ಬೇಲೂರಿನಲ್ಲಿ ಬೃಹತ್ ಆರೋಗ್ಯ ಮೇಳ ಆರೋಗ್ಯ-ಶಿಕ್ಷಣ ಕ್ಷೇತ್ರದಲ್ಲಿ ಜಾತಿ, ಧರ್ಮದ ಸೋಂಕು ಸಲ್ಲದು: ಶಾಸಕ

ಬೇಲೂರು : ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ತಾಲ್ಲೂಕು ಮಟ್ಟದ ಬೃಹತ್ ಆರೋಗ್ಯ ಮೇಳವನ್ನು ಆಯೋಜನೆ ಮಾಡಲಾಗಿತ್ತು.

ಬೇಲೂರಿನಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಆರೋಗ್ಯ ಮೇಳವನ್ನು ಶಾಸಕರು ಉದ್ಘಾಟಿಸಿದರು

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಆಡಳಿತ, ತಾ.ಪಂಚಾಯಿತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆದಿಚುಂಚನಗಿರಿ ವೈದ್ಯಕೀಯ ಸಂಸ್ಥೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಇವರಿಂದ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಎಸ್.ಲಿಂಗೇಶ್, ಸರಕಾರ ಆರೋಗ್ಯ ಹಾಗೂ ಶಿಕ್ಷಣಕ್ಕೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದ್ದು ಈ ಎರಡಕ್ಕೂ ಜಾತಿ, ಧರ್ಮದ ಸೋಂಕು ಇರಬಾರದು. ಇಂತಹ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ ಏರ್ಪಡಿಸುವುದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಕಾಯಿಲೆ ಬಂದಮೇಲೆ ತಪಾಸಣೆ ಮಾಡಿಸಿಕೊಳ್ಳುವುದಕ್ಕಿಂತ ಮುಂಚೆಯೆ ತಪಾಸಣೆ ಮಾಡಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ಹೊಂದಬಹುದಾಗಿದೆ ಎಂದ ಶಾಸಕರು, ತಾಯಿಮಗು ಆಸ್ಪತ್ರೆ ನಿರ್ಮಿಸುವ ಉದ್ದೇಶವಿದ್ದು ಪ್ರಸ್ತಾವನೆ ಸರಕಾರಕ್ಕೆ ಕಳುಹಿಸಲಾಗಿದೆ ಎಂದರು.

ಬೇಲೂರಿನಲ್ಲಿ ೧೦೦ ಹಾಸಿಗೆ ಆಸ್ಪತ್ರೆ, ೨೫ ಬೆಡ್ ಐಸಿಯು ಇದೆ. ಆಕ್ಸಿಜನ್ ಜನರೇಟರ್ ಮಾಡುವ ಯಂತ್ರ ಅಳವಡಿಸಲಾಗಿದೆ. ೨ ಕೋಟಿ ರೂ. ವೆಚ್ಚದಲ್ಲಿ ವೈದ್ಯರ ವಸತಿಗೃಹ ನಿರ್ಮಾಣಕ್ಕೆ ಯೋಜನೆ ಸಿದ್ದಪಡಿಸಿದ್ದೇವೆ. ಸಂಸದ ಪ್ರಜ್ವಲ್‌ರೇವಣ್ಣ ಅವರ ಒತ್ತಾಸೆ ಮೇರೆಗೆ ಈ ಮೇಳ ಆಯೋಜನೆ ಮಾಡಲಾಗಿದೆ. ಆಹಾರ ಪದ್ಧತಿ ತಿಳಿದುಕೊಳ್ಳಬೇಕು. ಸರಕಾರ ನೀಡುವ ಪುಕ್ಕಟೆ ಅಕ್ಕಿ ತಿಂದು ಡೊಳ್ಳುಹೊಟ್ಟೆ ಬೆಳೆಸಿಕೊಳ್ಳುವುದರಿಂದ ದೇಹದಲ್ಲಿ ಶಕ್ತಿ ಕುಂದುತ್ತಿದೆ. ಯಾರೋ ಮಾಡಿದ ತಪ್ಪಿಗೆ ಆಸ್ಪತ್ರೆ ಮೇಲೆ ಕಲ್ಲು ತೂರುವಂತ ಅವಿವೇಕಿಗಳು ನಮ್ಮಲ್ಲಿರುವುದು ಬೇಸರ ತರಿಸಿದೆ. ಆರೋಗ್ಯ ಮತ್ತು ಶಿಕ್ಷಣ ಜಾತಿ, ಧರ್ಮದ ಹೊರತಾಗಿ ಇರಬೇಕೆಂದರು.

ಬೇಲೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಲ್‌ಕೆಜಿ ಇಂದ ದ್ವಿತೀಯ ಪಿಯು ವರಗೆ ಕಲಿಕೆಗೆ ವ್ಯವಸ್ಥೆ ಮಾಡಲಾಗುವುದು ಹಾಗೂ ಪೇಟೆ ಸರಕಾರಿ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿ ಆಯುಷ್ ಆಸ್ಪತ್ರೆ ನಡೆಸಲಾಗುವುದು ಎಂದು ತಿಳಿಸಿದರು. ಪುರಸಭೆ ಅಧ್ಯಕ್ಷ ಸಿ.ಎನ್.ದಾನಿ ಮಾತನಾಡಿ, ದಿನನಿತ್ಯದ ಕೆಲಸದ ಒತ್ತಡದ ನಡುವೆ ಆರೋಗ್ಯದತ್ತ ಗಮನ ಕಡಿಮೆ ಕೊಡಲಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ಸಮಸ್ಯೆ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶಕುಮಾರ್ ಮಾತನಾಡಿ, ಕೋವಿಡ್ ೪ ನೇ ಅಲೆ ಬರುವ ಸಾಧ್ಯತೆ ಇದ್ದು ಎಚ್ಚರಿಕೆ ವಹಿಸಬೇಕೆಂದರು. ಈ ಸಂದರ್ಭ ತಾಲ್ಲೂಕು ವೈದ್ಯಾಧಿಕಾರಿ ಡಾ.ವಿಜಯ್, ಡಾ.ನರಸೇಗೌಡ, ಡಾ.ಹಬೀಬುಲ್ಲಾ, ತಾ.ಪಂ.ಇಒ ರವಿಕುಮಾರ್, ಎಪಿಎಂಸಿ ಅಧ್ಯಕ್ಷ ಸಿ.ಹೆಚ್.ಮಹೇಶ್, ಬಿಇಒ ಲೋಕೇಶ್, ಪುರಸಭೆ ಉಪಾಧ್ಯಕ್ಷೆ ಸಭಾಕೌಸರ್, ಪುರಸಭೆ ಸಿಒ ಸುಜಯಕುಮಾರ್, ಪುರಸಭ ಸದಸ್ಯರು, ಅಕ್ಷರದಾಸೋಹ ನಿರ್ದೇಶಕ ಈಶ್ವರ್, ಟಿಡಿಪಿಒ ದಿಲೀಪ್, ಹಿರಿಯ ಹಾಗೂ ಕಿರಿಯ ಆರೋಗ್ಯ ಸಹಾಯಕಿಯರು, ಸಹಾಯಕರು, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆಸ್ಪತ್ರೆ ನೌಕರರು ಇದ್ದರು. ತಾಸಿನಾ ನಿರೂಪಿಸಿದರು. ಸುಧಾ ಪ್ರಾರ್ಥಿಸಿದರು. 


Post a Comment

Previous Post Next Post