21 ವರ್ಷದ ಬಳಿಕ ಭಾರತಕ್ಕೆ ವಿಶ್ವ ಸುಂದರಿ ಕಿರೀಟ

 ಬರೋಬ್ಬರಿ 21 ವರ್ಷಗಳ ಬಳಿಕ ಭಾರತಕ್ಕೆ ವಿಶ್ವ ಸುಂದರಿ (ಮಿಸ್ ಯೂನಿವರ್ಸ್) ಕಿರೀಟ ಧಕ್ಕಿದೆ. 21 ವರ್ಷ ವಯಸ್ಸಿನ ಮಾಡೆಲ್ ಹರ್ನಾಜ್ ಸಂಧು ಮಿಸ್ ಯೂನಿವರ್ಸ್‌ ಕಿರೀಟ ಧಾರಣೆ ಮಾಡಿದ್ದಾರೆ.


ಇಸ್ರೆಲ್‌ನಲ್ಲಿ 2021ರ ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಭಾರತದ ಹರ್ನಾಜ್ ಸಂಧು ಮಿಸ್ ಯೂನಿವರ್ಸ್ ಆಗಿ ಆಯ್ಕೆ ಆಗಿದ್ದಾರೆ. 21 ವರ್ಷದ ಹಿಂದೆ ಭಾರತದ ಲಾರಾ ದತ್ತ ಮಿಸ್ ಯೂನಿವರ್ಸ್ ಆಗಿ ಆಯ್ಕೆ ಆಗಿದ್ದರು. ಅದಾದ ಬಳಿಕ ಭಾರತದ ಇನ್ನಾವ ಚೆಲುವೆಗೂ ಮಿಸ್ ಯೂನಿವರ್ಸ್ ಕಿರೀಟ ಧಕ್ಕಿರಲಿಲ್ಲ.

ನಿನ್ನೆ (ಡಿಸೆಂಬರ್ 12) ರಾತ್ರಿ ಇಸ್ರೇಲ್‌ನ ಇಲಾಟ್‌ನಲ್ಲಿ ನಡೆದ ವರ್ಣರಂಜಿತ ಫೈನಲ್ ಸ್ಪರ್ಧೆಯಲ್ಲಿ ಹರ್ನಾಜ್ ಸಂಧು ಮಿಸ್ ಯೂನಿವರ್ಸ್‌ ಆಗಿ ಆಯ್ಕೆ ಆಗಿದ್ದಾರೆ. 2020 ರ ಮಿಸ್ ಯೂನಿವರ್ಸ್ ಆಂಡ್ರಿಯಾ ಮೇಜಾ ಮಿಸ್ ಯೂನಿವರ್ಸ್ ಕಿರೀಟವನ್ನು ಹರ್ನಾಜ್‌ಗೆ ತೊಡಿಸಿದರು. ಈ ಸಮಯದಲ್ಲಿ ಹರ್ನಾಜ್‌ ಭಾವೋದ್ವೇಗಕ್ಕೆ ಒಳಗಾದರು.

ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಈ ಬಾರಿ 79 ಸುಂದರಿಯರು ಪಾಲ್ಗೊಂಡಿದ್ದರು. ಅವರಲ್ಲಿ ಮೊದಲಿಗರಾಗಿ ಹರ್ನಾಜ್ ಆಯ್ಕೆಯಾದರು. ಹರ್ನಾಜ್ ವಿಶ್ವದ 70ನೇ ಮಿಸ್ ಯೂನಿವರ್ಸ್. ಹರ್ನಾಜ್‌ ನಂತರದ ಸ್ಥಾನವನ್ನು ಪೆರುಗ್ವೆಯ ನಾಡಿಯಾ ಫೆರೆರಿಯಾ ಪಡೆದರೆ ಮೂರನೇ ಸ್ಥಾನವನ್ನು ದಕ್ಷಿಣ ಆಫ್ರಿಕಾದ ಲಲೇಲಾ ಸ್ವಾನೆ ಪಡೆದುಕೊಂಡರು.

ಮಿಸ್ ಯೂನಿವರ್ಸ್ ಕಿರೀಟ ಗೆದ್ದ ಕೂಡಲೇ ಹೇಳಿಕೆ ಬಿಡುಗಡೆ ಮಾಡಿರುವ ಹರ್ನಾಜ್, ''ನಾನು ಆ ದೇವರಿಗೆ, ನನ್ನ ಪೋಷಕರಿಗೆ ಹಾಗೂ ಮಿಸ್ ಇಂಡಿಯಾ ಸಂಸ್ಥೆಗೆ ಧನ್ಯವಾದ ಹೇಳುತ್ತೇನೆ. ಇವರುಗಳು ನನಗೆ ಸರಿಯಾದ ಮಾರ್ಗದರ್ಶನ ಮಾಡಿದರು. ಮತ್ತು ನನಗಾಗಿ ಪ್ರಾರ್ಥಿಸಿದ ನನಗೆ ಬೆಂಬಲ ಸೂಚಿಸಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಹೇಳುತ್ತೇನೆ. 21 ವರ್ಷಗಳ ನಂತರ ಈ ಕಿರೀಟವನ್ನು ಭಾರತಕ್ಕೆ ತರುತ್ತಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ'' ಎಂದಿದ್ದಾರೆ.

ಹರ್ನಾಜ್‌, ಭಾರತದ ಚಂಢಿಘಡದವರು. ಶಾಲೆ, ಕಾಲೇಜು ಅಲ್ಲಿಯೇ ಮುಗಿಸಿದ ಹರ್ನಾಜ್ ಮಾಡೆಲಿಂಗ್ ಮಾಡುತ್ತಿದ್ದಾರೆ ಜೊತೆಗೆ ಕೆಲವು ಪಂಜಾಬಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಹಿಂದೆಯೂ ಹಲವು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದಿದ್ದಾರೆ ಹರ್ನಾಜ್. 'ಭಾಯ್ ಜಿ ಕುಟ್ಟಾಂಜಿ', 'ಯಾರಾ ದಿಯಾ ಪೂ ಬಾರಾ' ಹರ್ನಾಜ್ ನಟಿಸಿರುವ ಪಂಜಾಬಿ ಸಿನಿಮಾಗಳು.

Post a Comment

Previous Post Next Post