ಬೇಲೂರು ಪಟ್ಟಣದ ವಿವಿಧ ಬೇಕರಿ ಹಾಗೂ ಪೆಟ್ಟಿಗೆ ಅಂಗಡಿ, ಹೋಟೇಲ್‌ಗಳಿಗೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ದಂಡ ಹಾಕಿದ ಘಟನೆ ನಡೆಯಿತು.
ಸರ್ಕಾರದ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಪ್ರಮುಖ ಸ್ಥಳಗಳಲ್ಲಿ ತಂಬಾಕು ಸೇವನೆ ನಿಷೇಧಿಸಲಾಗಿದ್ದರೂ ಅಂಗಡಿ ಹಾಗೂ ಬೇಕರಿ ಮಾಲೀಕರು ಕಾನೂನನ್ನು ಮೀರಿ ಬೀಡಿ ಸಿಗರೇಟು ಇತರೆ ತಂಬಾಕಿಗೆ ಸಂಬಂಧಪಟ್ಟಂತ ವಸ್ತುಗಳನ್ನು ಮಾರಾಟ ಮಾಡುತ್ತಿದ್ದನ್ನು ಕಂಡು ತಾಲೂಕು ದಂಡಾಧಿಕಾರಿ ಮೋಹನ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಕಾನೂನು ಮೀರಿ ವ್ಯಾಪಾರ ಮಾಡುತ್ತಿದ್ದ ಅಂಗಡಿ ಮುಗ್ಗಟ್ಟುಗಳಿಗೆ ಸೂಚನೆ ನೀಡಿ ದಂಡಹಾಕಿ ಎಚ್ಚರಿಸಿದರು.
ನಂತರ ಮಾತನಾಡಿದ ಅವರು ಸರ್ಕಾರದ ಅದೇಶದಂತೆ ಸಾರ್ವಜನಿಕರ ಸ್ಥಳ, ಬಸ್ ನಿಲ್ದಾಣ, ಶಾಲೆ ಆವರಣ, ಮುಂತಾದ ಸ್ಥಳಗಳಲ್ಲಿ ಮೂರು ಮೀಟರ್ ವ್ಯಾಪ್ತಿಯ ಹೊರಗೆ ಧೂಮಪಾನ , ಮದ್ಯಪಾನ ಇತರ ವಗೈರಗಳನ್ನು ನಿಷೇಧಿಸಲಾಗಿದ್ದರೂ ಮಾಲೀಕರು ಕಾನೂನು ಉಲ್ಲಂಘನೆ ಮಾಡಿ ತಂಬಾಕಿಗೆ ಸಂಬಂಧಪಟ್ಟಂತ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ. ಇದರಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ ಸೇವನೆ ಮಾಡುತ್ತಿರುವವರ ಅಕ್ಕ ಪಕ್ಕದಲ್ಲಿರುವವರಿಗೂ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಸರ್ಕಾರದ ಸೂಚನೆಯಂತೆ ನಾವುಗಳು ಅಂಗಡಿಗಳಿಗೆ ಭೇಟಿ ನೀಡಿ ಕಾನೂನು ಬಾಹಿರವಾಗಿ ವ್ಯಾಪಾರ ನಡೆಸುತ್ತಿರುವವರಿಗೆ ಹಾಗೂ ತಂಬಾಕು ಸೇವನೆ ಮಾಡುತ್ತಿರುವವರಿಗೆ ದಂಡ ವಿಧಿಸಿ ಸೂಚನೆ ನೀಡಲಾಗುತ್ತಿದೆ.
ಎರಡನೇ ಹಂತದಲ್ಲಿ ತಪ್ಪು ಕಂಡುಬಂದಲ್ಲಿ ಸಂಬಂಧಪಟ್ಟ ಅಂಗಡಿ , ಹೊಟೇಲ್, ಬೇಕರಿ ಮುಂತಾದವುಗಳನ್ನು ಪರವಾನಗಿ ರದ್ದು ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾ ಅಧಿಕಾರಿ ರವಿಕುಮಾರ್, ಜಿಲ್ಲಾ ಆರೋಗ್ಯ ಶೈಕ್ಷಣಿಕ ಅಧಿಕಾರಿ ಅರುಂಧತಿ, ಜಿಲ್ಲಾ ತಂಬಾಕು ಸಂಯೋಜಕರಾದ ವಿಮಲಾ, ತಾಲೂಕು ವೈದ್ಯಾಧಿಕಾರಿ ಡಾ ವಿಜಯ್, ಪುರಸಭೆ ಮುಖ್ಯಾಧಿಕಾರಿ ಸುಜಯ್, ಆರೋಗ್ಯ ಅಧಿಕಾರಿ ಲೋಹಿತ್, ಪೋಲಿಸ್ ಸಬ್ ಇನ್ಸ್ ಪೆಕ್ಟರ್ ರಮೇಶ್, ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ಉಷಾ, ಜಿಲ್ಲಾ ತಂಬಾಕು ಕೊಷ್ಠಾಧಿಕಾರಿ ಗಣೇಶ್ ಇತರರು ಹಾಜರಿದ್ದರು.
Tags
ಬೇಲೂರು