ಬೇಲೂರು:
ಕಳೆದ ಎರಡು ವರ್ಷದಿಂದ ಕೋವಿಡ್ ಕಾರಣದಿಂದ ಹಲವಾರು ಶುಭ ಸಮಾರಂಭಗಳು ರದ್ದಾಗಿರುವ ಕಾರಣ ಛಾಯಾಗ್ರಾಹಕರು ಕಂಗೆಟ್ಟಿದ್ದು ಬದುಕು ಸಾಗಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ಛಾಯಾಗ್ರಾಹಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲೇಶ್ ಹೇಳಿದರು.
| ಬೇಲೂರಿನಲ್ಲಿ ಛಾಯಾಗ್ರಾಹಕರ ಸಂಘದಿಂದ ವಾರ್ಷಿಕ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು |
ಇಲ್ಲಿನ ಸಂಘದ ಕಚೇರಿಯಲ್ಲಿ ಸಂಘದ ೨೦೨೨ ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು. ಜೀವನೋಪಾಯಕ್ಕಾಗಿ ಛಾಯಾಗ್ರಹಣ ವೃತ್ತಿ ಮಾಡುತ್ತಿರುವ ಬಹುತೇಕ ಛಾಯಾಗ್ರಾಹಕರು ಸಂಕಷ್ಟದಲ್ಲಿದ್ದಾರೆ. ಕೋವಿಡ್ ನಂತರ ಛಾಯಾಗ್ರಹಣದ ಪರಿಕರ, ಪೇಪರ್, ಪ್ರೀಂಟ್ ದರ ದುಪ್ಪಟ್ಟು ಏರಿಕೆಯಾಗಿದೆ. ಆದರೆ ಗ್ರಾಹಕರು ಹೆಚ್ಚಿನ ಹಣ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ವಾರಂತ್ಯ ಕರ್ಫ್ಯೂ ವಿಧಿಸಿ ಮದುವೆ ಮುತಾಂದ ಸಮಾರಂಭಗಳಿಗೆ ಹೆಚ್ಚಿನ ನಿರ್ಬಂಧ ಹಾಕುತ್ತಿರುವುದರಿಂದ ಆರ್ಡರ್‌ಗಳು ಕ್ಯಾನ್ಸಲ್ ಆಗುತ್ತಿವೆ. ಆದ್ದರಿಂದ ಸರ್ಕಾರ ಕರ್ಫ್ಯೂ, ಲಾಕ್ ಡೌನ್, ಮಾಡದೆ ಕೋವಿಡ್ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದರು.
ಸಂಘದ ಕಾರ್ಯಧ್ಯಕ್ಷ ರಾಘವೇಂದ್ರಹೊಳ್ಳ ಮಾತನಾಡಿ, ಸಂಘವು ಸಂಘದ ಸದಸ್ಯರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವುದರ ಜೊತೆಗೆ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ಕೋವಿಡ್ ಮುಕ್ತವಾದ ನಂತರ ಇನ್ನಷ್ಟು ಸಮಾಜಮುಖಿ ಕೆಲಸ ಮಾಡಲು ಯೋಜನೆ ರೂಪಿಸಲಾಗುತ್ತದೆ. ಪ್ರತಿವರ್ಷದಂತೆ ಈ ವರ್ಷವೂ ಸಂಘದ ಸದಸ್ಯರಿಗೆ ಸಂಘದ ಕ್ಯಾಲೆಂಡರ್ ವಿತರಿಸುತ್ತಿದ್ದು ೨೦೨೨ ರಲ್ಲಿ ಸಂಘ ನಡೆಸುವ ಸಭೆಗಳ ವಿವಿರಗಳನ್ನು ಈ ಕ್ಯಾಲೆಂಡರ್ ನಲ್ಲಿ ನೀಡಲಾಗಿದೆ ಎಂದರು.
ಗೌರವಾಧ್ಯಕ್ಷ ಡಾ.ಶ್ರೀವತ್ಸ ಎಸ್.ವಟಿ, ನಿಕಟಪೂರ್ವ ಅಧ್ಯಕ್ಷ ಎ.ಬಿ.ಪ್ರಕಾಶ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಸಹ ಕಾರ್ಯದರ್ಶಿ ಸೋಮಶೇಖರ್, ಖಜಾಂಚಿ ಸಂದೀಪ್, ಮಾಜಿ ಕಾರ್ಯದರ್ಶಿ ಅಶೋಕ್, ನಿರ್ದೇಶಕ ಅಶ್ವಥ್, ಸದಸ್ಯರಾದ ಪ್ರಭುರಾವ್, ಸುನೀಲ್ ಇತರರು ಇದ್ದರು.