ಇಬ್ಬರು ಆರೋಪಿಗಳ ಬಂಧನ: ೪.೫೦ ಲಕ್ಷರೂ. ಮೌಲ್ಯದ ಆಭರಣ ವಶ

 ಬೇಲೂರು : 

ದ್ವಿಚಕ್ರ ವಾಹನದಲ್ಲಿ ಬರುವಾಗ ಕುತ್ತಿಗೆ ಆಭರಣ ಯಲ್ಲಿದ್ದ ಚೈನನ್ನು ಅಪಹರಿಸಿದ್ದ ಇಬ್ಬರು ಆರೋಪಿಗಳನ್ನು ಹಳೇಬೀಡು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರು ನಗರದ ಉಪ್ಪಹಳ್ಳಿಯವರಾದ ಆರೋಪಿಗಳಿಂದ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ೪.೫೦ ಲಕ್ಷರೂ. ಬೆಲೆಬಾಳುವ ೧೧೧ ಗ್ರಾಂ ತೂಕದ ಚಿನ್ನದ ಸರ ಹಾಗೂ ಪಲ್ಸರ್ ಬೈಕೊಂದನ್ನು ವಶಕ್ಕೆ ಪಡೆಯಲಾಗಿದೆ ಎಂದು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀಕಾಂತ್ ತಿಳಿಸಿದ್ದಾರೆ.

ವಿವರ: ೨೦೨೧ ನವೆಂಬರ್ ೮ ರಂದು ಸಂಜೆ ಹಾರೋಹಳ್ಳಿ ಗ್ರಾಮದ ರಾಜೇಗೌಡ ಹಾಗೂ ಅವರ ಪತ್ನಿ ವೀರಮ್ಮ ಅವರು ಬೆಟ್ಟದಾಲೂರಿನಿಂದ ದ್ವಿಚಕ್ರ ವಾಹನದಲ್ಲಿ ಬರುವಾಗ ಹಾಸನ ರಸ್ತೆಯ ಆಂದಲೆ ಗಡಿಯ ಸಮೀಪ ಹಿಂಬದಿಯಿಂದ ಆಗಮಿಸಿದ ಆರೋಪಿಗಳು ವೀರಮ್ಮ ಅವರ ಕುತ್ತಿಗೆಯಲ್ಲಿದ್ದ ೪೨ ಗ್ರಾಂ ತೂಕದ ಚೈನನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೆ ಆರೋಪಿಗಳ ವಿರುದ್ಧ ಹಳೇಬೀಡು, ಅರೇಹಳ್ಳಿ ವ್ಯಾಪ್ತಿಯಲ್ಲಿಯೂ ಪ್ರಕರಣಗಳು ದಾಖಲಾಗಿದ್ದವು.

ಎಸ್‌ಪಿ ಶ್ರೀನಿವಾಸಗೌಡ, ಡಿವೈಎಸ್‌ಪಿ ಪಿ.ಅಶೋಕ್ ಮಾರ್ಗದರ್ಶನದಲ್ಲಿ ತಂಡ ರಚಿಸಿಕೊಂಡು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಪತ್ತೆಕಾರ್ಯದಲ್ಲಿ ವೃತ್ತ ನಿರೀಕ್ಷಕ ಶ್ರೀಕಾಂತ್, ಅರೇಹಳ್ಳಿ ಪಿಎಸ್‌ಐ ಸುರೇಶ್, ಹಳೇಬೀಡು ಪಿಎಸ್‌ಐ ದೇವರಾಜು, ಸಿಬ್ಬಂದಿಗಳಾದ ಜಮ್ಮದ್‌ಖಾನ್, ಪುನೀತ್, ಶಿವಕುಮಾರ್, ಖಾಸಿಂಸಾಬ್, ರಘು, ಹನುಮಂತ.ಹೆಚ್.ಸಿ., ಫೀರ್‌ಖಾನ್ ತೊಡಗಿದ್ದರು. ಎಸ್‌ಪಿ ಶ್ರೀನಿವಾಸಗೌಡ ಸಿಬ್ಬಂದಿಗಳನ್ನು ಶ್ಲಾಘಿಸಿದ್ದಾರೆ.



Post a Comment

Previous Post Next Post