ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಯಗಟಿ ಗ್ರಾಮಸ್ಥರ ಪ್ರತಿಭಟನೆ
ಹಾಸನ: ಕಳೆದ 30 ವರ್ಷಗಳಿಂದ ಸರ್ಕಾರಿ ಸ್ವಾಧೀನದಲ್ಲಿರುವ ಜಮೀನಿನಲ್ಲಿ ವಾಸಿಸುತ್ತಿರುವ ಸುಮಾರು 40 ಕುಟುಂಬಗಳನ್ನು ಅರಣ್ಯ ಇಲಾಖೆಯವರು ಒಕ್ಕಲೆಬ್ಬಿಸಲು ಹುನ್ನಾರ ನಡೆಸಿದ್ದು ರಕ್ಷಣೆ ನೀಡುವಂತೆ ಆಗ್ರಹಿಸಿ ಯಗಟಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಅರಕಲಗೂಡು ತಾಲ್ಲೂಕಿನ ಯಗಟಿ ಗ್ರಾಮದಲ್ಲಿ ಸುಮಾರು 40 ಎಸ್ಸಿ, ಎಸ್ಟಿ ಕುಟುಂಬಗಳು ಗ್ರಾಮದ ಸರ್ಕಾರಿ ಖರಾಬು ಜಮೀನಿನಲ್ಲಿ ಕಳೆದ 30 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದೇವೆ. ಜೀವನ ನಿರ್ವಹಣೆಗಾಗಿ ಇದೇ ಜಮೀನನ್ನು ಅವಲಂಬಿಸಿದ್ದೇವೆ. ಜಮೀನು ಮಂಜೂರಾತಿಗಾಗಿ 1989ರಲ್ಲಿ ಫಾರಂ ನಂಬರ್ 53 ಹಾಗೂ 2018ರಲ್ಲಿ ಫಾರಂ ನಂಬರ್ 57 ರಲ್ಲಿ ಅರ್ಜಿ ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ್ದೇವೆ.
ಆದರೆ ಇತ್ತೀಚೆಗೆ ಅರಣ್ಯ ಇಲಾಖೆಯವರು ಏಕಾಏಕಿ ಬಂದು ನಾವು ಸ್ವಾಧೀನದಲ್ಲಿರುವ ಜಾಗವು ನಮಗೆ ಸೇರಿದ್ದು ಇನ್ನು ಮುಂದೆ ವ್ಯವಸಾಯ ಮಾಡದಂತೆ ತಾಕೀತು ಮಾಡಿ ಜಮೀನಿನ ಸುತ್ತ ಕಾಲುವೆ ತೆಗೆಯಲು ಪ್ರಯತ್ನಿಸಿದ್ದಾರೆ. ಈ ಬಗ್ಗೆ ನಾವು ಅರಣ್ಯ ಇಲಾಖೆಯವರನ್ನು ಪ್ರಶ್ನಿಸಿದರೆ ಉಡಾಫೆಯಿಂದ ವರ್ತಿಸುತ್ತಾರೆ ಎಂದು ಆರೋಪಿಸಿದರು.
ಈ ಸಂಬಂದ ಅರಕಲಗೂಡು ತಹಸೀಲ್ದಾರ್ ಗೆ ನಾವು ದೂರು ನೀಡಿದ್ದು ಅವರು ನಾನು ಬಂದು ಸ್ಥಳ ಪರಿಶೀಲನೆ ನಡೆಸುವವರೆಗೂ ಯಾವುದೇ ಕೆಲಸ ಮಾಡದಂತೆ ಅರಣ್ಯ ಇಲಾಖೆಯವರಿಗೆ ಸೂಚಿಸಿದ್ದಾರೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ದೌರ್ಜನ್ಯವನ್ನು ಮುಂದುವರೆಸಿದ್ದಾರೆ ಎಂದು ದೂರಿದರು.
ಕೂಡಲೇ ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡು ಅರಣ್ಯ ಅಧಿಕಾರಿಗಳ ದೌರ್ಜನ್ಯ ತಡೆಯಲು ಮುಂದಾಗಬೇಕು ಹಾಗೂ ಹಲವು ವರ್ಷಗಳಿಂದ ಸ್ವಾಧೀನದಲ್ಲಿರುವ ನಮಗೆ ಜಮೀನು ಮಂಜೂರು ಮಾಡಿಕೊಡಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾಧ್ಯಕ್ಷ ಹಾಗೂ ವಕೀಲ ಬಿ.ಆರ್. ವಸಂತ್ ಕುಮಾರ್, ಅಮರನಾಥ್, ಶಿವಣ್ಣ, ದಿನೇಶ್, ಧರ್ಮ, ರೇವಣ್ಞ ಮತ್ತಿತರರು ಇದ್ದರು.
Tags
ಹಾಸನ