ಬೇಲೂರು : ಮುಖ್ಯಮಂತ್ರಿ ಬಸವರಾಜು ಬೊಮ್ಮಯಿರವರು ಕಾರ್ಯಕ್ರಮ ನಿಮಿತ್ತ ಹಾಸನದಿಂದ ಚಿಕ್ಕಮಗಳೂರು ನಗರಕ್ಕೆ ತೆರಳುವ ಮಾರ್ಗ ಮದ್ಯೆ ಬೇಲೂರು ಮೂಲಕ ಹಾಯ್ದು ಹೋಗುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ವಾಹನ ಬರುವಿಕೆ ಅರ್ಧ ಗಂಟೆ ಮುನ್ನವೇ ಬೇಲೂರು ಪಟ್ಟಣದ ನೆಹರುನಗರದಲ್ಲಿ ವಾಹನಗಳನ್ನು ಸ್ಥಗಿತಗೊಳಿಸಿದ್ದು, ಮುಖ್ಯಮಂತ್ರಿ ವಾಹನ ಸೇರಿದಂತೆ ಇನ್ನಿತರ ವಾಹನಗಳು ತೆರಳಿದ ಬಳಿಕ ನೆಹರುನಗರದಲ್ಲಿ ವಾಹನ ದಟ್ಟಣೆ ತೀವ್ರತೆ ಹೆಚ್ಚಾಗಿದ್ದು, ಟ್ರಾಫಿಕ್ ಕಂಟ್ರೋಲ್ ಮಾಡಲು ಇಲ್ಲಿನ ಪೋಲಿಸರು ಹರಸಾಹಸ ಪಡಬೇಕಾದ ಘಟನೆ ನಡೆಯಿತು.
ಮೊದಲೇ ಹೇಳಿ- ಕೇಳಿ ಮುಂಗಾರು ಜಡಿ ತುಂತುರು ಮಳೆಯಿಂದ ಜನತೆ ಮನೆ ಸೇರಿದರೆ ಸಾಕಪ್ಪ ಎನ್ನುವ ಸಂದರ್ಭದಲ್ಲಿಯೇ ಇಲ್ಲಿನ ಪೋಲಿಸರು ಹಾಸನದಿಂದ ಚಿಕ್ಕಮಗಳೂರು ನಗರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿರವರು ತೆರಳುವ ಕಾರಣದಿಂದ ನೆಹರುನಗರದಲ್ಲಿ ಸಂಪೂರ್ಣ ವಾಹನ ಸ್ಥಗಿತ ಮಾಡಿದ ದಿಸೆಯಲ್ಲಿ ಹಾಸನ ರಸ್ತೆ, ಚಿಕ್ಕಮಗಳೂರು ಮತ್ತು ಹಳೇಬೀಡು ರಸ್ತೆ ಸೇರಿದಂತೆ ಬೇಲೂರು ಪಟ್ಟಣದ ನೆಹರುನಗರದಿಂದ ಯಗಚಿ ಸೇತುವೆ ತನಕ ವಾಹನ ದಟ್ಟಣೆ ತೀವ್ರತೆ ಹೆಚ್ಚಾಗಿತ್ತು. ಇನ್ನೂ ಕೆಲವರು ಅಂತರಘಟ್ಟಮ್ಮ ದೇಗುಲದ ಅಡ್ಡದಾರಿಯಲ್ಲಿ ಪ್ರವೇಶಿಸಲು ಮುಂದಾಗಿ ಪೋಲಿಸರ ಸಿಟ್ಟಿಗೆ ಗುರಿಯಾಗಿದ್ದರು. ಮುಖ್ಯಮಂತ್ರಿ ತೆರಳಿದ ಬಳಿಕ ವಾಹನ ದಟ್ಟಣೆ ನಿಯಂತ್ರಣ ಮಾಡಲು ಇಲ್ಲಿನ ಪೋಲಿಸರು ಮಳೆಯ ನಡುವೆ ಹರ ಸಾಹಸ ಪಟ್ಟರೂ ಸತತ ಎರಡು ಗಂಟೆಯ ಬಳಿಕ ಟ್ರಾಫಿಕ್ ಸ್ವಲ್ಪ ಮಟ್ಟಿಗೆ ನಿಯಂತ್ರಣ ಕಂಡಿತ್ತು. ಸಿಎಂ ಚಿಕ್ಕಮಗಳೂರು ಪ್ರವಾಸ ಕುರಿತು ಕಳೆದ ದಿನದಿಂದಲೇ ಟ್ರಾಫಿಕ್ ಕಂಟ್ರೋಲ್ ಬಗ್ಗೆ ತಾಲೀಮು ನಡೆಸಿದರು.