಂದ ಅರ್ಚಕರು ಗರುಡಧ್ವಜದ ಬಳಿ ಹಸು ಹಾಗೂ ಕರುವಿಗೆ ಪೂಜೆ ಸಲ್ಲಿಸಿದರು. ಅರ್ಚಕರ ಪೂಜೆ ನಂತರ ಶಾಸಕ ಕೆಎಸ್.ಲಿಂಗೇಶ್ ಪೂಜಿಸಿದರು.
ಬೇಲೂರಿನ ಶ್ರೀಚನ್ನಕೇಶವಸ್ವಾಮಿ ದೇವಾಲಯದಲ್ಲಿ ಗೋಪೂಜೆ ನೆರವೇರಿಸಲಾಯಿತು |
ಈ ಸಂದರ್ಭ ಮಾತನಾಡಿದ ಶಾಸಕ ಕೆಎಸ್.ಲಿಂಗೇಶ್, ನಮ್ಮ ಭಾರತ ದೇಶದಲ್ಲಿ ಪುರಾತನ ಕಾಲದಿಂದಲೂ ಗೋಮಾತೆಗೆ ವಿಶೇಷ ಸ್ಥಾನಮಾನವಿದೆ. ತ್ರೇತಾಯುಗ, ದ್ವಾಪರಯುಗ, ಕಲಿಯುಗ ಈ ಎಲ್ಲಾ ಯುಗದಲ್ಲಿಯೂ ಗೋವುಗಳಿಗೆ ವಿಶೇಷವಾದ ಸ್ಥಾನಮಾನವನ್ನು ನೀಡಲಾಗಿದೆ. ಈ ದೇಶದ ಸಂಸ್ಕೃತಿಯಲ್ಲಿ ಗೋಪೂಜೆ ಹಾಸುಹೊಕ್ಕಿದೆ. ಮನೆಗಳಲ್ಲಿ ಬಲಿಪಾಢ್ಯಮಿಯಾದ ಇಂದು ಗೋವುಗಳನ್ನು ಪೂಜಿಸುತ್ತಾರೆ. ಸರ್ಕಾರದ ಆದೇಶ ಎಂದು ಗೋಪೂಜೆ ಮಾಡದೆ ಮನಃಪೂರ್ವಕವಾಗಿ ಮಾಡಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ಆ ಪಾರ್ಟಿ ಈ ಪಾರ್ಟಿ ಎಂಬುದು ಬೇಕಾಗಿಲ್ಲ, ಇದು ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಯಾಗಿದೆ. ಪಕ್ಷ ಬಂದಾಗ ರಾಜಕೀಯ ಮಾಡಿಕೊಳ್ಳೋಣವಂತೆ, ಇದು ಬಿಜೆಪಿ ಅಜೆಂಡಾ ಅನ್ನುವುದರಲ್ಲಿ ಅರ್ಥವಿಲ್ಲ. ಇದು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿ ಆಚರಿಸಲಾಗುತ್ತಿದೆ. ಇದೀಗ ಸರ್ಕಾರ ಅಧಿಕೃತವಾಗಿ ಗೋಪೂಜೆಗೆ ಆದೇಶ ಮಾಡಿದ್ದರೂ ಪುರಾತನ ಕಾಲದಿಂದಲೂ ಗ್ರಾಮೀಣ ಪ್ರದೇಶದ ದೇಗುಲಗಳಲ್ಲಿ ಗೋಪೂಜೆ ನಡೆಸಲಾಗುತ್ತಿದೆ. ಮನೆಗಳಲ್ಲೂ ನಾವುಗಳು ಪೂಜಿಸುತ್ತೇವೆ, ಇದು ನಮ್ಮ ಕರ್ತವ್ಯವೂ ಆಗಿದ್ದು ನೆರವೇರಿಸುತ್ತಿದ್ದೇವೆ ಎಂದು ವರದಿಗಾರರ ಪ್ರಶ್ನೆಗೆ ಸ್ಪಷ್ಟಪಡಿಸಿದರು.
ತಹಸೀಲ್ದಾರ್ ಯು.ಎಂ.ಮೋಹನಕಮಾರ್ ಮಾತನಾಡಿ, ರಾಜ್ಯದ ಎ.ಬಿ.ಸಿ. ದೇಗುಲದಲ್ಲಿ ಗೋಪೂಜೆ ಮಾಡಲು ಸರ್ಕಾರದ ನಿರ್ದೇಶನದಂತೆ ತಾಲ್ಲೂಕಿನಲ್ಲಿರುವ ೧೨೦೦ ದೇಗುಲದಲ್ಲಿ ಗೋಪೂಜೆ ನೆರವೇರಿಸಲಾಗುತ್ತಿದೆ. ಇದು ಸಂತೋಷವಾಗುತ್ತಿದ್ದು ಇದು ಗೋವು ಸಂತತಿ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಹೇಳಿದರು. ದೇಗುಲದ ಕಾರ್ಯನಿರ್ವಾಹಣಾಧಿಕಾರಿ ವಿದ್ಯುಲ್ಲತಾ ಮಾತನಾಡಿ, ಗೋದೋಳಿ ಲಗ್ನದಲ್ಲಿ ಗೋಪೂಜೆ ಮಾಡಲಾಗುತ್ತಿದೆ. ನಮ್ಮ ಸಂಸ್ಕೃತಿಗೆ ಪೂರಕವಾಗಿ ಗೋಪೂಜೆ ನೆರವೇರಿಸಲಾಗುತ್ತಿದೆ ಎಂದರು.
ಪೂಜಾಕಾರ್ಯವನ್ನು ಆಗಮಿಕ ಅರ್ಚಕರಾದ ಕೃಷ್ಣಸ್ವಾಮಿಭಟ್ಟರ್ ಹಾಗೂ ಶ್ರೀನಿವಾಸಭಟ್ಟರ್ ಹಾಗೂ ಅರ್ಚಕರ ತಂಡ ನೆರವೇರಿಸಿತು. ಹಸು, ಕರುವನ್ನು ಕರೆತಂದಿದ್ದ ಹಳೇಉತ್ಪಾತನಹಳ್ಳಿಯ ರಮೇಶ್ ತಂದಿದ್ದರು. ಶಾಸಕರು ಹಸು ಮತ್ತು ಕರುವಿಗೆ ಬಾಳೆಹಣ್ಣು ತಿನ್ನಿಸಿದರು. ಈ ಸಂದರ್ಭ ಉಪ ತಹಸೀಲ್ದಾರ್ ನಾಗರಾಜ್, ಪುರಸಭ ಸದಸ್ಯರಾದ ಬಿ.ಗಿರೀಶ್, ಶ್ರೀನಿವಾಸ್, ಪ್ರಭಾಕರ್, ಮಾಜಿ ಉಪಾಧ್ಯಕ್ಷೆ ಜಯಶ್ರೀ, ಪ್ರಮುಖರಾದ ಸೌಮ್ಯಾ ಆನಂದ್ ಇತರರು ಇದ್ದರು.