ಹಾಸನ: ಅಚ್ಚೇದಿನ್ ಆಸೆ ತೋರಿಸಿ, ಸಾರ್ವಜನಿಕರನ್ನು ಮರುಳು ಮಾಡುವ ಘೋಷಣೆಗಳೊಂದಿಗೆ ಅಧಿಕಾರಕ್ಕೆ ಬಂದ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರಗಳು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ನಿತ್ಯವೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ದೇಶದ ಜನರಿಗೆ ಮೋಸ ಮಾಡಿ ವಂಚಿಸುತ್ತಿವೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಹೊಂಗೆರೆ ರಘು ಕಿಡಿ ಕಾರಿದ್ದಾರೆ.
ಅಚ್ಚೇದಿನ್ ಆಯೇಗಾ, ಸಬ್‌ಕಾ ಸಾತ್ ಸಬ್‌ಕಾ ವಿಕಾಸ್, ಬೇಟಿ ಪಡಾವೋ, ಬೇಟಿ ಬಚಾವೋ ಇನ್ನಿತರೆ ಮರುಳು ಮಾಡುವ ಮಾತುಗಳನ್ನು ಪದೇ ಪದೇ ಹೇಳುವ ಪ್ರಧಾನ ಮಂತ್ರಿ ಹಾಗೂ ಬಿಜೆಪಿ ನಾಯಕರು ವಾಸ್ತವದಲ್ಲಿ ಜನರನ್ನು ಹಿಂಸಿಸುತ್ತಿದ್ದಾರೆ.
ದಿನೇ ದಿನೇ ಬೆಲೆ ಏರಿಕೆ ಮಾಡುವ ಮೂಲಕ ಬಡವರ ಬದುಕಿಗೆ ಕೊಳ್ಳಿ ಇಡುತ್ತಿದ್ದಾರೆ ಎಂದು ದೂರಿದ್ದಾರೆ.
ಕೇವಲ ಒಂದು ವರ್ಷದಲ್ಲಿ ಪೆಟ್ರೋಲ್ ಬೆಲೆ ಸುಮಾರು 30 ರೂ.ನಷ್ಟು ಏರಿಕೆಯಾಗಿದೆ.ಕಳೆದ ಒಂದು ವಾರದಲ್ಲಿ ಒಂದು ಲೀಟರ್ ಪೆಟ್ರೋಲ್ 9 ರೂ. ಏರಿಕೆಯಾಗಿದ್ದರೆ, ಡೀಸೆಲ್ 5 ರೂ. ತುಟ್ಟಿಯಾಗಿದೆ. ಅಂತೆಯೇ ಅಡುಗೆ ಅನಿಲದ ಬೆಲೆ ಒಂದು ಸಾವಿರದ ಗಡಿ ದಾಟಿದ್ದರೆ ವಾಣಿಜ್ಯ ಬಳಕೆ ಸಿಲಿಂಡರ್ ಎರಡುಕಾಲು ಸಾವಿರ ದಾಟಿದೆ. ಇದೇನಾ ಇವರ ಅಚ್ಚೇದಿನ್ ಅಭಯ ಎಂದು ವ್ಯಂಗ್ಯವಾಡಿದ್ದಾರೆ.
ಗಾಯದ ಮೇಲೆ ಬರೆ ಎಂಬಂತೆ ಇದೀಗ ವಿದ್ಯುತ್ ದರವನ್ನೂ ಯೂನಿಟ್‌ಗೆ ೩೫ ಪೈಸೆ ಹೆಚ್ಚಳ ಮಾಡಿದ್ದಾರೆ.
ಒಂದೆಡೆ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಮತ್ತೊಂದೆಡೆ ಬೆಲೆ ಏರಿಕೆ ಮಾಡುವ ಮೂಲಕ ದುಡಿಯುವ ಜನರ ಹೊಟ್ಟೆ ಮೇಲೆ ಹೊಡೆಯಲಾಗುತ್ತಿದೆ ಎಂದು ವಿಷಾದಿಸಿದ್ದಾರೆ.
