ಬೇಲೂರು : ಯಾವುದೆ ಒಂದು ಕಾರ್ಯಕ್ರಮ, ಸಮಾರಂಭ, ಜಾತ್ರಾಮಹೋತ್ಸವ ಇತ್ಯಾದಿಗಳು ವಿಜೃಂಭಣೆಯಿಂದ, ಅರ್ಥಪೂರ್ಣವಾಗಿ ನಡೆಯಬೇಕಾದರೆ ಸಂಬಂಧಪಟ್ಟ ದೇಗುಲದ ಆಡಳಿತ, ಅಧಿಕಾರಿಗಳು ಹೆಚ್ಚಿನ ಆಸಕ್ತಿ, ಗಮನ ಹರಿಸಬೇಕಾದ್ದು ಅಗತ್ಯ.
![]() |
ಬೇಲೂರಿನ ವಿದ್ಯುತ್ ದೀಪಾಲಂಕಾರವಿಲ್ಲದ ಗುಡಿಗಳು |
ಅಲ್ಲದೆ ಇದಕ್ಕೆ ಪೂರಕವಾದ ಯೋಜನೆ, ಯೋಚನೆಗಳ ಅಗತ್ಯವೂ ಇರುತ್ತದೆ. ಆದರೆ ಇಲ್ಲಿನ ಶ್ರೀಚನ್ನಕೇಶವಸ್ವಾಮಿ ದೇವರ ಜಾತ್ರಾಮಹೋತ್ಸವಕ್ಕೆ ಅಳವಡಿಸಿರುವ ವಿದ್ಯುತ್ ದೀಪಾಲಂಕಾರದಲ್ಲಿ ಈ ನ್ಯೂನತೆ ಎದ್ದು ಕಾಣುತ್ತಿದೆ. ಕೊರೊನಾ ಕಾರಣದಿಂದ ಕಳೆದ ೨ ವರ್ಷದಿಂದ ದೇಗುಲದ ಒಳ ಆವರಣದಲ್ಲಿ ಸರಳವಾಗಿ ಆಚರಿಸಲಾಗಿದ್ದ ರಥೋತ್ಸವ ಈ ವರ್ಷ ವಿಜೃಂಭಣೆಯಿಂದ ಆಚರಿಸುವ ಉದ್ದೇಶ ಶಾಸಕರಾದಿಯಾಗಿ ಎಲ್ಲಾ ಹಂತದ ಅಧಿಕಾರಿಗಳದ್ದು.
ಇದೆ ಕಾರಣಕ್ಕೆ ದೇಗುಲಕ್ಕೆ ಹಾಗೂ ಪಟ್ಟಣದ ಸರ್ಕಾರಿ ಕಟ್ಟಡಗಳು ಹಾಗೂ ಮುಖ್ಯರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಿಸಲು ಕ್ರಮ ಕೈಗೊಳ್ಳಲಾಗಿದ್ದು ಪ್ರಮುಖವಾಗಿ ದೇಗುಲದಲ್ಲಿ ವಿದ್ಯುತ್ ದೀಪ ಅಲಂಕಾರ ಮಾಡುವಲ್ಲಿ ನಿರ್ಲಕ್ಷö್ಯ ಮಾಡಲಾಗಿದೆ. ಕೆಲವೊಂದು ಗುಡಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡದಿರುವುದು ಕಂಡುಬಂದಿದೆ. ಅಲ್ಲದೆ ದೇಗುಲದ ರಾಜಗೋಪುರಕ್ಕೆ ಅಳವಡಿಸಿರುವ ವಿದ್ಯುತ್ ಬಲ್ಭ್ಗಳೂ ಸಹ ಮಂಕಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕಜಾಲತಾಣದಲ್ಲಿ ಟೀಕೆಗಳ ಸುರಿಮಳೆಯಾಗುತ್ತಿದೆ.
![]() |
ಬಳ್ಳೂರು ಸ್ವಾಮಿಗೌಡ |
ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ, ಕೋವಿಡ್ ಹಿನ್ನಲೆಯಲ್ಲಿ ೨ ವರ್ಷದಿಂದ ನಿಂತಿದ್ದ ರಥೋತ್ಸವ ಇದೀಗ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದರೂ ಕಳಪೆ ಮಟ್ಟದ ವಿದ್ಯುತ್ ದೀಪಾಲಂಕಾರ ಮಾಡಿ ಬೇಲೂರಿನ ಮಾನವನ್ನು ವಿಶ್ವಮಟ್ಟದಲ್ಲಿ ಹರಾಜು ಹಾಕುವ ಹಂತಕ್ಕೆ ಕಾರ್ಯನಿರ್ವಾಹಕಾಧಿಕಾರಿ ಮಾಡಿದ್ದಾರೆ. ಜನರ ಆಕ್ರೋಶಕ್ಕೂ ಕಾರಣವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಗಮನ ಹರಿಸಬೇಕೆಂದು ಆಗ್ರಹಿಸಿದರು. ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.