ಹಾಸನ: ಹಾಸನ ಜಿಲ್ಲೆಯಲ್ಲೊಂದು ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ. ವ್ಯಕ್ತಿಯೋರ್ವ ಕೂಲಿ ಕೆಲಸಕ್ಕೆ ಬಂದಿದ್ದ 55 ಕಾರ್ಮಿಕರನ್ನು ಕೂಡಿ ಹಾಕಿದ್ದ ಘಟನೆ ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ ಅಣ್ಣೇನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಸದ್ಯ ಪೊಲೀಸರು ಕಾರ್ಮಿಕರನ್ನು ಬಂಧಮುಕ್ತಗೊಳಿಸಿದ್ದಾರೆ.ಮುನೇಶ್ ಎಂಬಾತನು ಈ ಕೃತ್ಯವನ್ನು ಎಸಗಿದ್ದಾನೆ. 55 ಜನರನ್ನು ಮುನೇಶ್ ಒಂದೆಡೆ ಬಂಧನದಲ್ಲಿಟ್ಟಿದ್ದನು. ಇಂದು ಬೆಳಿಗ್ಗೆ ಅರಸೀಕೆರೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದು, 55 ಜನರನ್ನು ಬಂಧನ ಮುಕ್ತಗೊಳಿಸಿದ್ದಾರೆ.
ಈ 55 ಜನರ ಪೈಕಿ 50 ಪುರುಷರು ಹಾಗೂ 5 ಮಹಿಳೆಯರು ಆಗಿದ್ದರು. 55 ಕಾರ್ಮಿಕರನ್ನು ಮುನೇಶ್ ಎರಡು ಪ್ರತ್ಯೇಕ ಶೆಡ್ ಗಳಲ್ಲಿ ಬಂಧನದಲ್ಲಿ ಇರಿಸಿದ್ದರು ಎಂದು ತಿಳಿದು ಬಂದಿದೆ. ಶುಂಠಿ ಕೆಲಸಕ್ಕೆ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಮುನೇಶ್, ಕಾರ್ಮಿಕರು ಕೆಲಸ ಮುಗಿಸಿದ ಕೂಡಲೇ ಅವರನ್ನು ಶೆಡ್ ನಲ್ಲಿ ಕೂಡಿ ಹಾಕುತ್ತಿದ್ದ. ಕೂಲಿ ಅರಸಿ ಹೊರ ಜಿಲ್ಲೆಗಳಿಂದ ಈ ಕಾರ್ಮಿಕರು ಬಂದಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಸದ್ಯ ಮುನೇಶ್ ಪತ್ತೆಗೆ ಖಾಕಿ ಪಡೆ ಬಲೆ ಬೀಸಿದೆ. ಎಸ್ಪಿ ಶ್ರೀನಿವಾಸ್ ಗೌಡ ಸೂಚನೆ ಮೇರೆಗೆ ಡಿವೈಎಸ್ ಪಿ ಅಶೋಕ್, ಸರ್ಕಲ್ ಇನ್ಸಪೆಕ್ಟರ್ ವಸಂತ್ ಕುಮಾರ್, ಸಬ್ಇನ್ಸ್ ಪೆಕ್ಟರ್ ಲಕ್ಷ್ಮಣ್ ನೇತೃತ್ವದ ತಂಡ ದಾಳಿ ನಡೆಸಿದೆ.
Tags
ಹಾಸನ