ಈ ಎಲ್ಲಾ ವೈಫಲ್ಯಗಳ ವಿರುದ್ಧ ಜನರು ತಿರುಗಿ ಬೀಳುತ್ತಾರೆ ಎಂದು ಅವರ ಗಮನವನ್ನು ಬೇರೆಡೆ ಸೆಳೆಯಲು ಹಿಜಾಬ್, ಕೇಸರಿ ಶಾಲು ವಿವಾದ, ಶಾಲಾ ಪಠ್ಯದಿಂದ ಟಿಪ್ಪು ಹೆಸರು ತೆಗೆದು ಹಾಕುವ ಪ್ರಸ್ತಾಪ, ಮುಸ್ಲಿಂ ವರ್ತಕರಿಗೆ ನಿಷೇಧ, ಹಲಾಲ್, ಜಟ್ಕಾಕಟ್, ಇದೀಗ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಬೇಡ ಎಂಬ ಕೂಗಗೆಬ್ಬಿಸಲಾಗುತ್ತಿದೆ.
ಸಮಾಜದಲ್ಲಿ ಶಾಂತಿ ಕದಡುವ ಅನಗತ್ಯ ವಿಚಾರಗಳನ್ನು ಮುನ್ನಲೆಗೆ ತಂದು ಸರ್ಕಾರವೇ ಸಾಮರಸ್ಯ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಧರ್ಮ, ಜಾತಿಗಳ ನಡುವೆ ಕಲಹ ಹುಟ್ಟು ಹಾಕುತ್ತಿರುವವರನ್ನು ದಂಡಿಸಬೇಕಿದ್ದ ಸರ್ಕಾರವೇ ಪರೋಕ್ಷವಾಗಿ ಅದಕ್ಕೆ ಕುಮ್ಮಕ್ಕು ನೀಡುತ್ತಿರುವುದು ಒಳ್ಳೆ ಬೆಳವಣಿಗೆ ಅಲ್ಲ. ಬೆಲೆ ಏರಿಕೆ ಬಗ್ಗೆ ದಿವ್ಯ ಮೌನ ವಹಿಸುವ ಮೂಲಕ ಬಿಜೆಪಿ ಶ್ರೀಮಂತರ ಪಕ್ಷ ಎನ್ನುವುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿ ಸರ್ಕಾರ ಬೆಲೆ ಏರಿಕೆ ಶೂಲದಿಂದ ಬಡ ಜನರನ್ನು ಬರ್ಬಾದ್ ಮಾಡುತ್ತಿದೆ. ಬಿಜೆಪಿ ಎಂದರೆ ಬಡವರ ರಕ್ತ ಹೀರಿ ಸಿರಿವಂತರ ಖಜಾನೆ ತುಂಬುವ ಬಲ್ಲಿದ ಜನರ ಪಕ್ಷವಾಗಿದೆ. ಬೆಲೆ ಏರಿಕೆ ಬೆಂಕಿಯಲ್ಲಿ ಮಹಿಳೆಯರು, ಶ್ರೀಸಾಮಾನ್ಯರು ಬೇಯುತ್ತಿದ್ದರೆ ಬಿಜೆಪಿಗೆ ಧರ್ಮ ರಾಜಕಾರಣವೇ ಮುಖ್ಯವಾಗಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
೨೦೧೮ ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಲು ಪೆಟ್ರೋಲ್ ಬೆಲೆಯನ್ನು ೧.೧೨ ರೂ. ಏರಿಸಿದ್ದಕ್ಕೆ ಬಿಜೆಪಿ ನಾಯಕರು ಕೂಗಾಡಿ ಗಲಾಟೆ ಎಬ್ಬಿಸಿದ್ದರು.
ಆದರೀಗ ಭಾರೀ ಪ್ರಮಾಣದಲ್ಲಿ ಬೆಲೆ ಹೆಚ್ಚಾದರೂ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಇನ್ನಾದರೂ ತಮ್ಮ ಇಬ್ಬಗೆಯ ನೀತಿ ಬಿಟ್ಟು ಬೆಲೆ ಏರಿಕೆಗೆ ನಿಯಂತ್ರಣ ಇಂಧನ, ಗ್ಯಾಸ್, ಇನ್ನಿತರೆ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡದಿದ್ದರೆ ಉಭಯ ಸರ್ಕಾರಗಳ ವಿರುದ್ಧ ಜಿಲ್ಲಾ ಜೆಡಿಎಸ್ ವತಿಯಿಂದ ಜನಾಂದೋಲನ ರೂಪಿಸಿ ಎಲ್ಲೆಡೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.