ನನ್ನ ಕ್ಷೇತ್ರದ ಜನರ ಒಳಿತಿಗಾಗಿ ಪುರದಮ್ಮನಿಗೆ ಹರಕೆ: ಪ್ರೀತಂಗೌಡ

ಹಾಸನ: ಹಾಸನ ವಿಧಾನ ಸಭಾ ಕ್ಷೇತ್ರದ ಜನರಿಗೆ ಒಳ್ಳೆಯದಾಗಬೇಕು. ಉತ್ತಮ ನಾಯಕತ್ವ ಇರಬೇಕು. ಆ ನಾಯಕತ್ವ ಅಭಿವೃದ್ಧಿ ಪರವಾಗಿ ಯೋಜನೆ ಮಾಡುವಂತಿರಬೇಕು ಎಂದು ಶಕ್ತಿ ದೇವತೆ ಪುರದಮ್ಮನಿಗೆ ಹರಕೆ ಕಟ್ಟಿಕೊಂಡಿದ್ದೆ. ಅದನ್ನೀಗ ತೀರಿಸಿದ್ದೇನೆ ಎಂದು ಶಾಸಕ ಪ್ರೀತಂಗೌಡ ಹೇಳಿದರು.
ಇಂದು ದೇವಿಗೆ ಹರಕೆ ಅರ್ಪಿಸಿ ಸಹಸ್ರಾರು ಜನರಿಗೆ ಭೋಜನ ಏರ್ಪಾಡು ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 
ನಾನು ರಾಜಕಾರಣಕ್ಕೆ ಬರುವ ಮುಂಚೆಯಿಂದಲೂ ಪುರದಮ್ಮ ಹಾಗೂ ತಾಯಿ ಹಾಸನಾಂಬೆಯ ಪರಮ ಭಕ್ತ. 2011, 2015 ರಲ್ಲಿ ನಮ್ಮ ನಾಯಕರಾದ ಸಿ.ಟಿ.ರವಿ ಅಣ್ಣ ಅವರು ಕಟ್ಟಿಕೊಟ್ಟಿದ್ದ ಹರಕೆಯನ್ನು ನಾವೇ ತೀರಿಸಿದ್ದೆವು. ಸ್ವತಃ ರವಿ ಅಣ್ಣ ಅವರೇ ಬಂದು ಪುರದಮ್ಮನಿಗೆ ಹರಕೆ ತೀರಿಸಿ ಹೋಗಿದ್ದರು. ಅಂತೆಯೇ ನಾನು ಕಟ್ಟಿಕೊಂಡಿದ್ದ ಹರಕೆಯನ್ನು ಈಗ ತೀರಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ನನ್ನ ಉದ್ದೇಶ ಹಾಸನ ವಿಧಾನಸಭಾ ಕ್ಷೇತ್ರದ ಜನರಿಗೆ ಒಳ್ಳೆಯದಾಗಬೇಕು. ಉತ್ತಮವಾದಂತಹ ನಾಯಕತ್ವ ಇರಬೇಕು.
ಆ ನಾಯಕತ್ವ ಅಭಿವೃದ್ಧಿ ಪರವಾಗಿ ಯೋಚನೆ ಮಾಡುವಂತಿರಬೇಕು ಎಂದು ದೇವರಲ್ಲಿ ಹರಕೆ ಮಾಡಿದ್ದೆ. ಅದನ್ನು ತೀರಿಸಲು ಕಳೆದ ರಾತ್ರಿ ಚಾಲನೆ ಕೊಟ್ಟಿದ್ದೇನೆ. ನನ್ನ ಹಿತೈಷಿಗಳು, ಕಾರ್ಯಕರ್ತರು ಉದ್ದೂರು ರಸ್ತೆಯಲ್ಲಿ ಇಂದು ಮಧ್ಯಾಹ್ನ ಭೋಜನ ಇಟ್ಟುಕೊಂಡಿದ್ದಾರೆ. ನಾನೂ ಕೂಡ ಭಾಗವಹಿಸುತ್ತಿದ್ದೇನೆ ಎಂದರು.
ತಾಯಿ ಏನು ಕೇಳಿದರೂ ಇಲ್ಲಾ ಅನ್ನಲ್ಲ. ನನ್ನ ಹಳೆಯ ಹರಕೆಯನ್ನು ಪೂರೈಸಿದ್ದೇನೆ, ಹೊಸದನ್ನು ಕೊಟ್ಟರೆ ಮತ್ತೊಮ್ಮೆ ಪ್ರಸಾದ ಕೊಟ್ಟು ದೇವಿಯ ಸೇವೆ ಮಾಡುತ್ತೇನೆ, ದೇವಿಯಲ್ಲಿ ರಾತ್ರಿ ಪ್ರಸಾದ ಆಯ್ತು. ಆ ಹರಕೆ ಏನು ಅಂತ ಬಂದಮೇಲೆ ಹೇಳುತ್ತೇನೆ ಎಂದರು. ಸಚಿವ ಸ್ಥಾನ ಕರುಣಿಸು ತಾಯೆ ಎಂದು ಶಾಸಕರು ದೇವಿಗೆ ಹರಕೆ ಕಟ್ಟಿಕೊಂಡಿರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ವಿಶೇಷ ಪೂಜೆ ಸಲ್ಲಿಕೆ:
ಇದಕ್ಕೂ ಮುನ್ನ ಹರಕೆ ನಿಮಿತ್ತ ಕುಟುಂಬ ಸಮೇತರಾಗಿ ಪುರದಮ್ಮ ದೇವಿಯ ಸನ್ನಿಧಿಗೆ ತೆರಳಿ ಶಾಸಕರು ಪೂಜೆ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ದೇವಾಲಯಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶಾಸಕರು ಕಟ್ಟಿಕೊಂಡಿದ್ದ ಹರಕೆ ತೀರಿಸಲು ಸುಮಾರು 400 ಹೋತಗಳನ್ನು ಬಲಿ ಕೊಡಲಾಗಿದೆ ಎನ್ನಲಾಗಿದೆ. ನಗರದ ಹೊರವಲಯದ ಉದ್ದೂರು ಸಮೀಪ ಬೃಹತ್ ಪೆಂಡಾಲ್ ಹಾಕಲಾಗಿದ್ದು, ಸುಮಾರು 25 ರಿಂದ 30 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

Post a Comment

Previous Post Next Post