ಬೇಡಿಕೆ ಈಡೇರಿಕೆಗೆ ಸೆಸ್ಕ್ ಕಚೇರಿ ಮುಂದೆ ರೈತರ ಧರಣಿ

 ಬೇಲೂರು : ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಇಲ್ಲಿ ರೈತರು, ಕಾಫಿ ಬೆಳೆಗಾರರು ಪ್ರತಿಭಟನೆ ನಡೆಸಿದರು.

ಇದೆ ವೇಳೆ ರಸ್ತೆತಡೆ ನಡೆಸಿದ ಪ್ರತಿಭಟನಕಾರರು, ಸೆಸ್ಕ್ ಕಚೇರಿ ಬಾಗಿಲು ಹಾಕಿ ಧರಣಿ ನಡೆಸಿದರು. ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಹಾಗೂ ಸೆಸ್ಕ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಬೇಲೂರಿನಲ್ಲಿ ರೈತರು ಸೆಸ್ಕ್ ಕಚೇರಿ ಮುಂದೆ ಧರಣಿ ನಡೆಸಿದರು


ಈ ಸಂದರ್ಭ ಮಾತನಾಡಿದ ರೈತ ಸಂಘದ ಪ್ರಮುಖ ರಾಜೇಗೌಡ, ರೈತರು ಹಾಗೂ ಕಾಫಿ ಬೆಳೆಗಾರರು ಬಳಸುವ ಕೊಳವೆಬಾವಿಗಳ ವಿದ್ಯುತ್ ಸಂಪರ್ಕವನ್ನು ಸೆಸ್ಕಾಂ ಕಡಿತಗೊಳಿಸಬಾರದು, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಬೆಳೆಗಾರರು ತೋಟದಲ್ಲಿಯೆ ತಮ್ಮ ಮನೆಗಳನ್ನು ಕಟ್ಟಿಕೊಂಡು ವಾಸವಾಗಿದ್ದಾರೆ. ಸೆಸ್ಕಾಂ ಅಧಿಕಾರಿಗಳು ಏಕಾಏಕಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದರಿಂದ ಕುಡಿಯುವ ನೀರಿಗೆ ತೊಂದರೆ ಆಗುತ್ತಿದೆ ಇದು ತಪ್ಪಬೇಕೆಂದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬೋಗಮಲ್ಲೇಶ್ ಮಾತನಾಡಿ, ಕಾಫಿ ಬೆಳೆಗಾರರು ಹೊಂದಿರುವ ವಿದ್ಯುತ್ ಪಂಪ್‌ಸೆಟ್‌ಗಳಿಗೆ ಶುಲ್ಕ ರಹಿತ ವಿದ್ಯುತ್ ನೀಡಬೇಕು. ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದಲ್ಲಿ ಇದ್ದಾಗ ಈ ಬಗ್ಗೆ ಆದೇಶ ಮಾಡಿದ್ದರೂ ಈವರಗೆ ಕಾರ್ಯರೂಪಕ್ಕೆ ಬಂದಿಲ್ಲ. ಸೆಸ್ಕ್ ಅಧಿಕಾರಿಗಳು ಹಣ ಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ. ೨೦ ವರ್ಷದ ಹಿಂದಿನಿAದ ಹಣ ನೀಡಬೇಕೆಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಬೆಳಗಾರರ ಸಂಘದ ಮಾಜಿ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ ಮಾತನಾಡಿ, ಸಣ್ಣ ಕಾಫಿ ಬೆಳೆಗಾರರನ್ನು ಕೂಡ ದೊಡ್ಡ ಬೆಳೆಗಾರರಂತೆ ಉಧ್ಯಮಿಗಳೆಂದು ಪರಿಗಣಿಸಿರುವುದು ಸರಿಯಲ್ಲ. ಎಲ್.ಟ.೪ ಸಿ ಎಂದು ಪರಿಗಣಿಸಿರುವುದು ದುರಾದೃಷ್ಠಕರ, ಇದನ್ನು ಎಲ್.ಟಿ.೪ ಎ ಎಂದು ಬದಲಾವಣೆ ಮಾಡಬೇಕಿದೆ, ೧೦ ಹೆಚ್‌ಪಿ ವರಗೂ ಉಚಿತ ವಿದ್ಯುತ್ ನೀಡಬೇಕಿದೆ. ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿರುವಂತೆ ಹಾಸನ ಜಿಲ್ಲೆಯಲ್ಲಿಯೂ ನೀಡಬೇಕಿದೆ ಎಂದು ಮನವಿ ಮಾಡಿದರು. 

ರೈತ ಪ್ರಮುಖ ಜಯರಾಂ ಮಾತನಾಡಿ, ರಾಜ್ಯದ ರೈತರಿಗೆ ಉಚಿತವಾಗಿ ೧೦ ಹೆಚ್‌ಪಿವರಗೂ ಕೊಡುತ್ತಿದ್ದು ಆದರೆ ಕಾಫಿ ಬೆಳೆಗಾರರಿಗೆ ಕೊಡುತ್ತಿಲ್ಲ. ರೈತರಲ್ಲಿ ಕಾಫಿ ಬೆಳೆಗಾರರು ಶೇ.೧ ರಷ್ಟು ಇರುವ ನಾವು ಹೆಚ್ಚು ತೆರಿಗೆ ಪಾವತಿಸುತ್ತಿದ್ದೇವೆ. ಸರಕಾರ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭ ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಬಳ್ಳೂರುಸ್ವಾಮೀಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹಿರಿಯಣ್ಣಗೌಡ, ಪ್ರಮುಖರಾದ ಲೋಕೇಶ್, ವಿಜಯಕುಮಾರ್, ನಾಗೇಶ್, ಸತೀಶ್, ಕರ್ಕಿಹಳ್ಳಿರಮೇಶ್, ಸಚಿನ್, ಬಸವರಾಜು ಇತರರು ಇದ್ದರು.


Post a Comment

Previous Post Next Post