ಹೆಚ್ ಡಿ ರೇವಣ್ಣ ಏಕಾಂಗಿ ಪ್ರತಿಭಟನೆ! - M.Sc ಫುಡ್ ಆ್ಯಂಡ್ ನ್ಯೂಟ್ರಿಷನ್, M.Sc ಸೈಕಾಲಜಿ ಸ್ನಾತಕೋತ್ತರ ಪದವಿ ಮಂಜೂರಿಗೆ ಒತ್ತಾಯ

ಬೆಂಗಳೂರು: ಕರ್ನಾಟಕ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಮಾಜಿ ಸಚಿವ ಹೆಚ್ ಡಿ ರೇವಣ್ಣ ಏಕಾಂಗಿಯಾಗಿ ಪ್ರತಿಭಟನೆ ಮಾಡಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾ ಎದುರು ಪ್ರತಿಭಟನೆ ನಡೆಸುತ್ತಿರುವ ರೇವಣ್ಣ, M.Sc ಫುಡ್ ಆ್ಯಂಡ್ ನ್ಯೂಟ್ರಿಷನ್, M.Sc ಸೈಕಾಲಜಿ ಸ್ನಾತಕೋತ್ತರ ಪದವಿ ಮಂಜೂರಿಗೆ ಒತ್ತಾಯಿಸಿದ್ದಾರೆ. 

ಹೊಸ ಸ್ನಾತ್ತಕೋತ್ತರ ಪದವಿ ನೀಡಲು ರಾಜ್ಯ ಸರ್ಕಾರ ನಿರಾಕರಿಸಿದ್ದು, ಹೊಸ ಪದವಿಗಳನ್ನು ನೀಡಲು ಸಾಧ್ಯವಿಲ್ಲ ಅಂತ ಸಚಿವ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜೂರು ಮಾಡಿದ್ದರೂ ಸಚಿವರು ತಡೆ ಹಿಡಿದಿದ್ದಾರೆ ಅಂತ ರೇವಣ್ಣ ಪ್ರತಿಭಟನೆ ಮಾಡುತ್ತಿದ್ದಾರೆ.


ಜನವರಿ 14ಕ್ಕೆ ಮಾಧ್ಯಮದೊಂದಿಗೆ ಮಾತನಾಡಿದ್ದ ರೇವಣ್ಣ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಶಿಕ್ಷಣ ಇಲಾಖೆಯಲ್ಲೂ ರಾಜಕೀಯ ನಡೆಸುತ್ತಿದ್ದಾರೆ. ಹೊಳೆನರಸೀಪುರ ಮಹಿಳಾ ಕಾಲೇಜಿಗೆ ಎಂ.ಎಸ್.ಸಿ ಪದವಿ ಮಂಜೂರು ಮಾಡಲು ರಾಜಕೀಯ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆ ಕಾರ್ಯದರ್ಶಿ ಒಪ್ಪಿಗೆ ನೀಡಿದ್ದಾರೆ. ಮೈಸೂರು ವಿವಿಯವರು ಸಹ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಆದೇ ಯಾವುದೇ ಕಾರಣ ಕೊಡದೆ ಕಾಲೇಜಿನ ಕೋರ್ಸ್ ಮಂಜೂರು ಮಾಡಲು ಶಿಕ್ಷಣ ಸಚಿವರು ನಿರಾಕರಣೆ ಮಾಡಿದ್ದಾರೆ. ಹಾಗಾಗಿ ಮಂಗಳವಾರ ಸಿಎಂ ಬಸವರಾಜ ಬೊಮ್ಮಾಯಿ ಮನೆ ಎದುರು ಧರಣಿ ಮಾಡುತ್ತೇನೆ. ನಾನು ಅಲ್ಲೇ ಕೂರುತ್ತೇನೆ, ನನ್ನ ಪ್ರಾಣ ಹೋದರೆ ಹೋಗಲಿ, ಅರೆಸ್ಟ್ ಮಾಡ್ತಾರಾ ಮಾಡಲಿ, ಇಂತಾ ಕೀಳು ಮಟ್ಟದ ರಾಜಕಾರಣ ಮಾಡಬೇಡಿ ಎಂದು ಎಚ್ ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದರು.


ಬಡವರ ಹೆಣ್ಣು ಮಕ್ಕಳು ಅಲ್ಲಿ ಓದುತ್ತಾರೆ, ನನ್ನ ಮಕ್ಕಳು ಅಲ್ಲಿ ಓದುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಗರಂ ಆಗಿದ್ದ ರೇವಣ್ಣ, ನಾನು ದೇವೇಗೌಡರಿಗೆ ಕೇಳುತ್ತೇನೆ ಈ ಜಿಲ್ಲೆಗೆ ಅನ್ಯಾಯ ಆದಾಗ ನೀವು ಎದ್ದೇಳಬೇಕು. ಜನರು ನಿಮಗೆ ಅಧಿಕಾರ ನೀಡಿದ್ದಾರೆ. ಹಾಗಾಗಿ ನೀವು ಜನರ ಪರವಾಗಿ ಸಿಡಿದೇಳಬೇಕು . ಈ ರಾಜ್ಯ ಲೂಟಿಕೋರರ ಕೈ ಸೇರಿದೆ. ಇವರನ್ನ ಶಿಕ್ಷಣ ಸಚಿವರು ಎನ್ನೋದಕ್ಕೆ ನಾಚಿಕೆ ಆಗಬೇಕು. ಬರಲಿ ನೋಡೋಣ, 2023 ಕ್ಕೆ ಏನಾಗುತ್ರೋ ನೋಡೋಣ ನಾನೂ ಇರುತ್ತೇನೆ. ಇಂತಹ ಶಿಕ್ಷಣ ಸಚಿವರಿಂದ ಸರ್ಕಾರ ಕ್ಕೂ ಕೆಟ್ಟ ಹೆಸರು ಬರ್ತಿದೆ ಎಂದು ಆಕ್ರೋಶ ಹೊರಹಾಕಿದ್ದರು.

Post a Comment

Previous Post Next Post