ನಾಗರಾಜ್ ಮಗಳು ಹೇಮಶ್ರೀ ಅ.30ರಂದು ಸಾವನ್ನಪ್ಪಿದ್ದಳು. ಇಂದು ತಿಂಗಳ ತಿಥಿ ಕಾರ್ಯ ಮಾಡಲು ನಾಗರಾಜ್ ಬಂದಿದ್ದರು. ಆದರೆ ಅಳಿಯ ಪ್ರವೀಣ್ ಹಾಗೂ ಕುಟುಂಬಸ್ಥರು ಮನೆಗೆ ಬೀಗ ಹಾಕಿ ಹೋಗಿದ್ದರು. ಬೆಳಗ್ಗೆಯಿಂದ ಕಾದು ನಂತರ ಮೊಬೈಲ್‌ನಲ್ಲಿ ವೀಡಿಯೋ ಮಾಡಿ ನಾಗರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನನ್ನ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ನನ್ನ ಮಗಳು ಸಾವನ್ನಪ್ಪಿದ್ದಾಳೆ. ನನ್ನ ಮಗಳ ಸಾವಿಗೆ ಪತಿ ಪ್ರವೀಣ್, ಅತ್ತೆ ಭದ್ರಮ್ಮ ಕಾರಣ. ನನಗೆ, ನನ್ನ ಮಗಳಿಗೆ ಆದ ಪರಿಸ್ಥಿತಿ ಇನ್ಯಾರಿಗೂ ಆಗಬಾರದು. ಸಾಯುವವರೆಗೂ ಅವರನ್ನು ಜೈಲಿಗೆ ಹಾಕಿ ಎಂದು ಮೊಬೈಲ್ ನಲ್ಲಿ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದೂವರೆ ವರ್ಷದ ಹಿಂದೆ ಮಾಳೆಗೆರೆ ಗ್ರಾಮದ ಪ್ರವೀಣ್‌ಗೆ ಹೇಮಶ್ರೀಯನ್ನು ಮದುವೆ ಮಾಡಿ ಕೊಡಲಾಗಿತ್ತು. ಪ್ರವೀಣ್ ಆಂಧ್ರಪ್ರದೇಶದಲ್ಲಿ ಬೇಕರಿ ಇಟ್ಟುಕೊಂಡಿದ್ದರು. ಮದುವೆ ಯಾದಾಗಿನಿಂದಲೂ ಅತ್ತೆ ಭದ್ರಮ್ಮ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಇದರಿಂದಾಗಿ 1.50 ಲಕ್ಷ ನಗದು, 40 ಗ್ರಾಂ ಚಿನ್ನವನ್ನು ವರದಕ್ಷಿಣೆಯಾಗಿ ನೀಡಿದ್ದರು. ಗರ್ಭಿಣಿ ವೇ¼ ಹೇಮಶ್ರೀಯನ್ನು ಪ್ರವೀಣ್ ತವರು ಮನೆಗೆ ಕಳುಹಿಸಿದ್ದರು. ಅ.29ರಂದು ಹೊಟ್ಟೆಯಲ್ಲಿಯೆ ಮಗು ಸಾವನ್ನಪ್ಪಿತ್ತು. ಇದಾದ ಎರಡು ದಿನಗಳ ಬಳಿಕ ಹೇಮಶ್ರೀ ಸಾವನ್ನಪ್ಪಿದ್ದರು. ಗಂಡನ ಊರು ಮಾಳೆಗೆರೆಯಲ್ಲಿ ಹೇಮಶ್ರೀ ಅಂತ್ಯಕ್ರಿಯೆ ನಡೆಸಲಾಗಿತ್ತು.
11 ದಿನದ ತಿಥಿ ಕಾರ್ಯದ ದಿನ ಗ್ರಾಮದ ಹಿರಿಯರು ಪಂಚಾಯ್ತಿ ನಡೆಸಿದ್ದರು. ವರದಕ್ಷಿಣೆಯಾಗಿ ನೀಡಿದ್ದ ಹಣ, ಒಡವೆಯನ್ನು ತಿಂಗಳ ತಿಥಿಯಂದು ವಾಪಸ್ ನೀಡುವಂತೆ ತೀರ್ಮಾನ ಮಾಡಿದ್ದರು. ಇದಕ್ಕೆ ಪ್ರವೀಣ್ ಹಾಗೂ ತಾಯಿ ಭದ್ರಮ್ಮ ಒಪ್ಪಿದ್ದರು. ಈ ಹಿನ್ನೆಲೆಯಲ್ಲಿ ನಾಗರಾಜ್ ಮಗಳ ಮನೆಗೆ ಹೂವು, ತಿಥಿ ಕಾರ್ಯ ಮಾಡಲು ಎಲ್ಲಾ ಸಾಮಗ್ರಿಗಳನ್ನು ತಂದಿದ್ದರು. ಆದರೆ ಪ್ರವೀಣ್ ಮನೆಗೆ ಬೀಗ ಹಾಕಿ ತೆರಳಿದ್ದರು. ಮಧ್ಯಾಹ್ನದ ವರೆಗೂ ಕಾದು ಮನೆಯ ಬಾಗಿಲು ಮುಂದೆ ಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದರು. ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.