೨೦ ಲಕ್ಷರೂ. ವೆಚ್ಚದ ೨ ಕಿ.ಮೀ.ವ್ಯಾಪ್ತಿ ಚಿತ್ರ ಸೆರೆ ಹಿಡಿಯುವ ಕ್ಯಾಮರಾ ದುರಸ್ತಿಯಾಗದ ಬೇಲೂರು ದೇಗುಲದ ಪುರಾತತ್ವ ಇಲಾಖೆ ಸಿಸಿ ಕ್ಯಾಮರಾ!?

 ಅನಂತರಾಜೇಅರಸು ಬೇಲೂರು:

ಇಲ್ಲಿನ ಶ್ರೀಚನ್ನಕೇಶವಸ್ವಾಮಿ ರಥೋತ್ಸವಕ್ಕೆ ಕೇವಲ ೯ ದಿನ ಬಾಕಿಯಿದೆ. ಯುಗಾದಿ ಹಬ್ಬದ ದಿನದಿಂದಲೆ ಪ್ರತಿನಿತ್ಯ ದೇವರ ಉತ್ಸವಗಳು ಜರುಗುತ್ತಿದೆ.

ಬೇಲೂರಿನ ದೇಗುಲದ ಗೋಪರಕ್ಕೆ ಅಳವಡಿಸಿರುವ ಸಿಸಿ ಕ್ಯಾಮರಾ


೨ ವರ್ಷದಿಂದ ಕೋವಿಡ್ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ದೊಡ್ಡರಥೋತ್ಸವ ಈ ವರ್ಷ ನಡೆಯಲಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಲಿದೆ. ಈ ನಡುವೆ ಹಿಜಾಬ್, ಅನ್ಯಧರ್ಮೀಯರಿಗೆ ವ್ಯಾಪಾರ ವಹಿವಾಟು ನಿಷೇಧದ ಚರ್ಚೆಗಳು ಸಹ ನಡೆದಿದ್ದು ಇದಕ್ಕೆ ಪೂರಕವಾದ ರಕ್ಷಣಾ ವ್ಯವಸ್ಥೆ ಆಗಬೇಕಿದೆ.


ದೇಗುಲದ ರಕ್ಷಣೆಗಾಗಿ ೧೦ ವರ್ಷಗಳ ಹಿಂದೆಯೇ ಕೇಂದ್ರ ಪುರಾತತ್ವ ಇಲಾಖೆಯಿಂದ ಅಳವಡಿಸಲಾದ ೨೦ ಲಕ್ಷರೂ. ಬೆಲೆಯ ಬೃಹತ್ ಸಿಸಿ ಕ್ಯಾಮರಾ ಕೆಟ್ಟು ಹಲವು ವರ್ಷಗಳೆ ಆಗಿದೆ. ಈ ಕ್ಯಾಮರಾದಿಂದ ದೇಗುಲದ ಪಶ್ಚಿಮ, ಉತ್ತರ, ದಕ್ಷಿಣ ಭಾಗದ ೨ ಕಿ.ಮೀ.ವರಗಿನ ಚಿತ್ರಣಗಳನ್ನು ಸೆರೆ ಹಿಡಿಯುವ ಸಾಧ್ಯತೆ ಇತ್ತು. ಈ ಸಿಸಿ ಕ್ಯಾಮರಾ ಸೆರೆ ಹಿಡಿದ ಚಿತ್ರವನ್ನು ಶ್ರೀರಂಗಪಟ್ಟಣ, ದೆಹಲಿಯಲ್ಲಿಯೂ ವೀಕ್ಷಸಿಸುವ ಅವಕಾಶವಿತ್ತು. ಇದಕ್ಕಾಗಿ ದೇಗುಲದ ರಾಜಗೋಪುರದ ನಡುವೆ ಒಳಭಾಗದಲ್ಲಿ ಪ್ರತ್ಯೇಕ ಯಂತ್ರೋಪಕರಣಗಳನ್ನು ಅಳವಡಿಸಲಾಗಿತ್ತು. 


