ಹಾಸನ : ಮಾಣಿಕ್ಯ ಪ್ರಕಾಶನ(ರಿ.) ಹಾಸನ ವತಿಯಿಂದ ಉದಯೋನ್ಮುಖ ಸಾಹಿತಿ ಡಾ. ಶಾಲಿನಿ ವಿ.ಎಲ್. ರವರ "ಹಸಿರು ಗಾಜಿನ ಬಳೆ" ಕಾದಂಬರಿ, "ಅ" ಕಥಾ ಸಂಕಲನ, "ಬಿಳಿ ಹಾಳೆ ಬಿಳಿ ಕೋಟು" ಕವನ ಸಂಕಲನ ಸೇರಿದಂತೆ ಮೂರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಇದೇ ಡಿಸೆಂಬರ್ ೨೧ ಮಂಗಳವಾರ ಸಂಜೆ ೦೫ ಗಂಟೆಗೆ ನಗರದ ಸಂಸ್ಕೃತ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಾಶಕಿ ದೀಪಾ ಉಪ್ಪಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.), ಬೆಂಗಳೂರು ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್. ಉಪ್ಪಾರ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ಕೆ.ಗಂಗಾಧರ್ ರವರು ಉದ್ಘಾಟಿಸಲಿದ್ದಾರೆ. ಮೈಸೂರಿನ ಹಿರಿಯ ಲೇಖಕಿ ವೆಂ. ವನಜರವರು ಅಧ್ಯಕ್ಷತೆ ವಹಿಸಲಿದ್ದು, ಹಾಸನದ ಖ್ಯಾತ ವೈದ್ಯರೂ ಹಾಗೂ ಲೇಖಕಿಯಾದ ಡಾ. ಎ. ಸಾವಿತ್ರಿಯವರು ಕೃತಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. "ಹಸಿರು ಗಾಜಿನ ಬಳೆ" ಕಾದಂಬರಿ ಕುರಿತು ಸಾಹಿತಿ ನಾಗರಾಜ್ ಹೆತ್ತೂರು ಹಾಗೂ "ಅ" ಕಥಾ ಸಂಕಲನ ಕುರಿತು ಸಾಹಿತಿ ಬಿ.ಎಂ. ಭಾರತಿ ಹಾದಿಗೆ ಮತ್ತು "ಬಿಳಿ ಹಾಳೆ ಬಿಳಿ ಕೋಟು" ಕವನ ಸಂಕಲನ ಕುರಿತು ಸಾಹಿತಿ ಚಿನ್ನೇನಹಳ್ಳಿ ಸ್ವಾಮಿಯವರು ಮಾತನಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಲೇಖಕಿ ಡಾ. ಶಾಲಿನಿ ವಿ.ಎಲ್, ಸವಿತ ದಿನೇಶ್, ವಾಸು ಸಮುದ್ರವಳ್ಳಿ, ನಿರಂಜನ್ ಎ.ಸಿ.ಬೇಲೂರು ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.