ಬೇಲೂರು :
ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಮುಂಭಾಗದ ಮೈದಾನದಲ್ಲಿ ನಡೆಯುತ್ತಿದ್ದ ವಸ್ತುಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ.
ಬೇಲೂರಿನಲ್ಲಿ ನಡೆಯುತ್ತಿದ್ದ ವಸ್ತುಪ್ರದರ್ಶನದಲ್ಲಿ ಜನಸಾಗರ ಹಾಗೂ ಸ್ಥಗಿತದ ನಂತರದ ಚಿತ್ರಣ
ಕೋವಿಡ್ ೩ನೇ ಅಲೆ ಮಿತಿಮೀರಿ ಏರಿಕೆ ಆಗುತ್ತಿರುವ ನಡುವೆಯೂ ಸಾವಿರಾರು ಜನರನ್ನು ಒಳಗೊಂಡಂತ ವಸ್ತುಪ್ರದರ್ಶನ ವ್ಯವಸ್ಥೆ ಬಗ್ಗೆ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡರ ಬಣದ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಕೋವಿಡ್ ಏರಿಕೆ ಹಿನ್ನಲೆಯಲ್ಲಿ ಸಾವಿರಾರು ಜನರು ಒಂದುಕಡೆ ಸೇರುವ ವಸ್ತುಪ್ರದರ್ಶನ ಸ್ಥಗಿತಕ್ಕೆ ಜಿಲ್ಲಾಧಿಕಾರಿಗಳು ಸಹ ಸೂಚನೆ ನಿಡಿದ್ದರು. ಅದರಂತೆ ಇಲ್ಲಿನ ಪುರಸಭೆಯ ಆಡಳಿತ ಹಾಗೂ ಮುಖ್ಯಾಧಿಕಾರಿ ಸುಜಯಕುಮಾರ್ ವಸ್ತುಪ್ರದರ್ಶನ ಸ್ಥಗಿತಕ್ಕೆ ನಿರ್ಧಾರ ಕೈಗೊಂಡಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪುರಸಭೆಯ ಮುಖ್ಯಾಧಿಕಾರಿ ಸುಜಯಕುಮಾರ್, ಕೋವಿಡ್ ೩ ನೇ ಅಲೆ ದಿನನಿತ್ಯ ಏರಿಕೆ ಕಂಡುಬರುತ್ತಿದೆ. ಇಂದೂ ಸಹ ಬೇಲೂರಿನಲ್ಲಿ ೨೬ ಪ್ರಕರಣಗಳು ದಾಖಲಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರ ಹಿತದೃಷ್ಠಿಯಿಂದ ವಸ್ತುಪ್ರದರ್ಶನ ಸ್ಥಗಿತಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಪುರಸಭೆಯ ಅಧ್ಯಕ್ಷ ಸಿ.ಎನ್.ದಾನಿ, ಸಾರ್ವಜನಿಕರಿಗೆ ಮನರಂಜನೆ ದೊರೆಯಲಿ ಎಂಬ ಕಾರಣಕ್ಕೆ ವಸ್ತುಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಕೊರೊನಾ ೩ನೇ ಅಲೆ ದಿನನಿತ್ಯ ಏರುತ್ತಿದ್ದು ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳಿಂದ ಸೂಚನೆ ಬಂದ ಹಿನ್ನಲೆಯಲ್ಲಿ ವಸ್ತುಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಕರವೇ ಅಧ್ಯಕ್ಷ ಚಂದ್ರಶೇಖರ್, ಕೋವಿಡ್ ಏರಿಕೆ ಹಿನ್ನಲೆಯಲ್ಲಿ ಸಾರ್ವಜನಿಕರ ಹಿತದೃಷ್ಠಿಯಿಂದ ವಸ್ತುಪ್ರದರ್ಶನ ಸ್ಥಗಿತಕ್ಕೆ ಕರವೇ ಇಂದ ಆಗ್ರಹಿಸಲಾಗಿತ್ತು. ಪುರಸಭೆಯ ಆಡಳಿತ ಹಾಗೂ ಅಧಿಕಾರಿಗಳು ಸ್ಪಂಧಿಸಿದ್ದಾರೆ. ಈ ಕೆಲಸವನ್ನು ಅವರೇ ಮುಂಚೆಯೇ ಮಾಡಿದ್ದರೆ ನಾವು ಒತ್ತಾಯಿಸುವ ಅಗತ್ಯ ಬರುತ್ತಿರಲಿಲ್ಲ. ಆದರೂ ನಮ್ಮ ಮನವಿಗೆ ಸ್ಪಂಧಿಸಿದ್ದಾರೆಂದು ಪುರಸಭೆಯ ಆಡಳಿತ ಹಾಗೂ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.