ಆದರೆ ಸಮರ್ಪಕ ನಿರ್ವಹಣೆ ಕೊರತೆಯಿಂದ ಯಂತ್ರೋಪಕರಣಗಳು  ಕೆಟ್ಟುಹೋಗಿದ್ದು ಕ್ಯಾಮರಾ ಮಾತ್ರ ನೋಡಲಷ್ಟೇ ಎಂಬಂತೆ ರಾರಾಜಿಸುತ್ತಿದೆ. ಈ ಕ್ಯಾಮರಾದ ಜೊತೆಗೆ ಗೋಪುರದ ತಳಭಾಗದಲ್ಲಿ ದೇಗುಲದ ಮುಂಭಾಗದ ಚಿತ್ರಣ ಸೆರೆ ಹಿಡಿಯಲು ಅಳವಡಿಸಿದ್ದು ಇದೂ ಸಹ ಕೆಲಸಕ್ಕೆ ಬಾರದಂತಾಗಿದೆ. ಕ್ಯಾಮರಾ ದುರಸ್ತಿಪಡಿಸುವಂತೆ ಹಲವು ಬಾರಿ ದೇಗುಲದಿಂದ ಪತ್ರ ಬರೆದರೂ ಪುರಾತತ್ವ ಇಲಾಖೆ ಅಧಿಕಾರಿಗಳು ಗಮನ ಹರಿಸಿಲ್ಲ. ಇದೀಗ ರಥೋತ್ಸವದ ವೇಳೆ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಸೂಕ್ತ ರಕ್ಷಣೆಗಾಗಿ ಇಂತಹ ಕ್ಯಾಮರಾ ಅಗತ್ಯವಿದ್ದು ಶೀಘ್ರ ದುರಸ್ತಿ ಆಗಬೇಕಿದೆ. ಇದರ ಜೊತೆಗೆ ರಥೋತ್ಸವದ ಈ ವೇಳೆ ದೇಗುಲ ಮುಂಭಾಗವಿರುವ ಪುರಾತತ್ವ ಇಲಾಖೆಯ ಉಚಿತ ಶೌಚಾಲಯಕ್ಕೆ ಬೀಗ ಹಾಕಲಾಗಿದೆ.

ಬೇಲೂರಿನ ಶ್ರೀಚನ್ನಕೇಶವ ದೇಗುಲ ಮುಂಭಾಗವಿರುವ ಶೌಚಾಲಯಕ್ಕೆ ಬೀಗ ಹಾಕಲಾಗಿದೆ

 ೨ ದಿನದಿಂದ ಬೀಗ ಹಾಕಲಾಗಿದ್ದು ಹೊಸದಾಗಿ ಕಂಟ್ರಾಕ್ಟ್ ಮಾಡಿಕೊಳ್ಳುವವರಗೆ ಬಾಗಿಲು ಬಂದ್ ಮಾಡಲಾಗುತ್ತಿದೆ ಎನ್ನಲಾಗಿದೆ. ಶೌಚಾಲಯದ ಬಾಗಿಲು ಮುಚ್ಚಿದರೆ ದೇಗುಲಕ್ಕೆ ಬರುವ ಭಕ್ತರು ಪ್ರಕೃತಿಕರೆಗೆ ಹೋಗುವುದೆಲ್ಲಿ ಎನ್ನುವ ಆತಂಕ ಉಂಟಾಗಿದೆ. ಈ ಶೌಚಾಲಯಕ್ಕೆ ಫಲಕ ಅಳವಡಿಸದೆ ಇರುವುದರಿಂದ ಪ್ರವಾಸಿಗರು ಹುಡಕಾಡಿ, ಅವರಿವರಲ್ಲಿ ಕೇಳಿ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ. 


ಪುರಾತತ್ವ ಇಲಾಖೆಯ ಅಧಿಕಾರಿಗಳು ಇಲ್ಲಿ ಯಾರೂ ಇಲ್ಲದ್ದರಿಂದ ಬಾಗಿಲು ಬಂದ್ ಮಾಡಿರುವ ಹಾಗೂ ಫಲಕ ಇಲ್ಲದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲವಾಗಿದೆ.


-----------

ಅಧಿಕಾರಿ ಹೇಳಿಕೆ

----------

ಪುರಾತತ್ವ ಇಲಾಖೆಯಿಂದ ಅಳವಡಿಸಲಾದ ಬೃಹತ್ ಸಿಸಿ ಕ್ಯಾಮರಾ ಕೆಟ್ಟುಹೋಗಿ ಆರೇಳು ವರ್ಷಗಳೆ ಆಗಿದೆ. ಈ ಬಗ್ಗೆ ಹಲವು ಬಾರಿ ಪತ್ರ ಬರೆದರೂ ಕ್ರಮ ಕೈಗೊಂಡಿಲ್ಲ.


-ವಿದ್ಯುಲ್ಲತಾ ದೇಗುಲ ಕಾರ್ಯನಿರ್ವಾಹಕಾಧಿಕಾರಿ

Post a Comment

Previous Post Next Post