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಮೈಸೂರಿನಿಂದ ಬೇಲೂರಿಗೆ ಆಗಮಿಸಿದ ಪ್ರವಾಸಿ ನಂಜುಂಡಿ, ನಾವುಗಳು ಬೆಳಿಗ್ಗೆ ಬೇಲೂರು ವೀಕ್ಷಿಸಿ ಹಳೇಬೀಡು ತೆರಳುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಬರುತ್ತಾರೆ ಎಂದು ಒಂದು ಗಂಟೆ ಕಾಲ ವಾಹನ ತಡೆದಿದ್ದು, ಬಳಿಕ ಸಿಎಂ ತೆರಳಿದ ಬಳಿಕ ಸುಮಾರು ಒಂದುವರೆ ಗಂಟೆಯ ಟ್ರಾಫಿಕ್ ನಡುವೆ ಹಳೇಬೀಡಿಗೆ ತೆರಬೇಕಾದ ಹೀನ ಸ್ಥಿತಿ ಬಂದಿದೆ. ಏಕೆ? ಪೋಲಿಸರಿಗೆ ಪಕ್ಕಾ ಮಾಹಿತಿ ಇರಲ್ವಾ, ಒಂದು ಗಂಟೆ ತಡೆದರೆ ಟ್ರಾಫಿಕ್ ನಿಂದ ಎಷ್ಟು ತೊಂದರೆ ಎಂಬ ಬಗ್ಗೆ, ಇದ್ದರಿಂದ ಸ್ಥಳೀಯರು ಮತ್ತು ಪ್ರವಾಸಿಗರಿಗೆ ತೀವ್ರ ತೊಂದರೆಯಾಗಿದೆ. ನಮ್ಮ ಗೋಳು ಕೇಳುವರು ಯಾರು ಇಲ್ಲ, ಬಾಡಿಗೆ ವಾಹನದವರು ಟ್ರಾಫಿಕ್ ಸಮಸ್ಯೆ ಕೇಳುವುದಿಲ್ಲ, ಅವರಿಗೆ ಬಾಡಿಗೆ ನೀಡಬೇಕು ಎಂದು ತಮ್ಮ ಆಳಲು ಹೇಳಿಕೊಂಡರು.
ಬೈಪಾಸ್ ರಸ್ತೆಗೆ ಆಗ್ರಹ
:- ಹಾಸನ, ಚಿಕ್ಕಮಗಳೂರು ಮಾರ್ಗದಿಂದ ಹಲವಾರು ಜನಪ್ರತಿನಿಧಿಗಳು ತೆರಳುವ ಸಂದರ್ಭದಲ್ಲಿ ಜೀರೊ ಟ್ರಾಫಿಕ್ ಮಾಡುವುದು ಸಹಜವಾಗಿದೆ. ಈ ಹಿನ್ನೆಲೆಯಲ್ಲಿ ಬೇಲೂರು ಸಮೀಪದಲ್ಲಿ ಹಾಸನ ಚಿಕ್ಕಮಗಳೂರು ರಸ್ತೆಗೆ ಬೈಪಾಸ್ ರಸ್ತೆ ನಿರ್ಮಿಸಿದರೆ ಮಾತ್ರ ಸಮಸ್ಯೆ ಬಗೆಹರಿಸಲು ಸಾದ್ಯ ಅಲ್ಲದೆ ಹಲವಾರು ಬಾರಿ ಶಾಸಕರಿಗೆ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಮುಖ್ಯ ರಸ್ತೆ ಅಗಲೀಕರಣದ ಬಗ್ಗೆ ಮನವಿ ಮಾಡಿದರು ಸಹ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಅಗಲೀಕರಣಕ್ಕೆ ಮುಂಚಿತವಾಗಿ ಬದಲಿ ರಸ್ತೆಯನ್ನು ನಿರ್ಮಾಣ ಮಾಡಬೇಕು ಎಂದು ಕರವೇ ಅಧ್ಯಕ್ಷ ಬೋಜೇಗೌಡ ಹೇಳಿದರು.
